Site icon Vistara News

Viral News: ಆಕೆ 36 ವರ್ಷ ಪುರುಷ ವೇಷದಲ್ಲಿ ಬದುಕಿದರು, ಎಲ್ಲವೂ ಮಗಳಿಗಾಗಿ!

Tamil Nadu Woman Viral News

ಕಾಟುನಾಯಕನಪಟ್ಟಿ(ತಮಿಳುನಾಡು): ಭಾರತದಲ್ಲಿ ಮಹಿಳೆಯರು ಈಗೀಗ ಪ್ರಬಲರಾಗುತ್ತಿದ್ದಾರೆ. ಧೈರ್ಯದಿಂದ ಎಲ್ಲ ಕ್ಷೇತ್ರಗಳಲ್ಲೂ ಪ್ರಭುತ್ವ ಸಾಧಿಸುತ್ತಿದ್ದಾರೆ. ಮೊದಲಿನ ಕಾಲಕ್ಕೆ ಹೋಲಿಸಿದರೆ ಮಹಿಳಾ ಸಮಾನತೆಗೆ ಹೆಚ್ಚು ಪ್ರಾಮುಖ್ಯತೆ ಸಿಗುತ್ತಿದೆ ಎಂಬುದನ್ನೆಲ್ಲ ಒಪ್ಪಿಕೊಳ್ಳೋಣ. ಆದರೂ ಕೂಡ ನಮ್ಮದು ಪುರುಷ ಪ್ರಧಾನ ಸಮಾಜವೇ. ಅದಿನ್ನೂ ಸಂಪೂರ್ಣ ಬದಲಾವಣೆ ಆಗಿಲ್ಲ. ಒಂಟಿ ಮಹಿಳೆ ಮಧ್ಯರಾತ್ರಿಯಲ್ಲೂ ಧೈರ್ಯದಿಂದ ಓಡಾಡುವ ಕಾಲ ಬಂದಿಲ್ಲ. ಅದಕ್ಕೆ ಪೂರಕವಾದ ಎಷ್ಟೋ ಘಟನೆಗಳನ್ನು ಆಗಾಗ ಓದುತ್ತಿರುತ್ತೇವೆ. ಅದರಲ್ಲೂ ತಮಿಳುನಾಡಿನ ಮಹಿಳೆಯೊಬ್ಬರ ಸ್ಟೋರಿ ವೈರಲ್‌ ಆದ ಮೇಲಂತೂ ಪುರುಷ ಪ್ರಧಾನ ಸಮಾಜದ ಸ್ಥಿತಿಗತಿಯ ಬಗ್ಗೆ ಇನ್ನಷ್ಟು ಯೋಚಿಸುವಂತಾಗಿದೆ. ಈ viral news ವಿವರ ಇಲ್ಲಿದೆ.

