ನವದೆಹಲಿ: ಅಂಟಿಕೊಂಡೇ ಹುಟ್ಟಿದ ಅವಳಿ ಮಕ್ಕಳನ್ನು ಶಸ್ತ್ರಚಿಕಿತ್ಸೆ ಮೂಲಕ ದೆಹಲಿ ಏಮ್ಸ್ ವೈದ್ಯರು ಯಶಸ್ವಿಯಾಗಿ ಬೇರ್ಪಡಿಸಿದ್ದಾರೆ. ಇಬ್ಬರು ಹೆಣ್ಣುಮಕ್ಕಳು ಒಂದೇ ದೇಹವಾಗಿ ಜನಿಸಿದ್ದು, ಅವರ ಹೊಟ್ಟೆ ಹಾಗೂ ಎದೆಯ ಭಾಗವು ಒಂದೇ ದೇಹವಾಗಿ ರೂಪುಗೊಂಡಿತ್ತು. ಇದು ಪೋಷಕರಿಗೆ ಭಾರಿ ಆತಂಕ ತಂದಿತ್ತು. ಆದರೆ, ಏಮ್ಸ್ ವೈದ್ಯರು ಎರಡೂ ಮಕ್ಕಳ ದೇಹಗಳನ್ನು ಬೇರ್ಪಡಿಸಿದ್ದಾರೆ. ಮುದ್ದಾದ ಮಕ್ಕಳ ಫೋಟೊ ಈಗ ವೈರಲ್ (Viral News) ಆಗಿದೆ.
“ರಿದ್ಧಿ ಹಾಗೂ ಸಿದ್ಧಿ ಎಂಬ ಇಬ್ಬರು ಹೆಣ್ಣುಮಕ್ಕಳೀಗ ಆರೋಗ್ಯವಾಗಿದ್ದು, ಆಟವಾಡಿಕೊಂಡಿದ್ದಾರೆ. ಉತ್ತರ ಪ್ರದೇಶದ ರಾಯ್‌ಬರೇಲಿ ನಿವಾಸಿ ದೀಪಿಕಾ ಗುಪ್ತಾ ಎಂಬುವವರು ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಾಗ ಎರಡೂ ಮಕ್ಕಳಿಗೆ ಸಮಸ್ಯೆಯಾಗಿದ್ದು, ಅವರು ಅಂಟಿಕೊಂಡೇ ಜನಿಸಿದ್ದಾರೆ. ಈಗ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಕೈಗೊಳ್ಳುವ ಮೂಲಕ ಎರಡೂ ಮಕ್ಕಳನ್ನು ಬೇರ್ಪಡಿಸಲಾಗಿದೆ” ಎಂದು ಏಮ್ಸ್ ಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಮಿನು ಬಾಜಪೇಯಿ ತಿಳಿಸಿದ್ದಾರೆ.
2022ರ ಜುಲೈ 7ರಂದು ಎರಡೂ ಮಕ್ಕಳು ಜನಿಸಿವೆ. ಆರೋಗ್ಯದ ಸಮಸ್ಯೆಯಿಂದ ಎರಡೂ ಮಕ್ಕಳು ಐದು ತಿಂಗಳು ಐಸಿಯುನಲ್ಲೇ ಇದ್ದವು. ಅವರಿಗೆ 11 ತಿಂಗಳು ತುಂಬಿದಾಗ ಅಂದರೆ, ಕಳೆದ ಜೂನ್ 7ರಂದು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಕೈಗೊಳ್ಳಲಾಗಿದೆ. ಅವಳಿ ಮಕ್ಕಳ ಮೊದಲ ಜನ್ಮದಿನಾಚರಣೆಯನ್ನು ಆಸ್ಪತ್ರೆಯಲ್ಲಿಯೇ ಆಚರಿಸಲಾಗಿದೆ ಎಂದು ಮಕ್ಕಳ ಪೋಷಕರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Viral News: ಗುಡ್ ಡೇ ಬಿಸ್ಕತ್ತು, 5 ಸ್ಟಾರ್ ಚಾಕೊಲೇಟ್ ಬಳಸಿ ರಾಜೀನಾಮೆ ಪತ್ರ ಬರೆಯೋದು ಹೇಗೆ? ಹೀಗೆ ಮಾಡಿ ನೋಡಿ…
“ಏಮ್ಸ್‌ನ ತಾಯಿ ಮತ್ತು ಮಕ್ಕಳ ಘಟಕದಲ್ಲಿ ಮಕ್ಕಳಿಗೆ ಸಾಮಾನ್ಯ ಅನಸ್ತೇಷಿಯಾ ನೀಡಿ ಶಸ್ತ್ರಚಿಕಿತ್ಸೆ ಕೈಗೊಳ್ಳಲಾಗಿದೆ. ಶಸ್ತ್ರಚಿಕಿತ್ಸೆ ಮಾಡಲು ವೈದ್ಯರು 9 ಗಂಟೆ ತೆಗೆದುಕೊಂಡಿದ್ದಾರೆ. ಸಾಮಾನ್ಯ ಆಸ್ಪತ್ರೆಗಳಲ್ಲಿ ಇಂತಹ ಶಸ್ತ್ರಚಿಕಿತ್ಸೆ ಮಾಡಲು ಆಗುವುದಿಲ್ಲ. ಅಷ್ಟೊಂದು ಅತ್ಯಾಧುನಿಕ ಸಲಕರಣೆಗಳು ಇರುವುದಿಲ್ಲ. ಆದರೆ, ಏಮ್ಸ್ ವೈದ್ಯರು ಇಂತಹ ಸಾಧನೆ ಮಾಡಿದ್ದಾರೆ” ಎಂಬುದಾಗಿ ಬಾಜಪೇಯಿ ತಿಳಿಸಿದ್ದಾರೆ.
“ಮಕ್ಕಳು ಜನಿಸಿದಾಗ ನಮಗೆ ಹೆಚ್ಚು ಆತಂಕವಿತ್ತು. ಅದರಲ್ಲೂ, ಅವರಿಗೆ ಶಸ್ತ್ರಚಿಕಿತ್ಸೆ ಮಾಡುವಾಗ ಆತಂಕ ಇನ್ನಷ್ಟು ಹೆಚ್ಚಾಯಿತು. ಆದರೆ, ವೈದ್ಯರು ಹಾಗೂ ದೇವರ ಕೃಪೆಯಿಂದಾಗಿ ನನ್ನ ಮಕ್ಕಳು ಆರೋಗ್ಯದಿಂದ ಇದ್ದಾರೆ” ಎಂದು ದೀಪಿಕಾ ಗುಪ್ತಾ ಮಾಹಿತಿ ನೀಡಿದರು. ಮೂರು ವರ್ಷಗಳ ಹಿಂದೆಯೂ ಏಮ್ಸ್ ವೈದ್ಯರು ಹೀಗೆ ಅಂಟಿಕೊಂಡೇ ಹುಟ್ಟಿದ್ದ ಮಕ್ಕಳನ್ನು ಒಂದೇ ದೇಹದಿಂದ ಬೇರ್ಪಡಿಸಿದ್ದರು.