Site icon Vistara News

ಪಶ್ಚಿಮ ಬಂಗಾಳದಲ್ಲಿ ಮುಂದುವರಿದ ಹಿಂಸಾಚಾರ; ಹೂಗ್ಲಿಯಲ್ಲಿ ಕಲ್ಲು ತೂರಾಟ, ವಿಳಂಬವಾದ ರೈಲುಗಳ ಸಂಚಾರ

Violence In Hooghly West Bengal Stone Pelting At Railway Station

#image_title

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಶ್ರೀರಾಮನವಮಿ ದಿನದಿಂದ ಶುರುವಾದ ಹಿಂಸಾಚಾರ (West Bengal Violence) ಹಾಗೇ ಮುಂದುವರಿದಿದೆ. ನಿನ್ನೆ (ಏಪ್ರಿಲ್​4) ರಾತ್ರಿ ಹೂಗ್ಲಿ ಜಿಲ್ಲೆಯ ರಿಶ್ರಾ ಎಂಬಲ್ಲಿ ಮತ್ತೆ ಕಲ್ಲುತೂರಾಟವಾಗಿದೆ. ಇಲ್ಲಿನ ರೈಲ್ವೆ ಸ್ಟೇಶನ್​​ನ ಆಸ್ತಿಪಾಸ್ತಿಗಳನ್ನೆಲ್ಲ ಧ್ವಂಸ ಮಾಡಲಾಗಿದೆ. ರೈಲು ಮಾರ್ಗಗಳಲ್ಲಿ ಹಲವು ಕಡೆ ಕಲ್ಲು ತೂರಾಟ ಮಾಡಲಾಗಿದೆ. ಹೀಗಾಗಿ ಹೌರಾಹ್​-ಬಾಂದೇಲ್​​ ಮಾರ್ಗದಲ್ಲಿ ಸಂಚರಿಸಬೇಕಾಗಿದ್ದ ಎಕ್ಸ್​ಪ್ರೆಸ್​ ರೈಲುಗಳನ್ನು ಸುಮಾರು 3 ತಾಸುಗಳ ಕಾಲ ತಡೆಹಿಡಿಯಲಾಗಿತ್ತು. ಲೆವಲ್​ ಕ್ರಾಸಿಂಗ್​ ಬಳಿಯೆಲ್ಲ ಜೋರಾಗಿ ಕಲ್ಲು ತೂರಾಟ ನಡೆಯುತ್ತಿದ್ದ ಕಾರಣ ಈ ಕ್ರಮ ಕೈಗೊಳ್ಳಲಾಯಿತು. ದೂರದ ಊರುಗಳಿಗೆ ಸಂಚಾರ ಮಾಡಬೇಕಿದ್ದ ಹಲವು ರೈಲುಗಳು ವಿಳಂಬವಾಯಿತು. ಮತ್ತೆ ಮಧ್ಯರಾತ್ರಿ ಬಳಿಕವಷ್ಟೇ ರೈಲುಗಳ ಸಂಚಾರವನ್ನು ಸರಿಯಾಗಿ ಶುರು ಮಾಡಲಾಯಿತು ಎಂದು ಪೂರ್ವ ರೈಲ್ವೆ ವಿಭಾಗದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಕೌಶಿಕ್​ ಮಿತ್ರಾ ಹೇಳಿದ್ದಾರೆ.

ರಿಶ್ರಾ ಹಿಂಸಾಚಾರದ ಬಗ್ಗೆ ಬಿಜೆಪಿ ಶಾಸಕ ಸುವೇಂದು ಅಧಿಕಾರಿ ಟ್ವೀಟ್ ಮಾಡಿ, ‘ಹೂಗ್ಲಿಯ ರಿಶ್ರಾದ ರೈಲ್ವೆ ಸ್ಟೇಶನ್​ ಬಳಿ ಕಲ್ಲುತೂರಾಟ ನಡೆಯುತ್ತಿದೆ. ಬಾಂಬ್​ಗಳ ಸ್ಫೋಟ ಉಂಟಾಗುತ್ತಿದೆ. ಹೌರಾಹ್​-ಬಾರ್ದಮಾನ್​ ಮಾರ್ಗದಲ್ಲಿ ಹಲವು ಸ್ಥಳೀಯ ಮತ್ತು ಎಕ್ಸ್​ಪ್ರೆಸ್​ ರೈಲುಗಳ ಸಂಚಾರ ರದ್ದುಗೊಂಡಿದೆ. ರೈಲ್ವೆ ಪೊಲೀಸ್​ ಪಡೆಗಳು ಅದನ್ನು ನಿಯಂತ್ರಿಸಿದ ಮೇಲೆ ಅಂತೂ ರೈಲು ಸಂಚಾರ ಮತ್ತೆ ಶುರುವಾಯಿತು. ರಿಶ್ರಾ ಹೊತ್ತಿ ಉರಿಯುತ್ತಿದ್ದರೆ, ಸರ್ಕಾರ ದಿಘಾ ಬೀಚ್​​ನಲ್ಲಿ ಎಂಜಾಯ್​ ಮಾಡುತ್ತಿದೆ’ ಎಂದು ವ್ಯಂಗ್ಯವಾಡಿದ್ದಾರೆ. ಇಂದು ಮಮತಾ ಬ್ಯಾನರ್ಜಿಯವರು ಕರಾವಳಿ ನಗರವಾದ ದಿಘಾದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅದನ್ನೇ ಸುವೇಂದು ಅಧಿಕಾರಿ ಹೀಗೆ ವ್ಯಂಗ್ಯವಾಗಿ ಹೇಳಿದ್ದಾರೆ.

