Site icon Vistara News

Viral News: ತರಕಾರಿ ಮಾರುವ ವ್ಯಕ್ತಿಯ ಬ್ಯಾಂಕ್‌ ಖಾತೆಗೆ 172 ಕೋಟಿ ರೂ. ಬಿತ್ತು; ಮುಂದೇನಾಯ್ತು?

Vegetables Vendor Vinod Rastogi

Viral News: Rs 172 crore Deposited in Bank Account Of A Vegetable Vendor; Gets Income Tax Notice

ಲಖನೌ: ಬ್ಯಾಂಕ್‌ ಖಾತೆಯಲ್ಲಿ ಒಂದು ಲಕ್ಷ ರೂಪಾಯಿ ಇದ್ದರೂ ನೆಮ್ಮದಿಯಿಂದ ನಿದ್ದೆ ಮಾಡುವ ಕಾಲ ಅಲ್ಲ ಇದು. ಯಾರು ಯಾವಾಗ ಹ್ಯಾಕ್‌ ಮಾಡುತ್ತಾರೋ, ನಾವು ನೀಡಿದ ಮಾಹಿತಿ ಆಧರಿಸಿ ಅಕೌಂಟಲ್ಲಿರುವ ಎಲ್ಲ ಹಣವನ್ನು ಲಪಟಾಯಿಸುತ್ತಾರೋ ಎಂಬ ಆತಂಕ ಇರುತ್ತದೆ. ನಮ್ಮ ಅಕೌಂಟ್‌ ನಂಬರ್‌ಅನ್ನು ಇನ್ನೊಬ್ಬರಿಗೆ ಕೊಡಲೂ ಭಯ ಆಗುತ್ತದೆ. ಇಂತಹ ಆನ್‌ಲೈನ್‌ ಫ್ರಾಡ್‌ (Online Fraud) ಕಾಲದಲ್ಲೂ ಉತ್ತರ ಪ್ರದೇಶದಲ್ಲಿ (Uttar Pradesh) ವ್ಯಕ್ತಿಯೊಬ್ಬರ ಖಾತೆಗೆ ಒಂದಲ್ಲ, ಎರಡಲ್ಲ 172 ಕೋಟಿ ರೂಪಾಯಿ (Viral News) ಜಮೆಯಾಗಿದೆ.

ಹೌದು, ಉತ್ತರ ಪ್ರದೇಶದ ಘಾಜಿಯಾಬಾದ್‌ (Ghaziabad) ಜಿಲ್ಲೆಯಲ್ಲಿ ತರಕಾರಿ ಮಾರಾಟ ಮಾಡಿಕೊಂಡು ಜೀವನ ಸಾಗಿಸುತ್ತಿರುವ ವಿನೋದ್‌ ರಸ್ತೋಗಿ (Vinod Rastogi) ಎಂಬುವರ ಬ್ಯಾಂಕ್‌ ಖಾತೆಗೆ 172 ಕೋಟಿ, 81 ಲಕ್ಷದ 59 ಸಾವಿರ ರೂ. ಜಮೆಯಾಗಿದೆ. ಇಷ್ಟು ದುಡ್ಡು ಜಮೆಯಾದರೂ ವಿನೋದ್‌ ರಸ್ತೋಗಿ ಅವರಿಗೆ ಗೊತ್ತೇ ಆಗಿಲ್ಲ. ಯಾವಾಗ, ಆದಾಯ ತೆರಿಗೆ ಇಲಾಖೆ (Income Tax Department) ಅಧಿಕಾರಿಗಳು ನೋಟಿಸ್‌ ಹಿಡಿದುಕೊಂಡು ಅವರ ಮನೆಗೆ ಬಂದರೋ, ಆಗಲೇ ಅವರಿಗೆ ದುಡ್ಡು ಜಮೆಯಾಗಿರುವುದು ಗೊತ್ತಾಗಿದೆ.

ಮುಂದೇನಾಯ್ತು?

