ಭೋಪಾಲ್: ಟೊಮ್ಯಾಟೊ ಬೆಲೆ ಗಗನಕ್ಕೇರಿದೆ. ದೇಶದ ಬಹುತೇಕ ನಗರಗಳಲ್ಲಿ ಒಂದು ಕೆ.ಜಿ ಟೊಮ್ಯಾಟೊ ಬೆಲೆ 100 ರೂ. ದಾಟಿದೆ. ಇದರಿಂದಾಗಿ ತೋಟಕ್ಕೆ ನುಗ್ಗಿ ಟೊಮ್ಯಾಟೊ ಕಳ್ಳತನ ನಡೆದಿದೆ. ಟೊಮ್ಯಾಟೊ ಮಾರಾಟ ಮಾಡುವವರು ಕಳ್ಳರ ಭಯಕ್ಕೆ ಸಿಸಿಟಿವಿ ಅಳವಡಿಸಿದ್ದಾರೆ. ಬೌನ್ಸರ್‌ಗಳನ್ನು ಕೂಡ ನೇಮಿಸಿಕೊಂಡಿದ್ದಾರೆ. ಟೊಮ್ಯಾಟೊ ಬೆಲೆ ಇಷ್ಟೆಲ್ಲ ಅವಾಂತರ ಮಾಡಿದೆ. ಇದರ ಬೆನ್ನಲ್ಲೇ, ಟೊಮ್ಯಾಟೊ ವಿಚಾರಕ್ಕಾಗಿ ಮಧ್ಯಪ್ರದೇಶದಲ್ಲಿ ಗಂಡ-ಹೆಂಡತಿ (Viral News) ಜಗಳವಾಡಿದ್ದಾರೆ. ಜಗಳದ ಬಳಿಕ ಹೆಂಡತಿ ಮನೆ ಬಿಟ್ಟು ಹೋಗಿದ್ದು, ಪತಿ ಕಂಗಾಲಾಗಿದ್ದಾನೆ.
ಹೌದು, ಟೊಮ್ಯಾಟೊ ವಿಷಯಕ್ಕಾಗಿ ಮಧ್ಯಪ್ರದೇಶದ ಶಾಹ್ದೋಲ್ ಜಿಲ್ಲೆಯಲ್ಲಿ ಗಂಡ-ಹೆಂಡತಿ ಜಗಳವಾಡಿದ್ದಾರೆ. ಸಂಜೀವ್ ಬರ್ಮನ್ ಅವರು ಟಿಫಿನ್ ಸರ್ವಿಸ್ ಉದ್ಯಮದಲ್ಲಿ ತೊಡಗಿದ್ದಾರೆ. ಇವರು ಹೆಂಡತಿಯನ್ನು ಕೇಳದೆಯೇ ಅಡುಗೆಗೆ ಎರಡು ಟೊಮ್ಯಾಟೊ ಹಾಕಿದ್ದಾರೆ. ಟೊಮ್ಯಾಟೊ ಬೆಲೆ ಏರಿಕೆಯಾಗಿರುವಾಗ ಯಾಕ್ರೀ ಟೊಮ್ಯಾಟೊ ಹಾಕಿದಿರಿ ಎಂದು ಗಂಡನನ್ನು ದಬಾಯಿಸಿದ್ದಾಳೆ. ಅಲ್ಲದೆ, ನನ್ನನ್ನು ಕೇಳದೆ ಇನ್ನು ಮುಂದೆ ಟೊಮ್ಯಾಟೊ ಹಾಕಬಾರದು ಎಂದು ಆದೇಶ ಹೊರಡಿಸಿದ್ದಾಳೆ. ಇಷ್ಟಕ್ಕೆ ಗಂಡನಲ್ಲಿರುವ “Male Ego” ಅಲರ್ಟ್ ಆಗಿದೆ. ಆಗ ಇಬ್ಬರ ಮಧ್ಯೆ ಜಗಳವಾಗಿದೆ.
ಅಡುಗೆಗೆ ಟೊಮ್ಯಾಟೊ ಹಾಕುವ ವಿಚಾರಕ್ಕೆ ಶುರುವಾದ ಜಗಳ ತಾರಕಕ್ಕೇರಿದೆ. ಇಬ್ಬರೂ ಬೈದಾಡಿಕೊಂಡಿದ್ದಾರೆ. ಸಿಟ್ಟಿಗೆದ್ದ ಹೆಂಡತಿಯು ಕೊನೆಗೆ ಇವನ ಸಹವಾಸವೇ ಬೇಡ ಎಂದು ಮನೆ ಬಿಟ್ಟು ತವರುಮನೆಗೆ ಹೋಗಿದ್ದಾರೆ. ಎರಡು ಟೊಮ್ಯಾಟೊಗಾಗಿ ಇಷ್ಟೆಲ್ಲ ಆಯಿತಲ್ಲ ಎಂದು ಕಂಗಾಲಾದ ಸಂಜೀವ್ ಬರ್ಮನ್, ನನಗೆ ನ್ಯಾಯ ಕೊಡಿಸಿ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಇದನ್ನೂ ಓದಿ: Tomato Price Hike: ಟೊಮ್ಯಾಟೊ ಬೆಲೆ ಏರಿಕೆ; ಕಡಿಮೆ ಬೆಲೆಗೆ ಖರೀದಿಸಲು ನೇಪಾಳಕ್ಕೆ ಹೊರಟ ಜನ!
“ಪತ್ನಿಯನ್ನು ಕೇಳದೆ ಅಡುಗೆಗೆ ಟೊಮ್ಯಾಟೊ ಹಾಕಿದ್ದಕ್ಕೆ ಇಬ್ಬರ ಮಧ್ಯೆ ಜಗಳವಾಗಿದೆ. ಇಬ್ಬರೂ ಬೈದಾಡಿಕೊಂಡ ಕಾರಣ ಮೂರು ದಿನ ಮಾತಾಡಿಲ್ಲ. ಕೊನೆಗೆ ಬೇಸರಗೊಂಡ ಪತ್ನಿಯು ಮನೆ ಬಿಟ್ಟು ಹೋಗಿದ್ದಾರೆ. ಸಂಜೀವ್ ಬರ್ಮನ್ ಹೆಂಡತಿಯನ್ನು ಸಂಪರ್ಕಿಸಲಾಗುತ್ತಿದ್ದು, ಕೂಡಲೇ ಇಬ್ಬರನ್ನೂ ಒಗ್ಗೂಡಿಸಲು ಪ್ರಯತ್ನಿಸಲಾಗುವುದು” ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.