Site icon Vistara News

Viral Video: ಪ್ರಜ್ಞೆ ತಪ್ಪಿದ ಹಾವಿನ ಪ್ರಾಣ ಉಳಿಸಿದ ಕಾನ್‌ಸ್ಟೇಬಲ್‌; ಶಹಬ್ಬಾಶ್‌ ಎಂದ ಜನ

sanke

sanke

ಭೋಪಾಲ್‌: ಹಾವು ಕಂಡರೆ ಮಾರು ದೂರ ಓಡಿ ಹೋಗುವವರೇ ಅಧಿಕ. ಇನ್ನು ಪ್ರಜ್ಞೆ ತಪ್ಪಿ ಬಿದ್ದ ಹಾವಿನ ಬಾಯಿಗೆ ಬಾಯಿ ಕೊಟ್ಟು ಸಿಪಿಆರ್‌ ನೀಡುವುದನ್ನು ಊಹಿಸಲೂ ಸಾಧ್ಯವಿಲ್ಲ. ಆದರೆ ಇಲ್ಲೊಬ್ಬರು ಪೊಲೀಸ್‌ ಕಾನ್‌ಸ್ಟೇಬಲ್‌ ನಾವು ಊಹಿಸಿಕೊಳ್ಳಲೂ ಸಾಧ್ಯವಿಲ್ಲದ ಈ ಮಾನವೀಯ ಕಾರ್ಯದ ಮೂಲಕ ಗಮನ ಸೆಳೆದಿದ್ದಾರೆ. ಪ್ರಜ್ಞೆ ತಪ್ಪಿ ಬಿದ್ದಿದ್ದ ಹಾವಿಗೆ ಅವರು ಸಿಪಿಆರ್‌ (Cardiopulmonary Resuscitation ಅಥವಾ ಹೃದಯ ಮತ್ತು ಶ್ವಾಸಕೋಶಕ್ಕೆ ಪ್ರಚೋದನೆ ನೀಡುವುದು ಅಥವಾ ಬಾಯಲ್ಲಿ ಬಾಯಿಟ್ಟು ಊದುವುದು) ನೀಡುವ ದೃಶ್ಯ ಇದೀಗ ವೈರಲ್‌ (Viral Video) ಆಗಿದೆ. ಅವರ ಕಾರ್ಯಕ್ಕೆ ಹಲವರು ಶಹಬ್ಬಾಶ್‌ ಎಂದಿದ್ದಾರೆ.

ಏನಿದು ಘಟನೆ?

ಮಧ್ಯಪ್ರದೇಶದ ನರ್ಮದಾಪುರಂ ಈ ಅಪರೂಪದ ಘಟನೆಗೆ ಸಾಕ್ಷಿಯಾಗಿದೆ. ಅತುಲ್‌ ಶರ್ಮ ಎನ್ನುವ ಕಾನ್ಸ್‌ಟೇಬಲ್‌ ಹಾವಿನ ಪ್ರಾಣ ಕಾಪಾಡಿದ ವ್ಯಕ್ತಿ. ವಿಷ ರಹಿತ ಹಾವೊಂದು ಜನ ವಸತಿ ಪ್ರದೇಶಕ್ಕೆ ನುಗಿತ್ತು. ಅದನ್ನು ಹೊರ ಹಾಕುವ ಭರದಲ್ಲಿ ಸಾರ್ವಜನಿಕರು ಕ್ರಿಮಿನಾಶಕವನ್ನು ಬಳಸಿದ್ದರಿಂದ ಹಾವು ಪ್ರಜ್ಞೆ ಕಳೆದುಕೊಂಡಿತ್ತು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಸ್ಥಳಕ್ಕೆ ಆಗಮಿಸಿದ ಅತುಲ್‌ ಶರ್ಮ ಮೊದಲು ಹಾವನ್ನು ಕೈಗೆತ್ತಿಕೊಂಡು ಪರಿಶೀಲನೆ ನಡೆಸಿದರು. ಅದು ಜೀವಂತವಾಗಿರುವುದು ಕಂಡು ಬಂದ ಹಿನ್ನಲೆಯಲ್ಲಿ ಹಾವಿನ ಬಾಯಿಗೆ ತಮ್ಮ ಬಾಯಿ ಇಟ್ಟು ಸಿಪಿಆರ್‌ ನೀಡಿದ್ದಾರೆ. ಸ್ವಲ್ಪ ಹೊತ್ತಿನಲ್ಲಿ ಹಾವು ಕೊಂಚ ಚೇತರಿಸಿಕೊಂಡಿದೆ. ಬಳಿಕ ಅದರ ತಲೆಗೆ ನೀರು ಚಿಮುಕಿಸಿದ್ದಾರೆ. ನಂತರ ಇನ್ನೊಮ್ಮೆ ಸಿಪಿಆರ್‌ ನೀಡಲಾಯಿತು. ಜತೆಗೆ ಅತುಲ್‌ ಶರ್ಮ ಹಾವಿನ ತಲೆ, ನೆತ್ತಿಯನ್ನು ಮೃದುವಾಗಿ ಉಜ್ಜಿದರು. ಕೊನೆಗೂ ಚೇತರಿಸಿಕೊಂಡ ಹಾವನ್ನು ಕಾಡಿಗೆ ಬಿಟ್ಟು ಬರಲಾಯಿತು.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ವಿಡಿಯೊ ಹಂಚಿಕೊಳ್ಳಲಾಗಿದೆ. ʼನರ್ಮದಾಪುರಂನಲ್ಲಿ ನಡೆದ ವಿಡಿಯೊ ವೈರಲ್‌ ಆಗಿದೆ. ವಿಷ ಸಿಂಪಡಣೆಯಿಂದ ಪ್ರಜ್ಞೆ ತಪ್ಪಿ ಬಿದ್ದಿದ್ದ ಹಾವಿಗೆ ಪೊಲೀಸ್‌ ಕಾನ್‌ಸ್ಟೇಬಲ್‌ ಸಿಪಿಆರ್‌ ನೀಡಿದ್ದಾರೆʼ ಎಂದು ಬರೆಯಲಾಗಿದೆ. ಅತುಲ್‌ ಶರ್ಮ ಡಿಸ್ಕವರಿ ಚಾನಲ್‌ ನೋಡಿ ಹಾವು ರಕ್ಷಣೆಯ ತಂತ್ರಗಳನ್ನು ಕರಗತ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: Viral Video: ಇತ್ತ ಹುಲಿ ಉಗುರಿನ ರಾದ್ಧಾಂತ; ಅತ್ತ ಹುಲಿಯೊಡನೆ ರಸ್ತೆಯಲ್ಲಿ ವಾಕಿಂಗ್‌!