ಇದನ್ನೂ ಓದಿ: Bengal Violence: ಆಜಾನ್‌ ಕೂಗುವಾಗಲೇ ರಾಮನವಮಿ ಮೆರವಣಿಗೆ ಏಕೆ? ಹಿಂಸೆಗೆ ಬಂಗಾಳ ಮೌಲ್ವಿ ಸಮರ್ಥನೆ

ಶ್ರೀರಾಮನವಮಿ ದಿನದಿಂದಲೂ ಪಶ್ಚಿಮ ಬಂಗಾಳದ ಹೂಗ್ಲಿ ಮತ್ತು ಹೌರಾಹ್​ನಲ್ಲಿ ಹಿಂಸಾಚಾರ ಕೊತಕೊತ ಕುದಿಯುತ್ತಿದೆ. ಕೋಮುಗಲಭೆ ಮಿತಿಮೀರಿದೆ. ಗುರುವಾರವಂತೂ ಹಲವು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ನಾಶಮಾಡಲಾಗಿದೆ. ಹೂಗ್ಲಿಯಲ್ಲಿ ಶ್ರೀರಾಮನವಮಿ ನಿಮಿತ್ತ ಬಿಜೆಪಿ ಹಮ್ಮಿಕೊಂಡಿದ್ದ ಮೆರವಣಿಗೆ ಮೇಲೆ ಕೂಡ ಕಲ್ಲು ತೂರಾಟ ನಡೆದು, ಶಾಸಕ ಭೀಮನ್ ಘೋಷ್​ ಗಾಯಗೊಂಡಿದ್ದರು. ಗಲಭೆಕೋರರನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಪ್ರಯೋಗ ಮಾಡುತ್ತಿದ್ದಾರೆ. ಸೂಕ್ಷ್ಮ ಪ್ರದೇಶಗಳಲ್ಲಿ ಇಂಟರ್​ನೆಟ್​ ಸೇವೆಯನ್ನು ಕಡಿತಗೊಳಿಸಲಾಗಿದೆ.

ಈ ಮಧ್ಯೆ ಪಶ್ಚಿಮ ಬಂಗಾಳದ ಹಿಂಸಾಚಾರ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ನಡುವೆ ರಾಜಕೀಯ ಕೆಸರೆರೆಚಾಟಕ್ಕೆ ಕಾರಣವಾಗಿದೆ. ಮುಸ್ಲಿಮರು ಹೆಚ್ಚಾಗಿರುವ ಪ್ರದೇಶದಲ್ಲಿ ಬಿಜೆಪಿ ಯಾಕೆ ಶ್ರೀರಾಮನವಮಿ ಮೆರವಣಿಗೆ ನಡೆಸಬೇಕು. ಇದು ಬಿಜೆಪಿಯವರದ್ದೇ ತಪ್ಪು ಎಂದು ಸಿಎಂ ಮಮತಾ ಬ್ಯಾನರ್ಜಿ ಕಿಡಿಕಾರಿದ್ದಾರೆ. ಇನ್ನೊಂದೆಡೆ ಬಿಜೆಪಿಯವರು, ಮಮತಾ ಬ್ಯಾನರ್ಜಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಮನವಮಿ ದಿನ ಹಿಂದೂಗಳ ಮೇಲೆ ಹಲ್ಲೆ ನಡೆಯುತ್ತಿದ್ದರೆ, ಸರ್ಕಾರ ನೋಡಿಕೊಂಡು ಕುಳಿತಿದೆ. ಪಶ್ಚಿಮ ಬಂಗಾಳ, ಪಾಕಿಸ್ತಾನವಾಗುತ್ತಿದೆ ಎಂದು ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: West Bengal: ರಾಮ ನವಮಿ ಮೆರವಣಿಗೆ ಮೇಲೆ ಕಲ್ಲು ಎಸೆತ, ಬಿಜೆಪಿ ಶಾಸಕನಿಗೆ ಗಾಯ

Exit mobile version