ನವದೆಹಲಿ: ತುಂಬ ಬ್ಯುಸಿ ಇದ್ದೇವೆ ಎಂದೋ, ಅಡುಗೆ ಮಾಡಲು ಮನಸ್ಸಿಲ್ಲವೆಂದೋ, ಬೇಕಾದ ತಿಂಡಿ ಮನೆಯಲ್ಲಿ ಮಾಡಲು ಆಗುವುದಿಲ್ಲವೆಂದೋ ಸ್ವಿಗ್ಗಿ ಅಥವಾ ಜೊಮ್ಯಾಟೊದಲ್ಲಿ ಊಟ ಅಥವಾ ತಿಂಡಿ ಆರ್ಡರ್ ಮಾಡುತ್ತೇವೆ. ಆದರೆ, ಬಹುತೇಕ ಡೆಲಿವರ್ ಬಾಯ್‌ಗಳು ಕೂಡ ಸಮಯಕ್ಕೆ ಸರಿಯಾಗಿ ಆರ್ಡರ್ ಮಾಡಿದ ತಿಂಡಿಯನ್ನು ಮನೆಗೆ ತಂದು ಕೊಟ್ಟು ಹೋಗುತ್ತಾರೆ. ಆದರೆ, ಡೆಲಿವರಿ ಬಾಯ್ ಒಬ್ಬ ಟ್ರಾಫಿಕ್ ಸಿಗ್ನಲ್ ಬೇಜಾರು ಕಳೆಯಲು ಆಹಾರ ಡೆಲಿವರಿ ಮಾಡುವ ಬ್ಯಾಗ್‌ನಿಂದ ಒಂದಿಷ್ಟು ಫ್ರೆಂಚ್ ಫ್ರೈಸ್ ತಿಂದಿದ್ದಾನೆ. ಈ ವಿಡಿಯೊ ಈಗ ಭಾರಿ (Viral Video) ವೈರಲ್ ಆಗಿದೆ.
ಹೌದು, ಫುಡ್ ಡೆಲಿವರಿ ಬಾಯ್ ಒಬ್ಬ ಬೈಕ್ ಮೇಲೆ ತೆರಳುತ್ತಿರುತ್ತಾನೆ. ಆಗ ಟ್ರಾಫಿಕ್ ಸಿಗ್ನಲ್ ಬೀಳುತ್ತದೆ. ಟ್ರಾಫಿಕ್ ಸಿಗ್ನಲ್‌ನಲ್ಲಿ ಕಾಯುವ ಬೇಸರ ಕಳೆಯಲು ಆತ ಡೆಲಿವರಿ ಬ್ಯಾಗ್‌ಗೆ ಕೈ ಹಾಕಿ ಒಂದಿಷ್ಟು ಫ್ರೆಂಚ್ ಫ್ರೈಸ್‌ಗಳನ್ನು ಮೆಲ್ಲುತ್ತಾನೆ. Proud To Be An Indian ಎಂಬ ಫೇಸ್‌ಬುಕ್ ಖಾತೆಯಲ್ಲಿ ವಿಡಿಯೊ ಅಪ್‌ಲೋಡ್ ಆಗುತ್ತಲೇ 50 ಸಾವಿರಕ್ಕೂ ಜನ ಅದನ್ನು ನೋಡಿದ್ದಾರೆ. ಹಾಗೆಯೇ, ನೂರಾರು ಜನ ಪ್ರತಿಕ್ರಿಯಿಸಿದ್ದಾರೆ.
ವೈರಲ್ ವಿಡಿಯೊ
ವಿಡಿಯೊ ವೈರಲ್ ಆಗುತ್ತಲೇ ಜನ ಹಲವು ರೀತಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. “ಡೆಲಿವರಿ ಬಾಯ್ ತಿಂದ ಆಹಾರವನ್ನು ಆರ್ಡರ್ ಮಾಡಿದವನ ಬಗ್ಗೆ ಮರುಕವಿದೆ” ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರು, “ವಿಡಿಯೊ ನೋಡಿ ಜಡ್ಜ್ ಮಾಡುವುದು ತಪ್ಪು. ಆತನು ಡೆಲಿವರಿ ಬ್ಯಾಗ್‌ಗೆ ಕೈ ಹಾಕಿ ಆಹಾರ ತಿಂದ ಮಾತ್ರಕ್ಕೆ, ಅದು ಗ್ರಾಹಕನದ್ದೇ ಎಂದರ್ಥವಲ್ಲ. ಆತ ತನ್ನ ಆಹಾರವನ್ನೂ ಬ್ಯಾಗ್‌ನಲ್ಲಿ ತೆಗೆದುಕೊಂಡು ಹೋಗುತ್ತಿರಬಹುದು” ಎಂದು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Viral Video : ಆಗಸದಲ್ಲಿ ಹಾರುವ ಮಹಿಳೆ! ಭಯವೇ ಇಲ್ಲದ ಇವರ ನೆಗೆತ ನೋಡಿ…
ಇನ್ನೂ ಕೆಲವರು “ಆಹಾರ ಪ್ಯಾಕ್ ಮಾಡುವಾಗಲೇ ಸಮರ್ಪಕವಾಗಿ ಪ್ಯಾಕ್ ಮಾಡಬೇಕು. ಇಲ್ಲದಿದ್ದರೆ ಡೆಲಿವರಿ ಬಾಯ್ ಉಳಿಸಿದ್ದನ್ನು ನಾವು ತಿನ್ನಬೇಕಾಗುತ್ತದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದಕ್ಕೂ ಮೊದಲು ಕೂಡ ಡೆಲಿವರಿ ಬಾಯ್‌ಗಳು ಗ್ರಾಹಕರು ಆರ್ಡರ್ ಮಾಡಿದ ಪೊಟ್ಟಣದಿಂದ ತಿಂಡಿ ತಿಂದ ವಿಡಿಯೊಗಳು ವೈರಲ್ ಆಗಿದ್ದವು. ಆದರೆ, ಈ ವಿಡಿಯೊದಲ್ಲಿ ಡೆಲಿವರಿ ಬಾಯ್ ತಿಂದಿದ್ದು ಯಾರ ತಿಂಡಿಯನ್ನು ಎಂಬುದು ಗೊತ್ತಾಗಿಲ್ಲ.