ಮುಂಬೈ: ತಂದೆ ಕೆಲಸ ಮಾಡುವ ಪೊಲೀಸ್ ಠಾಣೆಯಲ್ಲಿಯೇ ಮಗನೂ ಪೊಲೀಸ್ ಆದರೆ, ತಾಯಿ ಟೀಚರ್ ಆಗಿರುವ ಶಾಲೆಯಲ್ಲಿಯೇ ಮಗಳು ಕೂಡ ಶಿಕ್ಷಕಿಯಾಗಿ ಸೇರಿದರೆ, ಅಂತಹ ಭಾವುಕ ಕ್ಷಣ ಮತ್ತೊಂದಿರಲಿಕ್ಕಿಲ್ಲ. ಇಂತಹ ಭಾವುಕ ಕ್ಷಣಗಳಿಗೆ ತಾಯಂದಿರ ದಿನವಾದ ಭಾನುವಾರ ಇಂಡಿಗೋ ವಿಮಾನದ ಪ್ರಯಾಣಿಕರು, ಸಿಬ್ಬಂದಿ ಸಾಕ್ಷಿಯಾಗಿದ್ದಾರೆ. ಹೌದು, ಒಂದೇ ವಿಮಾನದಲ್ಲಿ ತಾಯಿ ಹಾಗೂ ಮಗಳು ಗಗನಸಖಿಯರಾಗಿ ಕಾರ್ಯನಿರ್ವಹಿಸಿದ್ದು, ಇದೇ ವೇಳೆ ಮಗಳು ತಾಯಿಯನ್ನು ಇಡೀ ಪ್ರಯಾಣಿಕರಿಗೆ ಪರಿಚಯಿಸಿದ ವಿಡಿಯೊ ಈಗ ವೈರಲ್ (Viral Video) ಆಗಿದೆ.
ಇಂಡಿಗೋ ವಿಮಾನದಲ್ಲಿ ನಬೀರಾ ಸಾಶ್ಮಿ ಎಂಬ ಯುವತಿಯು ಪಿ.ಎ ಸಿಸ್ಟಂ (ಪಬ್ಲಿಕ್ ಅನೌನ್ಸ್‌ಮೆಂಟ್ ಸಿಸ್ಟಂ) ಮೂಲಕ ತನ್ನ ತಾಯಿಯನ್ನು ಪ್ರಯಾಣಿಕರಿಗೆ ಪರಿಚಯಿಸಿದ್ದಾರೆ. “ಇವರು ನನ್ನ ತಾಯಿ. ಆರು ವರ್ಷಗಳಿಂದ ಅವರು ಗಗನಸಖಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ನಾನು ಇದೇ ಮೊದಲ ಬಾರಿಗೆ ವಿಮಾನದಲ್ಲಿ ಆಕೆ ಸಮವಸ್ತ್ರ ಧರಿಸಿರುವುದನ್ನು ನೋಡುತ್ತಿದ್ದೇನೆ. ನಾನು ಅವಳ ಶೂ ಧರಿಸಿದ್ದೇನೆ” ಎಂದು ಹೇಳಿದಾಗ ಪ್ರಯಾಣಿಕರೆಲ್ಲರೂ ಭಾವುಕರಾದರು.
ಇಲ್ಲಿದೆ ಭಾವುಕ ಕ್ಷಣಗಳ ವಿಡಿಯೊ
ಇದನ್ನೂ ಓದಿ: IPL 2023: ಟ್ರಾಲಿ ಬ್ಯಾಗ್ನಲ್ಲಿ ಜಾಲಿ ರೈಡ್ ಮಾಡಿದ ಚಹಲ್; ವಿಡಿಯೊ ವೈರಲ್
ಮಾತು ಮುಂದುವರಿಸಿದ ನಬೀರಾ, “ನನ್ನ ತಾಯಿಯನ್ನು ಮೊದಲ ಬಾರಿಗೆ ವಿಮಾನದಲ್ಲಿ ನೋಡುತ್ತಿರುವ ಖುಷಿಯನ್ನು ಹಂಚಿಕೊಳ್ಳಲು ಪದಗಳೇ ಬರುತ್ತಿಲ್ಲ. ನಾನು ಇಂದು ಅವಳ ಪರವಾಗಿ ಅನೌನ್ಸ್ ಮಾಡುತ್ತಿರುವುದು, ಅವಳ ಕೆಲಸ ಮಾಡುತ್ತಿರುವುದು ಖುಷಿ ತಂದಿದೆ. ಇದರಿಂದ ಅವಳಿಗೂ ಹೆಮ್ಮೆ ಎನಿಸಿರಬಹುದು” ಎನ್ನುತ್ತಲೇ ಪ್ರಯಾಣಿಕರೆಲ್ಲರೂ ಚಪ್ಪಾಳೆ ತಟ್ಟಿದರು. ಯುವತಿಯ ತಾಯಿಯು ಕಣ್ಣೀರು ಹಾಕುತ್ತ ಬಂದು ಮಗಳಿಗೆ ಮುತ್ತು ಕೊಟ್ಟರು. ಆಗ ವಿಮಾನದ ಬೇರೆ ಸಿಬ್ಬಂದಿಯೂ ಭಾವುಕರಾಗಿದ್ದರು. ಈ ವಿಡಿಯೊವನ್ನು ಇಂಡಿಗೋ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಲಾಗಿದೆ.