ಫತೇಪುರ್ (ಉತ್ತರಪ್ರದೇಶ): ಒಂದು ಆಟೊ ರಿಕ್ಷಾದಲ್ಲಿ ಎಷ್ಟು ಜನ ಪ್ರಯಾಣಿಸಬಹುದು? ಕಾನೂನು ಪ್ರಕಾರ, ಮೂವರು ಪ್ರಯಾಣಿಕರು ಮತ್ತು ಒಬ್ಬ ಚಾಲಕ. ನಾಲ್ಕನೇ ಪ್ರಯಾಣಿಕರಿದ್ದರೆ ಅಲ್ಲಿ ಜಾಗವೂ ಇರುವುದಿಲ್ಲ. ಒಂದು ವೇಳೆ ಪ್ರಯಾಣಿಕರು ಹೊಂದಾಣಿಕೆ ಮಾಡಿಕೊಂಡು ಕೂರುತ್ತೇವೆ ಎಂದರೂ ಚಾಲಕ ಡಬಲ್ ಚಾರ್ಜ್ ಆಗುತ್ತದೆ ಅನ್ನುತ್ತಾನೆ ಬೆಂಗಳೂರಲ್ಲಿ! ಇನ್ನು ಗ್ರಾಮೀಣ ಭಾಗದಲ್ಲಿ ೧೦-೧೨ ಜನ ಹಾಗೋ ಹೀಗೋ ನೇತಾಡಿಕೊಂಡು ಹೋಗಬಹುದೇನೋ.
ಆದರೆ, ಉತ್ತರ ಪ್ರದೇಶದ ಫತೇಪುರದಲ್ಲಿ ಪೊಲೀಸರು ರಿಕ್ಷಾದಲ್ಲಿರುವ ಪ್ರಯಾಣಿಕರನ್ನು ನೋಡಿ ದಂಗಾಗಿ ಹೋಗಿದ್ದಾರೆ! ಪೊಲೀಸರು ರಿಕ್ಷಾವನ್ನು ತಡೆದು ನಿಲ್ಲಿಸಿ ಒಬ್ಬೊಬ್ಬರನ್ನೇ ಇಳಿಸಿ ಲೆಕ್ಕ ಹಾಕುತ್ತಿರುವ ದೃಶ್ಯ ವೈರಲ್ ಆಗಿದೆ.. ೧, ೨, ೩, ೪, ೫, ೬, ೭, ೮.. ೨೦, ೨೧, ೨೨, ೨೩, ೨೪, ೨೫, ೨೬ ಇಷ್ಟಾದರೂ ಲೆಕ್ಕ ಮುಗಿಯುವುದೇ ಇಲ್ಲ. ರಿಕ್ಷಾದ ನಾನಾ ಭಾಗಗಳಿಂದ ಜನ ಇಳಿಯುತ್ತಲೇ ಇದ್ದಾರೆ. ಮಕ್ಕಳು, ಯುವಕರು, ಹಿರಿಯರು ಎಲ್ಲಾ ಸೇರಿ ಒಟ್ಟಾರೆ ೨೭ ಮಂದಿ ಆ ರಿಕ್ಷಾದಲ್ಲಿದ್ದರು! ಅದು ಹೇಗೆ ಒಳಗೆ ಕೂತಿದ್ದರೋ ದೇವರೇ ಬಲ್ಲ!
ವಿಷಯ ಅದಲ್ಲ.. ಪೊಲೀಸರು ಮೊದಲು ಈ ರಿಕ್ಷಾವನ್ನು ನೋಡಿದ್ದು ಫತೇಪುರದ ಬಿಂಡ್ಕಿ ಕೋಟ್ವಾಲಿ ಪ್ರದೇಶದಲ್ಲಿ. ಅಲ್ಲಿಂದ ಸುಮಾರು ದೂರ ಬೆನ್ನಟ್ಟಿಕೊಂಡು ಬಂದು ತಡೆದು ನಿಲ್ಲಿಸಿದ್ದಾರೆ. ನಿಜವೆಂದರೆ, ಇದರಲ್ಲಿ ಲೆಕ್ಕಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಕೂರಿಸಿಕೊಂಡು ಹೋಗುತ್ತಿದ್ದಾರೆ ಅಂತ ಈ ಆಟೊವನ್ನು ತಡೆದಿದ್ದೇನೂ ಅಲ್ಲ!
ರಸ್ತೆಯಲ್ಲಿ ನಿಂತು ಸ್ಪೀಡ್‌ಗನ್ ಹಿಡಿದುಕೊಂಡಿದ್ದ ಪೊಲೀಸರಿಗೆ ರಿಕ್ಷಾವೊಂದು ಓವರ್‌ಸ್ಪೀಡಲ್ಲಿ ಹೋಗ್ತಾ ಇರುವುದು ಗೊತ್ತಾಗಿದೆ. ಅವರು ಬೆನ್ನು ಹತ್ತಿದ್ದು ಓವರ್‌ಸ್ಪೀಡಲ್ಲಿ ಓಡುತ್ತಿದ್ದ ರಿಕ್ಷಾವನ್ನು. ಆದರೆ ಸಿಕ್ಕಿದ್ದು ೨೭ ಜನ! ಅಂದರೆ, ಇಷ್ಟೊಂದು ಜನ ಪ್ರಯಾಣಿಕರನ್ನು ಹಾಕಿಕೊಂಡು ಆ ಚಾಲಕ ಅಷ್ಟು ವೇಗವಾಗಿ ರಿಕ್ಷಾ ಓಡಿಸುತ್ತಿದ್ದ ಎಂದರೆ ಯಾವುದಾದರೂ ಪ್ರಶಸ್ತಿಯನ್ನು ಹೊಸದಾಗಿ ಸ್ಥಾಪಿಸಿ ಕೊಡುವ ಬಗ್ಗೆ ಪರಿಗಣಿಸಬಹುದು.