ಮೆಚ್ಚುಗೆ ಸೂಚಿಸಿದ ನೆಟ್ಟಿಗರು

ಅತುಲ್‌ ಶರ್ಮ ಅವರ ಈ ಮಾನವೀಯ ಕಾರ್ಯವನ್ನು ಹಲವು ಮೆಚ್ಚಿಕೊಂಡಿದ್ದಾರೆ. ʼʼಹಾವಿನ ಬಗ್ಗೆಯೂ ಭಾರತೀಯ ಸಮಾಜದ ಸಹಾನುಭೂತಿ ಅದ್ಭುತʼʼ ಎಂದು ಒಬ್ಬರು ಉದ್ಘಾರ ಹೊರಡಿಸಿದ್ದಾರೆ. “ಪ್ರಕೃತಿ ಮತ್ತು ಜೀವಿಗಳ ಬಗ್ಗೆ ಇರುವ ಅವರ ಪ್ರೀತಿ ಮತ್ತು ಕಾಳಜಿ ನೋಡಿ ಮನಸ್ಸು ತುಂಬಿ ಬಂತು. ದೇವರು ಅವರನ್ನು ಆಶೀರ್ವದಿಸಲಿ. ಕೆಲವು ಜನರಿಗೆ ಇದು ಮೂರ್ಖತನವೆಂದು ಅನಿಸಬಹುದು. ಅವರು ವಿಭಿನ್ನವಾಗಿ ಯೋಚಿಸಲು ಪ್ರಾರಂಭಿಸಬೇಕುʼʼ ಎಂದು ಇನ್ನೊಬ್ಬರು ಹೇಳಿದ್ದಾರೆ. ʼʼಧೈರ್ಯ ಮತ್ತು ಕರುಣೆ ತುಂಬಿದ ಕೆಲಸʼʼ ಎಂದು ಮತ್ತೊಬ್ಬರು ಇದನ್ನು ಬಣ್ಣಿಸಿದ್ದಾರೆ. ಮಾನವೀಯತೆ ಎನ್ನುವುದು ಅತುಲ್‌ ಶರ್ಮನಂತಹವರ ಹೆಸರಿನಲ್ಲಿ ಇನ್ನೂ ಉಸಿರಾಡುತ್ತಿದೆ ಎಂದು ಹಲವರು ನಿಟ್ಟುಸಿರು ಬಿಟ್ಟಿದ್ದಾರೆ. ಒಟ್ಟಿನಲ್ಲಿ ಅವರ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಇದು ಒಂದಷ್ಟು ಜನರಿಗೆ ಪ್ರೇರಣೆಯಾದರೆ ಅವರ ಕಾರ್ಯವೂ ಸಾರ್ಥಕ.

ಕೆಲವು ದಿನಗಳ ಹಿಂದೆ ವ್ಯಕ್ತಿಯೊಬ್ಬರು ಚಲನೆ ಇಲ್ಲದೆ ಬಿದ್ದಿದ್ದ ಊಸರವಳ್ಳಿಗೆ ಇದೇ ರೀತಿ ಸಿಪಿಆರ್‌ ನೀಡಿ ರಕ್ಷಿಸಿದ ವಿಡಿಯೊ ವೈರಲ್‌ ಆಗಿತ್ತು.

Exit mobile version