ಈ ಮಹಿಳೆಯ ಹೆಸರು ಎಸ್‌.ಪೇಚಿಯೆಮ್ಮಾಳ್‌. ತಮಿಳುನಾಡಿನ ಕಾಟುನಾಯಕನಪಟ್ಟಿಯವರು. ಈಗ ಇವರಿಗೆ 57 ವರ್ಷ. ಆದರೆ ಬರೋಬ್ಬರಿ 36 ವರ್ಷಗಳ ಕಾಲ ಪುರುಷ ವೇಷದಲ್ಲಿ ಜೀವನ ನಡೆಸಿದ್ದಾರೆ. ಎಲ್ಲವೂ ನನ್ನ ಮಗಳಿಗಾಗಿ ಎಂದೂ ಹೇಳಿಕೊಂಡಿದ್ದಾರೆ. ಪೇಚಿಯೆಮ್ಮಾಳ್‌ 20 ವರ್ಷದವರಾಗಿದ್ದಾಗ ಮದುವೆಯಾಯಿತು. ಆದರೆ ವಿವಾಹವಾದ 15ನೇ ದಿನಕ್ಕೆ ಪತಿ ಹೃದಯಾಘಾತದಿಂದ ಮೃತಪಟ್ಟರು. ಅಷ್ಟರಲ್ಲಿ ಪೇಚಿಯೆಮ್ಮಾಳ್‌ ಗರ್ಭದಲ್ಲಿ ಮಗು ಬೆಳೆಯುತ್ತಿತ್ತು. 9 ತಿಂಗಳ ಬಳಿಕ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಆ ಮಗುವನ್ನು ಬೆಳೆಸಲು ಅವರಿಗೆ ದುಡಿಮೆಯೂ ಅನಿವಾರ್ಯವಾಗಿತ್ತು. ಆದರೆ ಅವರಿದ್ದ ಹಳ್ಳಿ ಕಾಟುನಾಯಕನಪಟ್ಟಿಯಲ್ಲಿ ಪುರುಷ ಪ್ರಾಧಾನ್ಯತೆ ತುಂಬ ಪ್ರಬಲವಾಗಿತ್ತು. ಎಲ್ಲೇ ಕೆಲಸ ಮಾಡಲು ಹೋದರೂ ಪೇಚಿಯೆಮ್ಮಾಳ್‌ ಅವರಿಗೆ ಕಿರುಕುಳ ಕಟ್ಟಿಟ್ಟ ಬುತ್ತಿಯಾಗಿತ್ತು. ಅಂದರೆ ಕಟ್ಟಡ ನಿರ್ಮಾಣ ಕೆಲಸ, ಹೋಟೆಲ್‌, ಟೀ ಶಾಪ್‌ ಹೀಗೆ ಎಲ್ಲಿಯೇ ಕೆಲಸಕ್ಕೆ ಹೋದರೂ ದೌರ್ಜನ್ಯ, ಲೈಂಗಿಕ ಶೋಷಣೆ ಸಾಮಾನ್ಯವಾಗಿತ್ತು. ಕಿರುಕುಳ ಸಹಿಸಲಾಗುವುದಿಲ್ಲ, ಅದೇ ಕಾರಣಕ್ಕೆ ದುಡಿಮೆ ಮಾಡದೆ ಉಳಿಯಲು ಸಾಧ್ಯವೂ ಇಲ್ಲ ಎಂಬ ಪರಿಸ್ಥಿತಿ ಇವರದ್ದು.

ಇದನ್ನೂ ಓದಿ | ತಮಿಳುನಾಡಿನ ಇಡ್ಲಿ ಅಮ್ಮನಿಗೆ ಹೊಸ ಮನೆ ನೀಡಿದ ಆನಂದ್‌ ಮಹೀಂದ್ರಾ

ಒಂದು ದಿನ ಈ ನೋವಿಗೆಲ್ಲ ಮುಕ್ತಿ ಹಾಡಬೇಕು ಎಂದು ನಿರ್ಧಾರ ಮಾಡಿದ ಮೇಚಿಯೆಮ್ಮಾಳ್‌, ವೇಷದಲ್ಲಿ ಪುರುಷನಾಗಿ ಬದಲಾದರು. ತಿರುಚೆಂದೂರ್‌ ಮುರುಗನ್‌ ದೇವಸ್ಥಾನಕ್ಕೆ ಹೋಗಿ ತಮ್ಮ ಕೂದಲನ್ನು ಕತ್ತರಿಸಿಕೊಂಡರು. ಸೀರೆಯುಡುತ್ತಿದ್ದ ಅವರು ಅಂದಿನಿಂದ ಲುಂಗಿ, ಶರ್ಟ್‌ ತೊಡಲು ಪ್ರಾರಂಭಿಸಿದರು. ಹಾಗೇ ಮುತ್ತು ಎಂದು ಹೆಸರಿಟ್ಟುಕೊಂಡು ದುಡಿಯಲು ಶುರು ಮಾಡಿದರು. ಇದೆಲ್ಲ ಕತೆಯನ್ನೂ ಪೆಚಿಯೆಮ್ಮಾಳ್‌ ಅವರೇ ರಾಷ್ಟ್ರೀಯ ಮಾಧ್ಯಮವೊಂದರ ಜತೆ ಹಂಚಿಕೊಂಡಿದ್ದಾರೆ. ತಾನೊಬ್ಬ ಮಹಿಳೆ ಎಂಬುದು ನನ್ನ ಮಗಳು ಮತ್ತು ಹತ್ತಿರದ ಕೆಲವೇ ಸಂಬಂಧಿಗಳಿಗೆ ಬಿಟ್ಟರೆ ಇನ್ಯಾರಿಗೂ ಗೊತ್ತಿರಲಿಲ್ಲ ಎಂದು ತಿಳಿಸಿದ್ದಾರೆ.

