ಪಾಟ್ನಾ : ಪ್ರಾಥಮಿಕ ಶಾಲೆಯಲ್ಲಿ ಓದಿದ ʻಆನೆ ಬಂತಣ್ಣ ಆನೆʼ ಪಾಠ ನೆನಪಿರಬಹುದಲ್ಲವೆ? ದಪ್ ದಪಾ ಎಂದು ಆನೆ ಬಂದಿತ್ತು ಎಂದು ಓದಿರುವುದು ನೆನಪು. ಆದರೆ ಈ ಆನೆ ದಪ್ ದಪಾ ಎಂದು ಬರುತ್ತಿಲ್ಲ. ಬದಲಾಗಿ ಈಜಿಕೊಂಡು ಬರುತ್ತಿದೆ. ಮಾವುತನ ಕೈಯಲ್ಲಿ ಅಂಕುಶವಿದ್ದರೂ, ಆನೆಯೇ ದಾರಿ ತೋರಿಸಿ ಕರೆದುಕೊಂಡು ಹೋಗುತ್ತಿದೆ.
ಆನೆಗಳು ಸಹಜವಾಗಿ ನೀರಿಗೆ ಇಳಿಯುವುದಿಲ್ಲವಂತೆ. ಒಂದು ವೇಳೆ ನೀರಿಗೆ ಇಳಿದರೂ ಸಮರ್ಥವಾಗಿ ಈಜಬಲ್ಲವು. ಆದರೂ ಅವು ಎಷ್ಟಾಗತ್ತೋ ಅಷ್ಟು ನೀರಿನಿಂದ ದೂರ ಇರಲು ಪ್ರಯತ್ನಿಸುತ್ತವೆ. ಅಂಥದ್ದರಲ್ಲಿ ಈ ಗಜರಾಜ ಬರೋಬ್ಬರಿ ಮೂರು ಕಿ.ಮೀ ದೂರ ಈಜಿ ದಡ ಸೇರಿದೆ ಎಂದರೆ ನೀವು ನಂಬಲೇ ಬೇಕು. ಅದೂ ತುಂಬಿ ಹರಿಯುತ್ತಿರುವ ಗಂಗಾನದಿಯಲ್ಲಿ. ತಾನು ಮುಳುಗುತ್ತಿದ್ದರೂ, ಮಾವುತನಿಗೆ ಅಪಾಯವಾಗದಂತೆ ನೋಡಿಕೊಂಡು, ಸೊಂಡಿಲನ್ನು ಮೇಲೆತ್ತಿ ಬಡಿಯುತ್ತ ಈಜುವ ಈ ದೃಶ್ಯ ಅಬ್ಬಾ ಎನ್ನುವಂತಿದೆ.
ಇದನ್ನೂ ಓದಿ | Viral video: ಈ 90ರ ಅಜ್ಜಿ 120 ಬೀದಿ ನಾಯಿಗಳ ಅನ್ನದಾತೆ! ಬಿಸಿಬಿಸಿ ಬಿರಿಯಾನಿನೂ ಕೊಡ್ತಾರೆ!
ಅಂದಹಾಗೇ, ಬಿಹಾರದಲ್ಲಿ ಈ ದೃಶ್ಯ ಕಂಡು ಬಂದಿದ್ದು, ಈ ವಿಡಿಯೊವನ್ನು ಪತ್ರಕರ್ತ ಉತ್ಕರ್ಷ ಸಿಂಗ್ ಎನ್ನುವರು ತಮ್ಮ ಟ್ವೀಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಬಿಹಾರದ ರಾಘವಪುರ ಪ್ರದೇಶದಿಂದ ಪಾಟ್ನಾದವರೆಗೆ ಮಾವುತನನ್ನು ಕೂರಿಸಿಕೊಂಡು ಆನೆ ಈಜಿದ ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿವೆ.