ನವದೆಹಲಿ: ದಿನವಿಡೀ ಕೆಲಸ ಮಾಡಿ ಸುಸ್ತಾಗಿ ಮನೆಗೆ ಬಂದ ಬಳಿಕ ಅಡುಗೆ ಮಾಡಲು ಬೇಸರ ಎಂದು ಸ್ವಿಗ್ಗಿಯಲ್ಲೋ, ಜೊಮ್ಯಾಟೋದಲ್ಲೋ ಊಟ ಆರ್ಡರ್ ಮಾಡುತ್ತೇವೆ. ಕೆಲವೊಂದು ಸಲ ಮಕ್ಕಳು ಕೇಳಿದರು ಎಂದೋ, ಗೆಳೆಯರ ಜತೆ ಪಾರ್ಟಿ ಮಾಡುವಾಗಲೋ ಸೇರಿ ಹಲವು ಸಂದರ್ಭಗಳಲ್ಲಿ ಹೆಚ್ಚಿನ ದುಡ್ಡು ಹೋದರೆ ಹೋಯಿತು ಎಂದು ಆನ್‌ಲೈನ್‌ನಲ್ಲಿ ಊಟ ಆರ್ಡರ್ ಮಾಡುತ್ತೇವೆ. ಆದರೆ, ಮುಂದಿನ ಬಾರಿ ಹೀಗೆ ಆರ್ಡರ್ ಮುನ್ನ ಹುಷಾರ್. ನೀವು ಆರ್ಡರ್ ಮಾಡಿದ ಊಟವನ್ನು ಡೆಲಿವರಿ ಬಾಯ್ ತಿಂದು, ಆತ ನಿಮ್ಮನ್ನೇ ಸೋಮಾರಿ (Viral News) ಎಂದು ಕರೆಯುವ ಸಾಧ್ಯತೆ ಇರುತ್ತದೆ. ಏಕೆಂದರೆ, ಇಂತಹ ಘಟನೆಯೊಂದು ಇತ್ತೀಚೆಗೆ ನಡೆದಿದೆ.
ಹೌದು, ಇತ್ತೀಚೆಗೆ ವ್ಯಕ್ತಿಯೊಬ್ಬರು ಡೋರ್‌ಡ್ಯಾಶ್ ಮೂಲಕ ಆನ್‌ಲೈನ್‌ನಲ್ಲಿ ಊಟ ಆರ್ಡರ್ ಮಾಡಿದ್ದಾರೆ. ಡೆಲಿವರಿ ಬಾಯ್ ಆ ಊಟವನ್ನು ಸರಿಯಾದ ಸಮಯಕ್ಕೆ ತಂದು ಆರ್ಡರ್ ಮಾಡಿದವರಿಗೆ ಕೊಡದೆ, ತಾನೇ ತಿಂದಿದ್ದಾನೆ. ಅಲ್ಲದೆ, ಊಟ ಎಲ್ಲಿ ಹೋಯಿತು ಎಂದು ಕೇಳಿದ ಕಸ್ಟಮರ್‌ಗೆ ಸೋಮಾರಿ (Lazy) ಎಂದು ಕರೆದಿದ್ದಾನೆ. ಇಬ್ಬರೂ ಮಾಡಿರುವ ಚಾಟ್‌ನ ಸ್ಕ್ರೀನ್ ಶಾಟ್ ಈಗ ಭಾರಿ ವೈರಲ್ ಆಗಿದೆ. ಜನ ಹತ್ತಾರು ರೀತಿ ಪ್ರತಿಕ್ರಿಯಿಸಿದ್ದಾರೆ.
ವೈರಲ್ ಆದ ಚಾಟ್
“ನೀನು ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ಕೆಲಸ ಕಳೆದುಕೊಳ್ಳುತ್ತೀಯ ನೋಡ್ತಿರು” ಎಂದು ಡೆಲಿವರಿ ಬಾಯ್‌ಗೆ ಕಸ್ಟಮರ್ ಮೆಸೇಜ್ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಡೆಲಿವರಿ ಬಾಯ್, “ನಾನು ನಿಯಮ ಉಲ್ಲಂಘಿಸಿದ್ದನ್ನು ನೀನು ಸಾಕ್ಷ್ಯ ಸಮೇತ ಸಾಬೀತುಪಡಿಸಬೇಕಾಗುತ್ತದೆ” ಎಂದು ತಾನೇ ಊಟ ತಿಂದಿದ್ದನ್ನು ಒಪ್ಪಿಕೊಂಡಿದ್ದಾನೆ. “ನಮ್ಮ ಕಟ್ಟಡದಲ್ಲಿ ಸಿಸಿಟಿವಿ ಇದೆ. ನೀನು ಬಂದೇ ಇಲ್ಲ ಎಂಬುದಕ್ಕೆ ಸಾಕ್ಷಿ ಅದು” ಎಂದು ಕಸ್ಟಮರ್ ಹೇಳಿದ್ದಾರೆ.
ಇದನ್ನೂ ಓದಿ: Harassment Case: ಲಿಫ್ಟ್‌ನಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ಕೊಟ್ಟ ಫುಡ್ ಡೆಲಿವರಿ ಬಾಯ್ ಸೆರೆ
ಇದಕ್ಕೂ ಉದ್ಧಟತನದ ಪ್ರತಿಕ್ರಿಯೆ ನೀಡಿದ ಡೆಲಿವರಿ ಬಾಯ್, “ನಾನು ನಿಮ್ಮ ಹಾಗೆ ದಡ್ಡನಲ್ಲ. ನೀವು ಸೋಮಾರಿ ಅಲ್ಲದೆ ಇದ್ದರೆ ಹೋಗಿ ಊಟ ತರುತ್ತಿದ್ದಿರಿ” ಎಂದು ಹೇಳಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ಚಾಟ್ ವೈರಲ್ ಆಗುತ್ತಲೇ ಡೆಲಿವರಿ ಬಾಯ್ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆತನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಜನ ಆಗ್ರಹಿಸಿದ್ದಾರೆ. “ಜನ ಹೆಚ್ಚಿನ ಬೆಲೆ ತೆತ್ತು ಆನ್‌ಲೈನ್ ಮೂಲಕ ಊಟ ಆರ್ಡರ್ ಮಾಡುತ್ತಾರೆ. ಆದರೆ, ಡೆಲಿವರಿ ಬಾಯ್‌ಗಳು ಇಂತಹ ಉದ್ಧಟತನದ ವರ್ತನೆ ತೋರುವುದು ಸರಿಯಲ್ಲ” ಎಂದು ಜನ ಜಾಡಿಸಿದ್ದಾರೆ.