ನವದೆಹಲಿ: ಇಲ್ಲಿನ ತ್ಯಾಗರಾಜ ಸ್ಟೇಡಿಯಂನಿಂದ ಸಂಜೆ ಏಳು ಗಂಟೆಗೇ ಕ್ರೀಡಾಳುಗಳನ್ನೆಲ್ಲ ಓಡಿಸಿ ನಾಯಿ ಜತೆ ವಾಕ್ ಮಾಡುತ್ತಿದ್ದ ಐಎಎಸ್ ಅಧಿಕಾರಿಗಳಿಬ್ಬರನ್ನು ಲಡಾಖ್ ಮತ್ತು ಅರುಣಾಚಲ ಪ್ರದೇಶಕ್ಕೆ ಟ್ರಾನ್ಸ್‌ಫರ್ ಮಾಡಲಾಗಿದೆ. ಅಧಿಕಾರಿಗಳ ಧಿಮಾಕಿನ ಬಗ್ಗೆ ಆಕ್ರೋಶ ಕೇಳಿ ಬರುತ್ತಿದ್ದಂತೆಯೇ ಕ್ರಮ ಕೈಗೊಂಡ ರಾಜ್ಯ ಮತ್ತು ಕೇಂದ್ರ ಸರಕಾರಗಳ ನಡೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರಿ ಪ್ರಶಂಸೆ ಕೇಳಿಬಂದಿದೆ. ಜತೆಗೆ ದೇಶಾದ್ಯಂತ ನಡೆಯುತ್ತಿರುವ ಐಎಎಸ್ ಅಧಿಕಾರಿಗಳ ಅಧಿಕಾರ ದುರುಪಯೋಗವೂ ಚರ್ಚೆಗೆ ಒಳಗಾಗಿದೆ. ಇದರ ನಡುವೆಯೇ ಐಎಎಸ್ ಅಧಿಕಾರಿ ಸಂಜೀವ್ ಖಿರ್ವಾರ್ ಅವರು ಲಡಾಖ್‌ಗೆ, ಅವರ ಪತ್ನಿ ರಿಂಕು ದುಗ್ಗಾ ಅವರು ಅರುಣಾಚಲ ಪ್ರದೇಶಕ್ಕೆ ಗಂಟುಮೂಟೆ ಕಟ್ಟುವ ಸಿದ್ಧತೆಯಲ್ಲಿದ್ದಾರೆ. ಈ ನಡುವೆ, ಅಧಿಕಾರಿಗಳ ಜತೆ ಖಾಲಿ ಸ್ಟೇಡಿಯಂನಲ್ಲಿ ಧಿಮಾಕಿನ ವಾಕಿಂಗ್ ಮಾಡುತ್ತಿದ್ದ ನಾಯಿ ಎಲ್ಲೋಯ್ತು? ಅದು ಮುಂದೆ ಯಾರ ಜತೆ ಹೋಗುತ್ತದೆ? ಅದರ ಕಥೆ ಏನಾಗಲಿದೆ ಎನ್ನುವ ಚರ್ಚೆ ಜಾಲ ತಾಣದಲ್ಲಿ ಜೋರಾಗಿ ನಡೆಯುತ್ತಿದೆ.
ಒಬ್ಬೊಬ್ಬರು ಒಂದೊಂದು ದಿಕ್ಕಿಗೆ ಹೋಗುವ ಈ ಹೊತ್ತಲ್ಲಿ ನಾಯಿಯನ್ನು ಯಾರು ತೆಗೆದುಕೊಂಡು ಹೋಗುತ್ತಾರೆ ಎನ್ನುವ ಬಗ್ಗೆ ಎಲ್ಲರಿಗೂ ಕುತೂಹಲವಿದೆ. ʻʻಇಷ್ಟೆಲ್ಲ ಆಗಿದ್ದು ನಿಮ್ಮ ನಾಯಿ ಪ್ರೀತಿಯಿಂದ. ಹಾಗಾಗಿ ನೀವೇ ನಾಯಿನ ಹಿಡ್ಕೊಂಡು ಹೋಗಿ,ʼ ಅಂತ ಪತ್ನಿ ಗಂಡನಿಗೆ ಹೇಳಬಹುದು ಎನ್ನುವುದು ಹೆಚ್ಚಿನವರ ಊಹೆ. ಆದರೆ, ನಾಯಿ ಯಾರಿಗಿಷ್ಟ ಅಂತ ಯಾರಿಗೆ ಗೊತ್ತು, ಪತ್ನಿಗೇ ತುಂಬ ಇಷ್ಟ ಇದ್ದಿರಬಹುದು. ಹಾಗಾಗಿ ಅವರೇ ಕರೆದುಕೊಂಡು ಹೋಗಬಹುದು ಎನ್ನುವುದು ಇನ್ನೊಂದು ಕ್ಯಾಲ್ಕುಲೇಷನ್. ಇನ್ನು ಕೆಲವರದ್ದು ʻಸ್ವಲ್ಪ ಟೈಮ್ ಅಲ್ಲಿ, ಸ್ವಲ್ಪ ಟೈಮ್ ಇಲ್ಲಿʼ ಎಂಬ ಲೆಕ್ಕಾಚಾರ. ಇನ್ನು ಕೆಲವರಂತೂ ನಾಯಿಯ ಸಹವಾಸವೇ ಬೇಡ ಎಂದು ಬಿಟ್ಟೇ ಹೋಗಬಹುದಾ ಎಂದು ಊಹೆ ಮಾಡುತ್ತಿದ್ದಾರೆ. ನೆಟ್ಟಿಗರೊಬ್ಬರು ಅಧಿಕಾರಿಗಳಿಬ್ಬರು ಎರಡು ಸ್ಕೂಟರ್‌ನಲ್ಲಿ ಹೋಗುವುದು, ನಾಯಿ ಎರಡೂ ಸ್ಕೂಟರ್‌ನಲ್ಲಿ ಕಾಲು ಚಾಚಿ ಕುಳಿತುಕೊಂಡಿರುವ ಚಿತ್ರವನ್ನು ಹಾಕಿ ಕಾಲೆಳೆದಿದ್ದಾರೆ.