Site icon Vistara News

Viral Video: ದೆಹಲಿ ರಸ್ತೆ ಮಧ್ಯೆ ಸಾವಿನ ದಾರಿ ತೋರಿಸುವ ಸುರಂಗ!

Pothole

ದೆಹಲಿಯಲ್ಲಿ ಹಲವು ದಿನಗಳಿಂದಲೂ ನಿರಂತರವಾಗಿ ಮಳೆ (Delhi Rain) ಸುರಿಯುತ್ತಿರುವ ಕಾರಣ ರಸ್ತೆಗಳಲ್ಲೆಲ್ಲ ನೀರು ನಿಲ್ಲುತ್ತಿದೆ. ಬರೀ ಇಷ್ಟೇ ಅಲ್ಲ, ನೋಡನೋಡುತ್ತಿದ್ದಂತೆ ಜನಕ್​​ಪುರಿ ಏರಿಯಾದಲ್ಲಿ ರಸ್ತೆ ಮಧ್ಯೆ ದೊಡ್ಡದಾದ ಕುಸಿತ ಉಂಟಾಗಿದೆ. ಥೇಟ್ ಪಾತಾಳಕ್ಕೆ ಹೋಗುವ ಸುರಂಗದಂತೆ ಕಾಣಿಸುತ್ತಿದೆ. ಸಾವಿನ ಮಾರ್ಗದ ಗುಹೆಯಂತೆ ಗೋಚರಿಸುತ್ತಿದೆ. ಅದರ ವಿಡಿಯೊ, ಫೋಟೊಗಳು ವೈರಲ್ ಆಗುತ್ತಿವೆ (Viral Video). ಮಂಗಳವಾರ ಶಾಲೆಯೊಂದರ ಬಸ್​ ಹಾದು ಹೋಗುತ್ತಿದ್ದಂತೆ ಇಲ್ಲಿ ರಸ್ತೆ ಕುಸಿದಿದೆ. ಅದೃಷ್ಟಕ್ಕೆ ಯಾರಿಗೂ ಏನೂ ಆಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಹಾಗೇ, ಆ ದೊಡ್ಡದಾದ ಹೊಂಡದ ಸುತ್ತ ಬ್ಯಾರಿಕೇಡ್ ಹಾಕಿದ್ದಾರೆ. ಆದರೂ ಯಾರಾದರೂ ಕತ್ತಲಲ್ಲಿ ಬಂದು, ಗುಂಡಿಯಲ್ಲಿ ಬಿದ್ದರೆ ಜೀವಕ್ಕೆ ಅಪಾಯ ಗ್ಯಾರಂಟಿ.

ರಸ್ತೆ ವೃತ್ತಾಕಾರವಾಗಿ ಕುಸಿದಿದೆ. ಮೇಲೆ ಹಾಕಿದ್ದ ಸಿಮೆಂಟ್​ ಒಡೆದು ಆ ಹೊಂಡದೊಳಗೆ ಬಿದ್ದಿದೆ. ಅಲ್ಲೆಲ್ಲ ಕಲ್ಲು ಇದೆ. ಒಂದು ಚಿಕ್ಕ ಬಾವಿಯಂತೆ ಕಾಣಿಸುತ್ತಿದೆ. ಸದ್ಯ ವಾಹನಗಳು ಅಲ್ಲೇ ಪಕ್ಕದಲ್ಲಿ ಹಾದು ಹೋಗುತ್ತಿವೆ. ಯಾವುದಾದರೂ ವಾಹನ ಹೋಗುತ್ತಿರುವಾಗಲೇ ಅಡಿನೆಲ ಈ ಪರಿ ಕುಸಿದು ಹೋದರೆ ಖಂಡಿತ ಪ್ರಯಾಣಿಕರ ಜೀವ ಹೋಗುವುದು ಅಥವಾ ಮಾರಣಾಂತಿಕವಾಗಿ ಗಾಯಗೊಳ್ಳುವುದು ನಿಶ್ಚಿತವಾಗಿದೆ.

