ಪಟನಾ: ಮದುವೆಯಾದ ಹೆಂಡತಿ ಇದಕ್ಕೂ ಮೊದಲು ಬೇರೊಬ್ಬನನ್ನು ಪ್ರೀತಿಸುತ್ತಿದ್ದಳು. ಪರಿಸ್ಥಿತಿಯ ಒತ್ತಾಯಕ್ಕೆ ಮಣಿದು ನನ್ನನ್ನು ಮದುವೆಯಾದಳು ಎಂಬುದನ್ನು ತಿಳಿದ ಆತ, ತನ್ನ ಹೆಂಡತಿಯು ಹಳೆಯ ಲವ್ವರ್ ಜತೆ ಒಂದಾಗಿಸಲು ಮುಂದಾಗುತ್ತಾನೆ. ಸಲ್ಮಾನ್ ಖಾನ್, ಐಶ್ವರ್ಯ ರೈ ಬಚ್ಚನ್ ಹಾಗೂ ಅಜಯ್ ದೇವಗನ್ ಅಭಿನಯದ ಹಮ್ ದಿಲ್ ದೇ ಚುಕೆ ಸನಮ್ ಸಿನಿಮಾದ ಕತೆ ಇದು. ಆದರೆ, ಈ ಬಾಲಿವುಡ್ ಸಿನಿಮಾದ ಕತೆಯನ್ನೇ ಹೋಲುವ ಘಟನೆ ಬಿಹಾರದಲ್ಲಿ ನಡೆದಿದೆ. ಹೆಂಡತಿಯು ಹಳೆಯ ಲವ್ವರ್ ಜತೆ ಇರುವುದನ್ನು ಕಂಡ ಪತಿಯು ಆಕೆಯನ್ನು ಹಳೆಯ ಲವ್ವರ್ ಜತೆ (Viral News) ಮದುವೆ ಮಾಡಿದ್ದಾರೆ. ಆದರೆ, ಒತ್ತಾಯಪೂರ್ವಕವಾಗಿ ಮದುವೆ ಮಾಡಿಸಿದ್ದು, ಚರ್ಚೆಗೆ ಗ್ರಾಸವಾಗಿದೆ.
ಬಿಹಾರದ ನಾವಡಾ ಜಿಲ್ಲೆಯ ಗ್ರಾಮವೊಂದರಲ್ಲಿ ಮಹಿಳೆಯು ರಾತ್ರಿ ತನ್ನ ಹಳೆಯ ಲವ್ವರ್‌ನನ್ನು ಭೇಟಿಯಾಗಲು ತೆರಳಿದ್ದಾಳೆ. ಗಂಡನು ಕೆಲಸಕ್ಕೆ ಹೋದ ಕಾರಣ ಆಕೆ ಪ್ರಿಯತಮನನ್ನು ಭೇಟಿಯಾಗಲು ಹೋಗಿದ್ದಾಳೆ. ಹೀಗೆ ಭೇಟಿ ಮಾಡಿದಾಗ ಮಹಿಳೆಯ ಗಂಡನ ಸಂಬಂಧಿಕರು ಮಹಿಳೆಯನ್ನು ಆಕೆಯ ಲವ್ವರ್ ಜತೆ ಹಿಡಿದಿದ್ದಾರೆ. ಕೂಡಲೇ ಪತಿ ಸ್ಥಳಕ್ಕೆ ಆಗಮಿಸಿದ್ದಾರೆ. ಎಲ್ಲರೂ ಸೇರಿ ಆಕೆಯ ಲವ್ವರ್‌ನನ್ನು ಥಳಿಸಿದ್ದಾರೆ. ಬೆಳಗ್ಗೆತನಕ ಇಬ್ಬರನ್ನೂ ಕೂಡಿಹಾಕಿ, ಬೆಳಗ್ಗೆ ಮದುವೆ ಮಾಡಿಸಿದ್ದಾರೆ.
ಪತಿಯ ಸಂಬಂಧಿಕರು, ನೆರೆಹೊರೆಯವರು ಮಹಿಳೆ ಹಾಗೂ ಆಕೆಯ ಲವ್ವರ್‌ನನ್ನು ಶಿವ ದೇವಾಲಯಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ, ಇಬ್ಬರಿಗೂ ಮದುವೆ ಮಾಡಿಸಿದ್ದಾರೆ. ಲವ್ವರ್ ಆಕೆಯ ಹಣೆಗೆ ಸಿಂಧೂರ ಇಡುತ್ತಿರುವ ವಿಡಿಯೊ ವೈರಲ್ ಆಗಿದೆ. ಆದರೆ, ಮಹಿಳೆಯು ಅಳುತ್ತಿರುವ, ಲವ್ವರ್ ಜತೆ ಮದುವೆಯಾಗಲು ನಿರಾಕರಿಸುತ್ತಿರುವ ದೃಶ್ಯಗಳು ವಿಡಿಯೊದಲ್ಲಿ ಸೆರೆಯಾಗಿವೆ. ಆದರೂ, ಬಲವಂತವಾಗಿ ಮಹಿಳೆಯನ್ನು ಆಕೆಯ ಲವ್ವರ್ ಜತೆ ಮದುವೆ ಮಾಡಿಸಿದ್ದಾರೆ.
ಇದನ್ನೂ ಓದಿ: Viral Video: ರೆಸ್ಟೋರೆಂಟ್‌ನಲ್ಲಿ ಆರ್ಡರ್ ಮಾಡಿದ ಚಿಕನ್‌ನಲ್ಲಿ ಸಿಕ್ಕಿತು ಸತ್ತ ಇಲಿ; ವಿಡಿಯೊ ವೈರಲ್
ಮಹಿಳೆಯು ಮದುವೆಯಾಗಿ ಹಲವು ವರ್ಷಗಳಾಗಿದ್ದು, ಆಕೆಗೆ ಇಬ್ಬರು ಮಕ್ಕಳಿದ್ದಾರೆ. ಹೀಗಿದ್ದರೂ, ರಾತ್ರಿ ಪದೇಪದೆ ಲವ್ವರ್‌ನನ್ನು ಭೇಟಿಯಾದ ಪ್ರಕರಣವು ಪತಿ ಹಾಗೂ ಗ್ರಾಮಸ್ಥರನ್ನು ಕೆರಳಿಸಿದೆ. ಇದರಿಂದ ಬೇಸತ್ತ ಪತಿಯು ಕೊನೆಗೆ ಆಕೆಯನ್ನು ಲವ್ವರ್ ಜತೆ ಮದುವೆ ಮಾಡಿಸಿದ್ದಾರೆ. ಆದರೆ, ಬಲವಂತವಾಗಿ ಮದುವೆ ಮಾಡಿಸಿರುವ ಪ್ರಕರಣವು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಒಲ್ಲದ ಮನಸ್ಸಿನಿಂದಲೇ ಲವ್ವರ್ ಕೂಡ ಆಕೆಯ ಹಣೆಗೆ ಸಿಂಧೂರ ಇಟ್ಟಿದ್ದಾನೆ. ಮಹಿಳೆಯು ಕೂಡ ಅತ್ತಿದ್ದಾರೆ. ಒಟ್ಟಿನಲ್ಲಿ, ಮದುವೆಯಾದರೂ ಹಳೆಯ ಲವ್ವರ್ ಜತೆ ಸಂಪರ್ಕ ಇಟ್ಟುಕೊಂಡಿದ್ದ ಮಹಿಳೆಯು ಈಗ ಉಭಯ ಸಂಕಟಕ್ಕೆ ಸಿಲುಕಿದ್ದಾರೆ.