ನವದೆಹಲಿ: ಬ್ರಿಟಿಷ್ ಕೌನ್ಸಿಲ್‌ನಲ್ಲಿ ಉದ್ಯೋಗದಲ್ಲಿದ್ದ ಇಂಗ್ಲಿಷ್ ಸಾಹಿತ್ಯ ಎಂಎ ಪದವೀಧರ ಯುವತಿಯೊಬ್ಬಳು ಅದೆನ್ನೆಲ್ಲ ತೊರೆದು, ತನ್ನ ಕನಸಿನ ಟೀ ಅಂಗಡಿಯೊಂದನ್ನು ದಿಲ್ಲಿಯ ಕಂಟೋನ್ಮೆಂಟ್ ಪ್ರದೇಶದ ಗೋಪಿನಾಥ್ ಬಜಾರ್‌ನಲ್ಲಿ ತೆರೆದಿದ್ದಾರೆ(Viral News). ಯುವತಿಯ ಈ ಉದ್ಯಮಶೀಲತೆಯ ಕತೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಭಾರತದಲ್ಲಿ ಕಳೆದ ಐದಾರು ವರ್ಷದಲ್ಲಿ ನವೋದ್ಯಮಗಳ ಭರಾಟೆ ಜೋರಾಗಿದೆ. ಹೀಗಾಗಿ, ದೇಶದ ಯುವಕರಲ್ಲಿ ಉದ್ಯಮಶೀಲತೆಯು ಹೆಚ್ಚಾಗಿರುವುದನ್ನು ಕಾಣಬಹುದು. ಹಾಗಾಗಿಯೇ, ಸಾಕಷ್ಟು ಓದಿಕೊಂಡವರು, ಒಳ್ಳೆಯ ಸಂಬಳದಲ್ಲಿ ಇದ್ದವರು, ತಮ್ಮ ಕನಸಿನ ವ್ಯಾಪಾರ ವಹಿವಾಟಕ್ಕೆ ಮುಂದಾಗುತ್ತಿದ್ದಾರೆ. ಈ ಸಾಲಿಗೆ ಶರ್ಮಿಷ್ಠಾ ಘೋಷ್ ಸೇರಿದ್ದಾರೆ. ಇಂಗ್ಲಿಷ್ ಸಾಹಿತ್ಯದಲ್ಲಿ ಎಂಎಂ ಓದಿಕೊಂಡಿರುವ ಶರ್ಮಿಷ್ಠಾ ಅವರು ಬ್ರಿಟಿಷನ್ ಕೌನ್ಸಿಲ್‌ನಲ್ಲಿ ಒಳ್ಳೆಯ ಜಾಬ್ ಮಾಡುತ್ತಿದ್ದರು. ಆದರೆ, ಈಗ ಅದನ್ನೆಲ್ಲ ಬಿಟ್ಟು ಟೀ ಸ್ಟಾಲ್ ಓಪನ್ ಮಾಡಿದ್ದಾರೆ.
ಲಿಂಕ್ಡ್‌ಇನ್‌ನಲ್ಲಿ ಶರ್ಮಿಷ್ಠಾ ಅವರ ಈ ಕತೆಯನ್ನು ನಿವೃತ್ತ ಬ್ರಿಗೇಡಿಯರ್ ಸಂಜಯ್ ಖನ್ನಾ ಅವರು ಷೇರ್ ಮಾಡಿಕೊಂಡಿದ್ದಾರೆ. ಚಿಕ್ಕದಾಗಿ ಆರಂಭಿಸಿರುವ ಟೀ ಸ್ಟಾಲ್ ಅನ್ನು ಮುಂದೆ ವಿಸ್ತರಿಸುವ ಗುರಿ ಇದೆ. ಚಾಯೋಸ್ ರೀತಿಯಲ್ಲಿ ಬೃಹತ್ ಪ್ರಮಾಣದಲ್ಲಿ ಟೀ ಸ್ಟಾಲ್ ಉದ್ಯಮವನ್ನು ಬೆಳೆಸುವುದು ಶರ್ಮಿಷ್ಠಾ ಅವರ ಉದ್ದೇಶವಾಗಿದೆ ಎಂದು ಖನ್ನಾ ಅವರು ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಲುಫ್ತಾನ್ಸ್‌ನಲ್ಲಿ ಕೆಲಸ ಮಾಡುತ್ತಿರುವ ಭಾವನಾ ರಾವ್ ಎಂಬುವವರು ಮತ್ತೊಬ್ಬರು ಪಾರ್ಟ್ನರ್ ಇದ್ದಾರೆ. ಚಾಯ್ ಸ್ಟಾಲ್‌ನಲ್ಲಿ ತಮ್ಮ ಮನೆಯ ಕೆಲಸದಾಕೆಯನ್ನು ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದು, ಅವರಿಗೆ ಹೆಚ್ಚುವರಿ ಕೂಲಿಯನ್ನು ಕೊಡುತ್ತಿದ್ದಾರೆ. ಸಂಜೆ ಹೊತ್ತು ಬಂದು ಚಿಕ್ಕ ಮತ್ತು ತಾತ್ಕಾಲಿಕ ಟೀ ಶಾಪ್ ಅನ್ನು ಓಪನ್ ಮಾಡುತ್ತಾರೆ, ರಾತ್ರಿ ಹೊತ್ತಿಗೆ ವ್ಯಾಪಾರ ಮುಗಿಸಿಕೊಂಡು ಹೋಗುತ್ತಾರೆ ಎಂದು ಬರೆದುಕೊಂಡಿದ್ದಾರೆ. ಯುವತಿಯ ಈ ಉದ್ಯಮಶೀಲತೆಗೆ ಸಾಕಷ್ಟು ಮೆಚ್ಚುಗೆ ದೊರೆತಿದೆ.
ಇದನ್ನೂ ಓದಿ | StartUp Pavilion | ನವೋದ್ಯಮಗಳ ಸ್ಥಾಪನೆಗೆ ಮೈಸೂರು ಪ್ರಶಸ್ತ ಸ್ಥಳ: ಯದುವೀರ ಒಡೆಯರ್