ಪಟನಾ: ಪ್ರೀತಿಯಲ್ಲಿ ಬಿದ್ದ ಮೇಲೆ, ಆಕೆಯನ್ನು ಆತ, ಆತನನ್ನು ಆಕೆ ಭೇಟಿಯಾಗಬೇಕು ಎಂದು ತೀರ್ಮಾನಿಸಿದ ಮೇಲೆ ಎಂತಹ ಸಂಭಾವಿತ ಅಥವಾ ಎಂತಹ ಸಂಭಾವಿತೆಯೂ ನೂರು ಸಾಹಸ ಮಾಡುತ್ತಾಳೆ. ಪ್ರೇಮಿಯನ್ನು ಭೇಟಿಯಾಗಲು ಇನ್ನಿಲ್ಲದ ಕಸರತ್ತು ಮಾಡುತ್ತಾರೆ. ಇದಕ್ಕೆ ನಿದರ್ಶನ ಎಂಬಂತೆ, ಬಿಹಾರದ ವೆಸ್ಟ್ ಚಂಪಾರಣ್ ಜಿಲ್ಲೆಯಲ್ಲಿ ಯುವತಿಯೊಬ್ಬಳು ಪ್ರಿಯತಮನನ್ನು (Lover) ಭೇಟಿಯಾಗಲು ಇಡೀ ಊರಿಗೇ ಸರಬರಾಜು ಆಗುತ್ತಿದ್ದ ಕರೆಂಟ್ ಕಟ್ (Power Cut) ಮಾಡಿದ್ದಾಳೆ. ಪ್ರತಿ ಬಾರಿ (Viral News) ಆತನನ್ನು ಭೇಟಿಯಾಗಲು ವಿದ್ಯುತ್ ಕಟ್ ಮಾಡಿದ್ದಾಳೆ.
ಹೌದು, ವೆಸ್ಟ್ ಚಂಪಾರಣ್ ಜಿಲ್ಲೆಯ ಗ್ರಾಮವೊಂದರ ಪ್ರೀತಿ ಕುಮಾರಿ ಎಂಬ ಯುವತಿಯು ಪಕ್ಕದೂರಿನ ರಾಜಕುಮಾರ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆದರೆ, ಇಬ್ಬರೂ ಭೇಟಿಯಾಗಲು ಎಲ್ಲಿ ಊರಿನ ಜನ ನೋಡಿಬಿಡುತ್ತಾರೋ, ಮನೆಯವರಿಗೆ ಹೇಳುತ್ತಾರೋ ಎಂಬ ಭಯ ಕಾಡುತ್ತಿತ್ತು. ಇದರಿಂದಾಗಿ ಆಕೆಯು ಆತನನ್ನು ಭೇಟಿಯಾಗಲು ಪ್ರತಿ ಬಾರಿ ಊರಿನ ವಿದ್ಯುತ್ ಕಡಿತಗೊಳಿಸುತ್ತಿದ್ದಳು. ಇವರ ಪ್ರೀತಿಯ ಭೇಟಿ ಮುಗಿಯುವತನಕ ಊರಿನ ಜನ ಕತ್ತಲಲ್ಲೇ ಸಮಯ ದೂಡಬೇಕಿತ್ತು.
ಸಿಕ್ಕಿಬಿದ್ದ ಪ್ರಣಯ ಪಕ್ಷಿಗಳು
ಪ್ರತಿ ಬಾರಿ ವಿದ್ಯುತ್ ಕಡಿತವಾದಾಗಲೂ ಊರಿನ ಜನ ಅಧಿಕಾರಿಗಳಿಗೆ ಕರೆ ಮಾಡುತ್ತಿದ್ದರು. ನಮ್ಮ ಕಡೆಯಿಂದ ಏನೂ ಸಮಸ್ಯೆ ಇಲ್ಲ ಎಂದು ಅಧಿಕಾರಿಗಳು ತಿಳಿಸುತ್ತಿದ್ದರು. ಬೇರೆ ಊರಿನಲ್ಲಿ ಇರುವ ಕರೆಂಟ್ ನಮ್ಮ ಊರಿನಲ್ಲಿ ಏಕಿಲ್ಲ ಎಂಬ ಪ್ರಶ್ನೆ ಜನರನ್ನು ಕಾಡುತ್ತಿತ್ತು. ಆದರೆ, ಕೆಲ ದಿನಗಳ ಹಿಂದಷ್ಟೇ ವಿದ್ಯುತ್ ಕಟ್ ಮಾಡಿ, ರಾಜಕುಮಾರ್ ಜತೆ ಮಾತನಾಡುತ್ತಿದ್ದಾಗ ಪ್ರೀತಿ ಕುಮಾರಿಯ ಸಾಹಸವು ಜನರಿಗೆ ಗೊತ್ತಾಗಿದೆ.
ಇದನ್ನೂ ಓದಿ: Manipur Violence: ಮಹಿಳೆಯರ ಬೆತ್ತಲೆ ಮೆರವಣಿಗೆ ಬೆನ್ನಲ್ಲೇ, ಕುಕಿ ವ್ಯಕ್ತಿಯ ಕತ್ತರಿಸಿದ ತಲೆ ಇರುವ ವಿಡಿಯೋ ವೈರಲ್
ಪ್ರೀತಿ-ಪ್ರೇಮದ ವಿಷಯ ಗೊತ್ತಾಗಿದ್ದಷ್ಟೇ ಅಲ್ಲ, ಎರಡೂ ಊರಿನ ಗ್ರಾಮಸ್ಥರ ಮಧ್ಯೆ ಗಲಾಟೆ ನಡೆದಿದೆ. ಪ್ರೀತಿಯನ್ನು ಅರಸಿ ಬಂದಿದ್ದ ಯುವಕನಿಗೆ ಗ್ರಾಮಸ್ಥರು ಥಳಿಸಿದ್ದಾರೆ. ಪ್ರಿಯಕರನ ಮೇಲೆ ಹಲ್ಲೆ ನಡೆಯುತ್ತಿರುವುದನ್ನು ನೋಡಿ ಸಹಿಸದ ಯುವತಿಯು ತಮ್ಮೂರಿನ ಜನರಿಗೇ ಬೈದಿದ್ದಾಳೆ. ಕೊನೆಗೆ ಯುವಕ ಹಾಗೂ ಯುವತಿಯ ಪ್ರೀತಿಯ ಹಠವನ್ನು ಕಂಡ ಗ್ರಾಮಸ್ಥರು ಇಬ್ಬರಿಗೂ ಮದುವೆ ಮಾಡಿಸಿದ್ದಾರೆ. ಆ ಮೂಲಕ ಕದ್ದು ಮುಚ್ಚಿ ನಡೆಯುತ್ತಿದ್ದ ಪ್ರೀತಿಯ ಪ್ರಹಸನವನ್ನು ಮದುವೆಯಲ್ಲಿ ಅಂತ್ಯಗೊಳಿಸಿದ್ದಾರೆ. ಇನ್ನು ಮೇಲಾದರೂ ಕರೆಂಟ್ ಕಟ್ ಮಾಡಬೇಡಮ್ಮ ಎಂದು ಯುವತಿಗೆ ಜನ ಮನವಿ ಮಾಡಿದ್ದಾರಂತೆ.