ಏಕಾಏಕಿ, ಬ್ಯಾಂಕ್‌ ಖಾತೆಗೆ 172 ಕೋಟಿ ರೂ. ಜಮೆಯಾದ ಕಾರಣ ವಿನೋದ್‌ ರಸ್ತೋಗಿ ಅವರಿಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನೋಟಿಸ್‌ ನೀಡಿದ್ದಾರೆ. ಆದರೆ, ತಮಗೆ ಗೊತ್ತೇ ಇಲ್ಲದೆ, ತಾವು ಬ್ಯಾಂಕ್‌ ಖಾತೆ ತೆರೆಯದೆ ಇರುವ ಖಾತೆಗೆ ನೂರಾರು ಕೋಟಿ ರೂ. ಜಮೆಯಾಗಿರುವ ಹಿನ್ನೆಲೆಯಲ್ಲಿ ವಿನೋದ್‌ ರಸ್ತೋಗಿ ಅವರು ಸ್ಥಳೀಯ ಪೊಲೀಸ್‌ ಅಧಿಕಾರಿಗಳ ಸಹಾಯ ಕೋರಿದ್ದಾರೆ. “ಇದು ನನ್ನ ಹಣ ಅಲ್ಲ. ಯಾರೋ ನಕಲಿ ದಾಖಲೆ ಸೃಷ್ಟಿಸಿ, ನನ್ನ ಹೆಸರಿನಲ್ಲಿ ಬ್ಯಾಂಕ್‌ ಖಾತೆ ತೆರೆದಿದ್ದಾರೆ” ಎಂದು ಅವರು ಪೊಲೀಸರಿಗೆ ಮನವರಿಕೆ ಮಾಡಿದ್ದಾರೆ.

ಇದನ್ನೂ ಓದಿ: Kerala Lottery: ಅಬ್ಬಾ ಲಾಟರಿ; 250 ರೂ. ಟಿಕೆಟ್‌ ಖರೀದಿಸಿದ ಕೇರಳದ 11 ಮಹಿಳಾ ಪೌರ ಕಾರ್ಮಿಕರು ಈಗ ಕೋಟ್ಯಧೀಶೆಯರು!

ಪ್ರಾಥಮಿಕ ತನಿಖೆ ಪ್ರಕಾರ, ಚೆಕ್‌ ಮೂಲಕ ವಿನೋದ್‌ ರಸ್ತೋಗಿ ಅವರ ಬ್ಯಾಂಕ್‌ ಖಾತೆಗೆ ಹಣ ಜಮೆಯಾಗಿದೆ ಎಂದು ತಿಳಿದುಬಂದಿದೆ. “ಬ್ಯಾಂಕ್‌ ಖಾತೆಗೆ ಅನಾಮಧೇಯ ವ್ಯಕ್ತಿಗಳಿಂದ ಹಣ ಜಮೆಯಾಗಿರುವ ಕುರಿತು ದೂರು ನೀಡಲು ವಿನೋದ್‌ ರಸ್ತೋಗಿ ಅವರು ಬಂದಿದ್ದರು. ಅವರನ್ನು ಸೈಬರ್‌ ಸೆಲ್‌ಗೆ ಕಳುಹಿಸಲಾಗಿದೆ. ತನಿಖೆಯ ಬಳಿಕ ಬ್ಯಾಂಕ್‌ ಖಾತೆಗೆ ಹೇಗೆ, ಯಾರಿಂದ ಹಣ ಜಮೆಯಾಯಿತು ಎಂಬುದು ತಿಳಿಯಲಿದೆ” ಎಂದು ಕೊತ್ವಾಲಿ ಪೊಲೀಸ್‌ ಇನ್ಸ್‌ಪೆಕ್ಟರ್‌ ಪವನ್‌ ಕುಮಾರ್‌ ಮಾಹಿತಿ ನೀಡಿದರು.

Exit mobile version