ರಿಕ್ಷಾದಲ್ಲಿ ಡ್ರೈವರ್ ಕೂರುವ ಜಾಗದಲ್ಲೇ ಮೂವರು ಯುವಕರು ಮತ್ತು ಒಬ್ಬ ಬಾಲಕನಿದ್ದಾನೆ. ಸೀಟಿನ ಹಿಂಭಾಗದಿಂದ ಕೆಲವು ಹುಡುಗರು ಎದ್ದುಕೊಂಡು ಬರುತ್ತಾರೆ. ಮಧ್ಯದ ಪ್ರಯಾಣಿಕರು ಕುಳಿತುಕೊಳ್ಳುವ ಜಾಗದಲ್ಲಂತೂ ಫುಲ್ ಉಪ್ಪಿನಕಾಯಿ!
ಆಶ್ಚರ್ಯವೆಂದರೆ, ಇಷ್ಟು ಜನ ಪ್ರಯಾಣ ಮಾಡುತ್ತಿದ್ದರೂ ಯಾರೂ ನೇತಾಡಿಕೊಂಡು ಪ್ರಯಾಣಿಸಿಲ್ಲ. ಹೊರಗಡೆಯಿಂದ ನೋಡಿದಾಗ ವಿಪರೀತ ಜನ ಇದ್ದಾರೆ ಅಂತ ಅನಿಸುವುದೂ ಇಲ್ಲ. ಆ ರೀತಿ ಸ್ಪೇಸ್ ಮ್ಯಾನೇಜ್‌ಮೆಂಟ್ ಮಾಡಿಕೊಂಡು ಕುಳಿತಿರುವ ಇವರ ಕೆಪ್ಯಾಸಿಟಿಯನ್ನು ಮೆಚ್ಚದಿರುವುದುಂಟೇ!
ತೆಲಂಗಾಣ ಬಳಿಕ ಇದು ವಿಶ್ವ ದಾಖಲೆ ಆಗಬಹುದಾ!?
ಫತೇಪುರದಲ್ಲಿ ಪತ್ತೆಯಾದ ಈ ರಿಕ್ಷಾದ ಪ್ರಯಾಣಿಕರ ಸಂಖ್ಯೆ ವಿಶ್ವದಾಖಲೆ ಆಗಬಹುದಾ ಎನ್ನುವುದು ಈಗಿರುವ ಕುತೂಹಲ! ೨೭ ಪ್ರಯಾಣಿಕರಲ್ಲಿ ಮೂವರು ಸಣ್ಣ ಹುಡುಗಿಯರು ಬಿಟ್ಟರೆ ಉಳಿದವರೆಲ್ಲರೂ ಪುರುಷರೇ.
ಆದರೆ, ೨೦೧೯ರಲ್ಲಿ ತೆಲಂಗಾಣದ ಬೊಂಗಿರ್‌ನಲ್ಲಿ ಒಂದೇ ರಿಕ್ಷಾದಲ್ಲಿ ೨೪ ಮಂದಿ ಪ್ರಯಾಣಿಸಿದ್ದು ಇದುವರೆಗಿನ ಅಕ್ರಮ ದಾಖಲೆಯಾಗಿತ್ತು. ಆವತ್ತು ರಿಕ್ಷಾದಲ್ಲಿದವರು ಚಾಲಕ ಬಿಟ್ಟರೆ ಉಳಿದವರೆಲ್ಲರೂ ಮಹಿಳೆಯರೆ! ಅವರೆಲ್ಲ ಚಂದ ಚಂದ ಸೀರೆ ಉಟ್ಟುಕೊಂಡು ಯಾವುದೋ ಮದುವೆ ಕಾರ್ಯಕ್ರಮಕ್ಕೆ ಹೊರಟಂತೆ ಇತ್ತು. ಆಗಲೇ ಅದು ವಿಶ್ವ ದಾಖಲೆ ಅಂತೆಲ್ಲ ಇಂಟರ್ನೆಟ್‌ನಲ್ಲಿ ಚರ್ಚೆ ಆಗಿತ್ತು. ಅದುವೇ ವಿಶ್ವ ದಾಖಲೆ ಎಂದಾದರೆ, ಆ ದಾಖಲೆಯನ್ನು ಫತೇಪುರ್ ಘಟನೆ ಮುರಿದಿದೆ ಎಂದು ಧೈರ್ಯವಾಗಿ ಹೇಳಬಹುದು!
ಇದನ್ನೂ ಓದಿ| ₹28ಕ್ಕೆ ಆಟೋ ಚಾಲಕನ ಜತೆ ಹೋರಾಡಿ ಮೃತಪಟ್ಟವನ ಕುಟುಂಬಕ್ಕೆ ಸಿಗಲಿಗೆ ₹43 ಲಕ್ಷ