ಭೋಪಾಲ್: ದೇಶಾದ್ಯಂತ ಬಕ್ರೀದ್ ಹಬ್ಬದ ಆಚರಣೆ ಶಾಂತಿಯುತವಾಗಿ ಮುಗಿದಿದೆ. ಮುಸ್ಲಿಮರು ಸಡಗರದಿಂದ ಹಬ್ಬ ಆಚರಿಸಿದ್ದಾರೆ. ಮೇಕೆಗಳ ಮಾಂಸದ ಭಕ್ಷ್ಯ ಭೋಜನ ಮಾಡಿ ಹಬ್ಬವನ್ನು ಸಂಭ್ರಮಿಸಿದ್ದಾರೆ. ಆದರೆ, ಮಳೆ ನಿಂತರೂ ಮಳೆ ಹನಿ ನಿಲ್ಲಲಿಲ್ಲ ಎಂಬ ಮಾತಿನಂತೆ, ಬಕ್ರೀದ್ ಮುಗಿದರೂ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಮೇಕೆಗಾಗಿ ಜಗಳ ನಿಂತಿಲ್ಲ. ಇಬ್ಬರು ವ್ಯಕ್ತಿಗಳು ಒಂದು ಮೇಕೆಗಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ನ್ಯಾಯ-ಪಂಚಾಯಿತಿ (Viral News) ಮಾಡಲು ಪೊಲೀಸರಿಗೆ ಸುಸ್ತಾಗಿ ಹೋಗಿದೆ.
ಹೌದು, ಶಾರುಖ್ ಖಾನ್ ಹಾಗೂ ಸಂಜಯ್ ಖಾನ್ ಎಂಬ ವ್ಯಕ್ತಿಗಳು ಎರಡು ವರ್ಷದ ಮೇಕೆಗಾಗಿ ಹಗ್ಗಜಗ್ಗಾಟ ಆರಂಭಿಸಿದ್ದಾರೆ. ಈ ಮೇಕೆ ನಂದೇ ಎಂದು ಶಾರುಖ್ ಖಾನ್ ಪಟ್ಟು ಹಿಡಿದರೆ, ಸಾಧ್ಯವೇ ಇಲ್ಲ, ಇದು ನಂದು ಎಂದು ಸಂಜಯ್ ಖಾನ್ ವಾದಿಸಿದ್ದಾರೆ. ರೇವಾ ಪೊಲೀಸ್ ಠಾಣೆಯಲ್ಲಿ ಇಬ್ಬರೂ ಪೊಲೀಸರ ಎದುರು, ಈ ಮೇಕೆ ನಂದೇ ಎಂದು ಪದೇಪದೆ ಹೇಳುತ್ತ, ವಾದ ಮಂಡಿಸಿದ್ದಾರೆ. ಬಕ್ರೀದ್ ಹಬ್ಬದ ದಿನ ಇವರಿಬ್ಬರ ಸಮಸ್ಯೆ ಬಗೆಹರಿಸುವಷ್ಟರಲ್ಲಿ ಪೊಲೀಸರಿಗೆ ಸಾಕಾಗಿ ಹೋಗಿದೆ ಎಂದು ತಿಳಿದುಬಂದಿದೆ.
ಮುಗಿಯದ ಗೊಂದಲ, ಪೊಲೀಸರಿಗೆ ತಲೆನೋವು
“ಒಂದು ಮೇಕೆಯನ್ನು ಹಿಡಿದುಕೊಂಡು ಇಬ್ಬರೂ ಪೊಲೀಸ್ ಠಾಣೆ ಹತ್ತಿದ್ದಾರೆ. ಆರು ತಿಂಗಳ ಹಿಂದೆ ಮೇಕೆ ಕಳೆದುಹೋಗಿತ್ತ. ಇದು ಅದೇ ಎಂದು ಸಂಜಯ್ ಖಾನ್ ಹೇಳಿದರು. ನಾನು ಇದನ್ನು 15 ಸಾವಿರ ರೂಪಾಯಿ ಕೊಟ್ಟು ಖರೀದಿಸಿದ್ದೇನೆ ಎಂದು ಶಾರುಖ್ ಖಾನ್ ಪ್ರತಿಪಾದಿಸಿದರು. ಇಬ್ಬರೂ ನಿಮ್ಮದೇ ಈ ಮೇಕೆ ಎನ್ನಲು ಏನು ಸಾಕ್ಷ್ಯ ಇದೆ ತೆಗೆದುಕೊಂಡು ಬನ್ನಿ ಎಂದು ಕಳುಹಿಸಿದೆವು. ಆದರೆ, ಇಬ್ಬರೂ ಮೇಕೆಯ ಜತೆ ಇರುವ ಫೋಟೊ ತೆಗೆದುಕೊಂಡು ಬಂದಿದ್ದಾರೆ. ಇದರಿಂದ ಪ್ರಕರಣ ಮತ್ತಷ್ಟು ಕಗ್ಗಂಟಾಗಿದೆ” ಎಂದು ರೇವಾ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಹಾತೇಂದ್ರ ನಾಥ್ ಶರ್ಮಾ ತಿಳಿಸಿದ್ದಾರೆ.
ಇದನ್ನೂ ಓದಿ: Viral News: ಪಕ್ಕದ ಮನೆಯವರ 32 ಮರ ಕಡಿದವನಿಗೆ 12 ಕೋಟಿ ರೂ. ದಂಡ, ಕತ್ತರಿಸಲು ಕಾರಣ ವಿಚಿತ್ರ
“ಇಬ್ಬರು ತೋರಿಸುತ್ತಿರುವ ಮೇಕೆ ಒಂದೇ ತೆರನಾಗಿದೆ. ಪೊಲೀಸ್ ಠಾಣೆಗೆ ತಂದಿರುವ ಮೇಕೆಯು ಫೋಟೊದಲ್ಲಿ ಇದ್ದಂತೆಯೇ ಇದೆ. ಹಾಗಾಗಿ, ಇದು ಯಾರ ಮೇಕೆ ಎಂದು ತೀರ್ಮಾನಿಸಲು ಆಗಿಲ್ಲ. ಇದಕ್ಕಾಗಿ ನಾವು ವಾರ್ಡ್ ಕಾರ್ಪೊರೇಟರ್‌ರನ್ನು ಕರೆಸಿ, ಸಂಧಾನ ಮಾಡಿಸಲು ಮುಂದಾದೆವು. ಆದರೂ, ಸಮಸ್ಯೆ ಬಗೆಹರಿದಿಲ್ಲ. ಮೇಕೆಗೆ ಏನು ತಿನ್ನಿಸಬೇಕು ಎಂಬುದು ನಮಗೂ ಗೊತ್ತಿಲ್ಲ. ಸದ್ಯಕ್ಕೆ, ಸಂಜಯ್ ಖಾನ್ ಬಳಿಯೇ ಮೇಕೆ ಇದೆ” ಎಂದು ಹೇಳಿದ್ದಾರೆ.