Site icon Vistara News

Manipur Violence: ಮಣಿಪುರದಲ್ಲಿ ಮತ್ತೆ ಹಿಂಸಾಚಾರ; ಖ್ಯಾತ ಗೀತಸಾಹಿತಿ ಸೇರಿ 8 ಜನ ಗುಂಡಿಗೆ ಬಲಿ

Manipur Violence

Police Officer Shot Dead by Militants in Manipur's Moreh

ಇಂಫಾಲ: ಮಣಿಪುರದಲ್ಲಿ ಕೆಲ ದಿನಗಳಿಂದ ತಹಬಂದಿಗೆ ಬಂದಿದ್ದ ಪರಿಸ್ಥಿತಿ ಈಗ ಮತ್ತೆ ಬಿಗಡಾಯಿಸಿದೆ. ಮಣಿಪುರದ ಹಲವೆಡೆ ಮತ್ತೆ ಹಿಂಸಾಚಾರ (Manipur Violence) ಭುಗಿಲೆದ್ದಿದ್ದು, ಕುಕಿ ಖ್ಯಾತ ಗೀತಸಾಹಿತಿ ಸೇರಿ ಎಂಟು ಜನ ಮೃತಪಟ್ಟಿದ್ದಾರೆ. ಹಾಗೆಯೇ, 18 ಮಂದಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಗಾಗಿ, ಮಣಿಪುರದಲ್ಲಿ ಮತ್ತೆ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಆಗಸ್ಟ್‌ 29ರಿಂದಲೇ ವಿಷ್ಣುಪುರ ಹಾಗೂ ಚುರಚಂದ್‌ಪುರ ಜಿಲ್ಲೆಗಳಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಕುಕಿ ಹಾಗೂ ಮೈತೈ ಸಮುದಾಯದವರ ಮಧ್ಯೆ ಗುಂಡಿನ ಚಕಮಕಿ ನಡೆದಿದೆ. ಇದೇ ವೇಳೆ ಕುಕಿ ಸಮುದಾಯದ ಆರು ಬಂಡುಕೋರರು ಹತ್ಯೆಗೀಡಾಗಿದ್ದಾರೆ. ಹಾಗೆಯೇ, ಕುಕಿ ಸಮುದಾಯದವರೇ ಆದ ಖ್ಯಾತ ಗೀತ ಸಾಹಿತಿ ಎಲ್‌.ಎಸ್‌.ಮಂಗ್‌ಬೋಯಿ ಲುಂಗ್ಡಿಮ್‌ (42) ಅವರು ಕೂಡ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಪರಿಸ್ಥಿತಿ ಕೈಮೀರಿ ಹೋಗುತ್ತಲೇ ಮುಖ್ಯಮಂತ್ರಿ ಎನ್‌. ಬಿರೇನ್‌ ಸಿಂಗ್‌ ಅವರು ಜನರಿಗೆ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ. ಇನ್ನು ಹಿಂಸಾಚಾರವನ್ನು ನಿಗ್ರಹಿಸಲು ಭದ್ರತಾ ಸಿಬ್ಬಂದಿ ಕೂಡ ಕಾರ್ಯಾಚರಣೆ ಕೈಗೊಂಡಿದ್ದು, ಇದೇ ವೇಳೆ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳು ಹಾಗೂ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ. ಎರಡೂ ಜಿಲ್ಲೆಗಳಲ್ಲಿ ಇಂಟರ್‌ನೆಟ್‌ ಸ್ಥಗಿತ, ನಿರ್ಬಂಧ ಸೇರಿ ಹಲವು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Manipur Violence: ಮಣಿಪುರದ ಲೈಂಗಿಕ ದೌರ್ಜನ್ಯ ಪ್ರಕರಣಗಳ ವಿಚಾರಣೆಗೆ ಸಿಬಿಐನಿಂದ 53 ಅಧಿಕಾರಿಗಳ ತಂಡ ರೆಡಿ!

ಮಣಿಪುರದಲ್ಲಿ ಕುಕಿ ಹಾಗೂ ಮೈತೈ ಸಮುದಾಯಗಳ ಮಧ್ಯೆ ಮೇ 3ರಿಂದಲೂ ಹಿಂಸಾಚಾರ ಭುಗಿಲೆದ್ದಿದೆ. ಇದುವರೆಗೆ ಮಣಿಪುರದಲ್ಲಿ ನಡೆದ ಹಿಂಸಾಚಾರಗಳಿಂದ ಸುಮಾರು 150 ಜನ ಮೃತಪಟ್ಟಿದ್ದು, ಸಾವಿರಾರು ಜನ ಗಾಯಗೊಂಡಿದ್ದಾರೆ. ಮಣಿಪುರ ಬಿಕ್ಕಟ್ಟಿನ ಕುರಿತು ಮಾತುಕತೆಗೆ ಸಿದ್ಧ ಎಂದು ಈಗಾಗಲೇ ಕೇಂದ್ರ ಸರ್ಕಾರ ತಿಳಿಸಿದರೂ ಹಿಂಸಾಚಾರ ನಿಲ್ಲುತ್ತಿಲ್ಲ. ಅಲ್ಲದೆ, ಮಣಿಪುರ ಹಿಂಸಾಚಾರ ಪ್ರಕರಣವು ಸಂಸತ್‌ ಅಧಿವೇಶನದಲ್ಲೂ ಪ್ರತಿಧ್ವನಿಸಿತ್ತು. ದೇಶಾದ್ಯಂತ ಸುದ್ದಿಯಾದ ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣವನ್ನು ಈಗಾಗಲೇ ಕೇಂದ್ರ ಸರ್ಕಾರವು ಸಿಬಿಐ ತನಿಖೆಗೆ ವಹಿಸಿದೆ.

Exit mobile version