ನಾನು ಪುರುಷನಾಗಿ ಎಲ್ಲ ವಿಧದ ಕೆಲಸಗಳನ್ನೂ ಮಾಡಿದ್ದೇನೆ. ಪೇಂಟಿಂಗ್‌ ಕೆಲಸ ಮಾಡಿದ್ದೇನೆ. ಟೀ ಶಾಪ್‌ಗಳಲ್ಲಿ, ಹೊಟೆಲ್‌ಗಳಲ್ಲಿ ದುಡಿದಿದ್ದೇನೆ. ನಾನೆಲ್ಲೇ ಕೆಲಸ ಮಾಡಲಿ ಅಲ್ಲೆಲ್ಲ ಪ್ರೀತಿಯಿಂದ ಅಣ್ಣಾಚಿ ಎಂದೇ ಕರೆಸಿಕೊಳ್ಳುತ್ತಿದ್ದೆ. ನಾನು ನನ್ನ ಆಧಾರ್‌ ಕಾರ್ಡ್‌, ವೋಟರ್‌ ಐಡಿ, ಬ್ಯಾಂಕ್‌ ಅಕೌಂಟ್‌ಗಳಲ್ಲೆಲ್ಲ ಮುತ್ತು ಎಂದೇ ಹೆಸರು ಬದಲಿಸಿಕೊಂಡೆ. ಗಳಿಸಿದ ಹಣವನ್ನೆಲ್ಲ ಮಗಳ ಜೀವನಕ್ಕಾಗಿ ಕೂಡಿಟ್ಟಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಪೇಚಿಯೆಮ್ಮಾಳ್‌ ಮಗಳು ಷಣ್ಮುಗಸುಂದರಿಗೆ ಈಗ ಮದುವೆಯಾಗಿದೆ. ಆದರೆ ಇವರು ಮಾತ್ರ ತಮ್ಮ ಉಡುಪು ಬದಲಿಸಿ, ಮಹಿಳೆಯಂತೆ ಇರಲು ಒಪ್ಪುತ್ತಿಲ್ಲ. ನನ್ನ ಮಗಳಿಗೆ ಒಂದು ಭದ್ರ ಜೀವನ ರೂಪಿಸಿಕೊಟ್ಟ ನನ್ನ ಪುರುಷ ಪಾತ್ರವನ್ನು ತ್ಯಜಿಸುವುದಿಲ್ಲ. ಸಾಯುವವರೆಗೂ ಹೀಗೇ ಮುತ್ತುವಾಗಿಯೇ ಇರುತ್ತೇನೆ ಎಂದು ಹೇಳಿದ್ದಾರೆ. ಇವರಿಗೆ ಒಂದು ಸ್ವಂತ ಮನೆಯಿಲ್ಲ. ಇದುವರೆಗೂ ವಿಧವಾ ಪ್ರಮಾಣ ಪತ್ರಕ್ಕಾಗಿ ಅರ್ಜಿ ಕೂಡ ಸಲ್ಲಿಸಿಲ್ಲ. ಆದರೆ ನರೇಗಾ ಉದ್ಯೋಗ ಕಾರ್ಡ್‌ ಹೊಂದಿದ್ದು, ಅದನ್ನು ಸದ್ಬಳಕೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ | ಟೂವೀಲರ್‌ಗಳಿಗೆ ಮತ್ತೆ ಹೆಚ್ಚಿದ ಡಿಮ್ಯಾಂಡ್‌ ಹತ್ತು ತಿಂಗಳ ಬಳಿಕ  ಉದ್ಯಮದಲ್ಲಿ ತಂಗಾಳಿ

Exit mobile version