ನವದೆಹಲಿ: ವಾರವಿಡೀ ಕೆಲಸ ಮಾಡಿ ದಣಿವಾಗಿರುತ್ತದೆ, ವೀಕೆಂಡ್‌ನಲ್ಲಿ ಶಾಪಿಂಗ್ ಹೋಗಲು ಮನಸ್ಸಾಗುವುದಿಲ್ಲ ಎಂದು ಆನ್‌ಲೈನ್ ಶಾಪಿಂಗ್ ಮೊರೆ ಹೋಗುತ್ತೇವೆ. ಎರಡು ದಿನ ತಡವಾಗಿಯಾದರೂ ಕೈಗೆ ಸೇರುತ್ತದೆಯಲ್ಲ ಎಂದು ನಮಗೆ ಇಷ್ಟವಾದ ವಸ್ತುಗಳನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡುತ್ತೇವೆ. ಆದರೆ, ಹೀಗೆ ಆನ್‌ಲೈನ್‌ನಲ್ಲಿ 90 ಸಾವಿರ ರೂಪಾಯಿ ಮೌಲ್ಯದ ಕ್ಯಾಮೆರಾ ಲೆನ್ಸ್ ಆರ್ಡರ್ ಮಾಡಿದ ವ್ಯಕ್ತಿಗೆ ಲೆನ್ಸ್ ಬದಲು ಸುಮಾರು ಒಂದು ಕೆ.ಜಿ ನವಣೆ ಡೆಲಿವರಿ ಆಗಿದೆ. ನವಣೆಯ ಪ್ಯಾಕೆಟ್ ನೋಡಿದ ವ್ಯಕ್ತಿ (Viral News) ಶಾಕ್ ಆಗಿದ್ದಾರೆ.
“ನಾನು 90 ಸಾವಿರ ರೂಪಾಯಿ ಮೌಲ್ಯದ ಕ್ಯಾಮೆರಾ ಲೆನ್ಸ್ ಆರ್ಡರ್ ಮಾಡಿದ್ದೆ. ಆದರೆ, ನನಗೆ ಸಿಕ್ಕಿರುವ ಬಾಕ್ಸ್‌ನಲ್ಲಿ ನವಣೆ (ಸಿರಿಧಾನ್ಯ) ಪ್ಯಾಕೆಟ್ ಇದೆ. ಅಮೆಜಾನ್ ಹಾಗೂ ಅಪಾರಿಯೇ ರಿಟೇಲ್‌ನಿಂದ ಭಾರಿ ವಂಚನೆಯಾಗುತ್ತಿದೆ. ಹಾಗೆಯೇ, ಡೆಲಿವರಿ ಆದಾಗ ಕ್ಯಾಮೆರಾ ಲೆನ್ಸ್ ಕೂಡ ಓಪನ್ ಆಗಿಯೇ ಇತ್ತು” ಎಂದು ಅರುಣ್ ಕುಮಾರ್ ಮೆಹೆರ್ ಅವರು ಫೋಟೊ ಸಮೇತ ಟ್ವೀಟ್ ಮಾಡಿದ್ದಾರೆ.
Ordered a 90K INR Camera lens from Amazon, they have sent a lens box with a packet of quinoa seeds inside instead of the lens. Big scam by @amazonIN and Appario Retail. The lens box was also opened. Solve it asap. pic.twitter.com/oED7DG18mn
— Arun Kumar Meher (@arunkmeher) July 6, 2023
ನನ್ನ ಹಣ ವಾಪಸ್ ಕೊಡಿ ಎಂದ ಅರುಣ್
ಅಮೆಜಾನ್ ಮಾಡಿದ ಅವಾಂತರಕ್ಕೆ ಅರುಣ್ ಕುಮಾರ್ ಮೆಹೆರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಅಮೆಜಾನ್ ತಿಳಿಸಿದೆ. ಆದರೆ, ಹೀಗೆ ವಂಚನೆ ಆಗಲು ಹೇಗೆ ಸಾಧ್ಯ? ಇದನ್ನು ಖಂಡಿತವಾಗಿಯೂ ಸಹಿಸುವುದಿಲ್ಲ. ಒಂದೋ ನಾನು ಆರ್ಡರ್ ಮಾಡಿದ ಲೆನ್ಸ್‌ಅನ್ನು ಕೂಡಲೇ ಕಳುಹಿಸಿ. ಇಲ್ಲದಿದ್ದರೆ ನನ್ನ ಹಣ ನನಗೆ ಕೊಡಿ” ಎಂದು ಟ್ವೀಟ್ ಮಾಡಿದ್ದಾರೆ. ಆದಾಗ್ಯೂ, ನಮಗೆ ನಿಮ್ಮ ಅಕೌಂಟ್, ಆರ್ಡರ್ ಡಿಟೇಲ್ಸ್ ಕೊಡಿ, ತನಿಖೆ ನಡೆಸುತ್ತೇವೆ ಎಂದು ಅಮೆಜಾನ್ ಕಡೆಯಿಂದ ಪ್ರತಿಕ್ರಿಯೆ ಬಂದಿದೆ.
ಇದನ್ನೂ ಓದಿ: Viral News : ಕೊಲೆಗಾರರ ನಡುವೆ ಜೈಲಿನಲ್ಲೇ ಹುಟ್ಟಿತು ಪ್ರೀತಿ! ಪೆರೋಲ್ ಪಡೆದು ಮದುವೆ!
ಸಾಮಾಜಿಕ ಜಾಲತಾಣಗಳಲ್ಲಿ ಫೋಟೊ ಸಮೇತ ಮಾಡಿದ ಅರುಣ್ ಕುಮಾರ್ ಮೆಹೆರ್ ಟ್ವೀಟ್‌ಗೆ ಹತ್ತಾರು ಜನ ಪ್ರತಿಕ್ರಿಯಿಸಿದ್ದಾರೆ. ಅವರು ಕೂಡ ತಮಗೆ ಆದ ಕೆಟ್ಟ ಅನುಭವ ಹಂಚಿಕೊಂಡಿದ್ದಾರೆ. “ನಾನು ಕೂಡ ಒಂದು ಮೊಬೈಲ್ ಆರ್ಡರ್ ಮಾಡಿದ್ದೆ. ಆದರೆ, ಅವರು ಸಮರ್ಪಕವಾಗಿ ಮೊಬೈಲ್‌ಅನ್ನು ಕಳುಹಿಸಲಿಲ್ಲ. ಇದರ ಕುರಿತು ಅಮೆಜಾನ್‌ಗೆ ಸಾಕ್ಷ್ಯ ಒದಗಿಸಿದರೂ ಅವರು ಯಾವುದೇ ಪರಿಹಾರ ನೀಡಲಿಲ್ಲ. ಆನ್‌ಲೈನ್ ಶಾಪಿಂಗ್ ಮೇಲೆ ನನಗೆ ನಂಬಿಕೆಯೇ ಇಲ್ಲ” ಎಂದು ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.