ಇದನ್ನೂ ಓದಿ: Viral News: ಪ್ರೀತಿಗೆಲ್ಲಿ ಗಡಿ? ಪ್ರಿಯಕರನ ಅರಸಿ 4 ಮಕ್ಕಳ ಜತೆ ಪಾಕ್‌ನಿಂದ ಭಾರತಕ್ಕೆ ಬಂದ ಮಹಿಳೆ, ಮುಂದೇನಾಯ್ತು?

ಮಂಗಳವಾರ ಸಂಜೆ ಹೊತ್ತಿಗೆ ಹೀಗೆ ರಸ್ತೆ ಒಡೆದು ಬೀಳುತ್ತಿದ್ದಂತೆ ಆ ರಸ್ತೆಯಲ್ಲಿ ವಿಪರೀತ ವಾಹನ ದಟ್ಟಣೆಯಾಗಿತ್ತು. ಟ್ರಾಫಿಕ್ ಪೊಲೀಸರು ಕೂಡಲೇ ಅಲ್ಲಿಗೆ ಧಾವಿಸಿ ಬ್ಯಾರಿಕೇಡ್ ಹಾಕಿ, ಟೇಪ್ ಕಟ್ಟಿಟ್ಟಿದ್ದಾರೆ. ಒಂದಿಬ್ಬರು ಪೊಲೀಸರು ಅಲ್ಲೇ ಇದ್ದಾರೆ. ರಸ್ತೆಯ ಮುಕ್ಕಾಲು ಭಾಗ ನಾಶವಾಗಿದ್ದು, ಅಲ್ಲೀಗ ತೀರ ದೊಡ್ಡದೊಡ್ಡ ವಾಹನಗಳು ಹೋಗುವಂತೆ ಇಲ್ಲ. ರಸ್ತೆ ಕುಸಿದು ಬೀಳುತ್ತಿದ್ದಂತೆ ದೆಹಲಿ ನೆಟ್ಟಿಗರು ಟ್ವಿಟರ್, ಫೇಸ್​ಬುಕ್​ನಲ್ಲಿ ಈ ಫೋಟೊ, ವಿಡಿಯೊ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಅರವಿಂದ್ ಕೇಜ್ರಿವಾಲ್ ಸರ್ಕಾರವನ್ನು ಟೀಕಿಸುತ್ತಿದ್ದಾರೆ. ಇತ್ತೀಚೆಗೆ ಅರವಿಂದ್ ಕೇಜ್ರಿವಾಲ್ ಅವರು ದೆಹಲಿ ಅತ್ಯುತ್ತಮ ಎಂದು ಹೇಳಿದ್ದರು. ಅದೇ ವಾಕ್ಯವನ್ನು ಇಟ್ಟುಕೊಂಡು ನೆಟ್ಟಿಗರು ವ್ಯಂಗ್ಯ ಮಾಡುತ್ತಿದ್ದಾರೆ. ಕಳಪೆ ಮಟ್ಟದ ರಸ್ತೆ ನಿರ್ಮಾಣ ಮಾಡಿದರೆ ಹೀಗೇ ಎಂದು ಸರ್ಕಾರವನ್ನು ಹೀಗಳೆಯುತ್ತಿದ್ದಾರೆ.

ದೆಹಲಿಗೆ ಹದಿನೈದು ದಿನಗಳ ಹಿಂದೆ ನೈಋತ್ಯ ಮಾನ್ಸೂನ್ ಕಾಲಿಟ್ಟಿದ್ದು, ಭರ್ಜರಿ ಮಳೆಯಾಗುತ್ತಿದೆ. ಕಳೆದ 24ಗಂಟೆಯಲ್ಲಿ ದೆಹಲಿಯಲ್ಲಿ 0.2ಎಂಎಂನಷ್ಟು ಮಳೆಯಾಗಿದೆ. ಹಲವು ರಸ್ತೆಗಳು ಜಲಾವೃತಗೊಂಡಿವೆ. ಇದೀಗ ಹಾಳಾದ ರಸ್ತೆಯನ್ನು ಕೂಡಲೇ ದುರಸ್ತಿ ಮಾಡುವುದಾಗಿ ಪಿಡಬ್ಲ್ಯೂಡಿ ಇಲಾಖೆ ತಿಳಿಸಿದೆ.

Exit mobile version