ಗಾಂಧಿನಗರ: ಗುಜರಾತ್‌ನಲ್ಲಿ ಆಗ ತಾನೆ ಜನಿಸಿದ ಮಗುವಿಗೆ ತಾಯಿಯ ಚಟವೇ ಮುಳುವಾಗಿದೆ. ಅದರಲ್ಲೂ, ಮಗುವಿನ ತಾಯಿಯು ದಿನಕ್ಕೆ 10-15 ಬಾರಿ ತಂಬಾಕು ಜಗಿಯುತ್ತಿದ್ದ ಕಾರಣ ಮಗುವಿನ ಆರೋಗ್ಯ ಬಿಗಡಾಯಿಸಿದೆ. ಆದಾಗ್ಯೂ, ವೈದ್ಯರು ಹರಸಾಹಸ ಪಟ್ಟು ಮಗುವಿಗೆ ಚಿಕಿತ್ಸೆ ನೀಡಿದ್ದು, ಈ ಪ್ರಕರಣವು (Viral News) ತಂಬಾಕು ಸೇವಿಸುವ ಮಹಿಳೆಯರಿಗೆ, ಅದರಲ್ಲೂ ಗರ್ಭಿಣಿಯರಿಗೆ ದೊಡ್ಡ ಪಾಠವಾಗಿದೆ.
ಹೌದು, ಗುಜರಾತ್‌ನ ಮೆಹ್ಸಾನ ಆಸ್ಪತ್ರೆಯಲ್ಲಿ ಜನಿಸಿದ ಮಗು 2.4 ಕೆ.ಜಿ ಇತ್ತು. ನೋಡಲು ಮುದ್ದಾಗಿಯೂ ಇತ್ತು. ಆದರೆ, ಯಾವಾಗ ಮಗು ಕಣ್ಣು ತೆರೆಯಲಿಲ್ಲ, ಅಳಲಿಲ್ಲವೋ ಆಗ ವೈದ್ಯರಿಗೆ ಅನುಮಾನ ಶುರುವಾಯಿತು. ಮಗುವಿನ ದೇಹ ನೀಲಿ ಬಣ್ಣಕ್ಕೆ ತಿರುಗಿದೆ. ರಕ್ತದೊತ್ತಡವು ತೀವ್ರವಾಗಿ ಕುಸಿದಿದೆ. ಇದರಿಂದ ಆತಂಕಗೊಂಡ ವೈದ್ಯರು ಕೂಡಲೇ ಮಗುವಿಗೆ ವೆಂಟಿಲೇಟರ್ ಅಳವಡಿಸಿದ್ದಾರೆ. ಆದರೂ, ಪರಿಸ್ಥಿತಿ ಬಿಗಡಾಯಿಸಿದ ಕಾರಣ ಕೂಡಲೇ ಮಗುವನ್ನು ಅಹ್ಮದಾಬಾದ್ ಆಸ್ಪತ್ರೆಗೆ ಕಳುಹಿಸಿದ್ದಾರೆ.
ಅಹ್ಮದಾಬಾದ್ ಆಸ್ಪತ್ರೆಯಲ್ಲಿ ಮಗುವಿನ ಆರೋಗ್ಯವನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ವೈದ್ಯರಿಗೇ ಅಚ್ಚರಿಯಾಗಿದೆ. ಮಗುವಿನ ದೇಹದಲ್ಲಿ 60 ಎಂಎಲ್ ನಿಕೋಟಿನ್ ಅಂಶ ಅಂದರೆ, ವಯಸ್ಕರಲ್ಲಿ ಕಂಡುಬರುವ ನಿಕೋಟಿನ್ ಅಂಶಕ್ಕಿಂತ 3 ಸಾವಿರ ಪಟ್ಟು ಹೆಚ್ಚು ನಿಕೋಟಿನ್ ಅಂಶ ಕಂಡುಬಂದಿದೆ. ಕೊನೆಗೆ ವೈದ್ಯರು ಹರಸಾಹಸ ಪಟ್ಟು ಮಗುವನ್ನು ಅಪಾಯದಿಂದ ಪಾರುಮಾಡಿದ್ದಾರೆ. ಬಳಿಕ ಮಗುವನ್ನು ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಮಾಡಿದ್ದಾರೆ.
ಇದನ್ನೂ ಓದಿ: Viral Video: ಹೌ ಡೇರ್ ಯೂ… ವಿಮಾನದಲ್ಲಿ ಮಗಳನ್ನು ಮುಟ್ಟಿದ ಪುಂಡನ ಚಳಿ ಬಿಡಿಸಿದ ತಂದೆ; ವಿಡಿಯೊ ವೈರಲ್
ನಿತ್ಯವೂ ತಂಬಾಕು ಸೇವನೆ
ಮಹಿಳೆಗೆ ನಿತ್ಯವೂ ತಂಬಾಕು ಸೇವನೆಯ ಚಟ ಇತ್ತು. ಅದರಲ್ಲೂ, ಗರ್ಭಿಣಿಯಾಗಿದ್ದಾಗ ದಿನಕ್ಕೆ 10-15 ಬಾರಿ ತಂಬಾಕು ಸೇವಿಸುತ್ತಿದ್ದರು. ಇದರಿಂದಾಗಿ ಮಗುವಿನ ದೇಹದಲ್ಲಿ ಅತಿ ಹೆಚ್ಚಿನ ಪ್ರಮಾಣದ ನಿಕೋಟಿನ್ ಅಂಶ ಕಂಡುಬಂದಿದೆ. ಆಗ ತಾನೆ ಜನಿಸಿದ ಮಗುವಿನಲ್ಲಿ ನಿಕೋಟಿನ್ ಅಂಶವು ಗಣನೀಯವಾಗಿ ಹೆಚ್ಚಾಗಿರುವುದನ್ನು ಕಂಡು ವೈದ್ಯರು ತಾಯಿಯ ಚಟಗಳ ಬಗ್ಗೆ ತಪಾಸಣೆ ನಡೆಸಿದ್ದಾರೆ. ಆಗ ಮಹಿಳೆಗೆ ತಂಬಾಕು ಸೇವಿಸುವ ಚಟವಿತ್ತು ಎಂಬುದು ಗೊತ್ತಾಗಿದೆ. ಯಾವುದೇ ಕಾರಣಕ್ಕೂ ಗರ್ಭಿಣಿಯರು ತಂಬಾಕು ಸೇವಿಸಬಾರದು ಎಂದು ವೈದ್ಯರು ಸೂಚಿಸಿದ್ದಾರೆ.