ಮುಂಬೈ: ಶಾಲಾ ದಿನಗಳಲ್ಲಿ ಅತಿ ಬೇಸರದ ವಿಚಾರ ಎಂದರೆ ನಾವು ಶಾಲೆಯನ್ನು ಬಿಟ್ಟು ಹೋಗುವುದು ಇಲ್ಲವೇ ಶಿಕ್ಷಕರು ವರ್ಗಾವಣೆ ಅಥವಾ ನಿವೃತ್ತಿ ಹೊಂದುವುದು. ಅದರಲ್ಲೂ, ನಮಗೆ ಇಷ್ಟವಾದವರು, ನೆಚ್ಚಿನ ಶಿಕ್ಷಕ ಅಥವಾ ಶಿಕ್ಷಕಿ ವರ್ಗಾವಣೆಯಾದರೆ, ಅವರು ನಿವೃತ್ತರಾದರೆ ಕಣ್ಣಾಲಿಗಳು ಒದ್ದೆಯಾಗುತ್ತದೆ. ಇನ್ನು ಮುಂದೆ ಅವರು ನಮ್ಮ ಜತೆ ಇರುವುದಿಲ್ಲವಲ್ಲ ಎಂಬ ದುಃಖ ಉಮ್ಮಳಿಸಿ ಬರುತ್ತದೆ. ಇದಕ್ಕೆ ನಿದರ್ಶನ ಎಂಬಂತೆ, ಮಹಾರಾಷ್ಟ್ರದಲ್ಲಿ ಶಿಕ್ಷಕಿಯೊಬ್ಬರು ನಿವೃತ್ತಿಯಾಗಿದ್ದು, ಆ ಶಾಲೆಯ ವಿದ್ಯಾರ್ಥಿನಿಯರು ಕಣ್ಣೀರು ಹಾಕಿ, ಭಾರವಾದ ಹೃದಯದಿಂದ ಬೀಳ್ಕೊಟ್ಟಿದ್ದಾರೆ. ಆ ವಿಡಿಯೊ (Viral Video) ಈಗ ವೈರಲ್ ಆಗಿದೆ.
ಹೌದು, ಹತ್ತಾರು ವರ್ಷಗಳ ಕಾಲ ಅದೇ ಶಾಲೆಯಲ್ಲಿ ಮಕ್ಕಳಿಗೆ ಕಲಿಸಿ, ತಿದ್ದಿ-ತೀಡಿದ ಶಿಕ್ಷಕಿಯು ನಿವೃತ್ತಿ ಹೊಂದಿದ್ದಾರೆ. ಇದರಿಂದ ಬೇಸರಗೊಂಡ ವಿದ್ಯಾರ್ಥಿಗಳು ಶಿಕ್ಷಕಿಯನ್ನು ತಬ್ಬಿಕೊಂಡು, ಕಣ್ಣೀರು ಹಾಕಿ, ಭಾರವಾದ ಮನಸ್ಸು ಹಾಗೂ ಹೃದಯದಿಂದ ಅವರನ್ನು ಬೀಳ್ಕೊಟ್ಟಿದ್ದಾರೆ. ಮಕ್ಕಳ ಪ್ರೀತಿ-ವಿಶ್ವಾಸವನ್ನು ನೋಡಿದ ಶಿಕ್ಷಕಿಯೂ ಭಾರವಾದ ಹೆಜ್ಜೆಗಳನ್ನು ಹಾಕುತ್ತ ಮನೆಗೆ ತೆರಳಿದ್ದಾರೆ.
ಭಾವುಕ ಕ್ಷಣಗಳ ವಿಡಿಯೊ
My first Guru, माझी आई…
— Arohi | Songstress (@soArohic) July 3, 2023
I recieved this video after 2 days but still making me teary eyed..
आई तू महान आहेस❣️ pic.twitter.com/TDQmMLDTcq
ಭಾವುಕ ಕ್ಷಣಗಳು ಇರುವ ವಿಡಿಯೊವನ್ನು ಶಿಕ್ಷಕಿಯ ಪುತ್ರಿ ಆರೋಹಿ ಎಂಬುವರು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದಾರೆ. “ಶಾಲಾ ಶಿಕ್ಷಕಿಯಾಗಿ ನನ್ನ ಅಮ್ಮ ನಿವೃತ್ತರಾಗಿದ್ದಾರೆ. ಅವರಿಗೆ ಎಂತಹ ಶ್ರೇಷ್ಠ ಪ್ರಶಸ್ತಿ ಸಿಕ್ಕಿದೆ ನೋಡಿ” ಎಂದು ಬರೆದುಕೊಂಡಿದ್ದಾರೆ. “ಇವರೇ ನನ್ನ ಮೊದಲ ಗುರು. ಅವರು ನಿವೃತ್ತರಾದ ಎರಡು ದಿನಗಳ ಬಳಿಕ ನನಗೆ ವಿಡಿಯೊ ಸಿಕ್ಕಿದೆ. ಆದರೂ ನನ್ನ ಕಣ್ಣಾಲಿಗಳು ಒದ್ದೆಯಾಗಿವೆ” ಎಂದು ಆರೋಹಿ ಕೂಡ ಭಾವುಕರಾಗಿದ್ದಾರೆ.
ವಿಡಿಯೊಗೆ ಹತ್ತಾರು ಜನ ಪ್ರತಿಕ್ರಿಯಿಸಿದ್ದಾರೆ. “ನನ್ನ ಫಿಸಿಕ್ಸ್ ಟೀಚರ್ ನಿವೃತ್ತರಾದಾಗ ನಾವು ಕೂಡ ಹೀಗೆಯೇ ಅತ್ತಿದ್ದೆವು. ಎಲ್ಲರೂ ಆ ಭಾವುಕ ಕ್ಷಣಗಳನ್ನು ಅನುಭವಿಸಿರುತ್ತಾರೆ ಎಂದುಕೊಳ್ಳುತ್ತೇನೆ. ನಾನು ಈಗಲೂ ಆ ಸರ್ ಜತೆ ಸಂಪರ್ಕದಲ್ಲಿದ್ದೇನೆ ಎಂಬುದೇ ಖುಷಿಯ ವಿಚಾರ” ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರು ಕೂಡ ಭಾವುಕರಾಗಿ ಪ್ರತಿಕ್ರಿಯೆ ನೀಡಿದ್ದಾರೆ. “ಇದು ದೊಡ್ಡ ಪ್ರಶಸ್ತಿ ಹಾಗೂ ತುಂಬ ಧನ್ಯತಾ ಭಾವ ಮೂಡಿಸುವ ವೃತ್ತಿ ಅದು. ನನ್ನ ತಾಯಿ ಕೂಡ ಲೆಕ್ಚರರ್” ಎಂದು ಹೇಳಿದ್ದಾರೆ. ಹೀಗೆ, ಹತ್ತಾರು ಜನ ಹತ್ತಾರು ರೀತಿ ತಮ್ಮ ಸ್ವಂತ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಏನೇ ಹೇಳಿ, ತಪ್ಪು ಮಾಡಿದಾಗ ತಿದ್ದಿ, ಅತಿರೇಕ ಮಾಡಿದಾಗ ಗದರಿ, ತಮ್ಮ ಜೀವನದ ಬಹುತೇಕ ಭಾಗವನ್ನು ಶಾಲೆಯಲ್ಲೇ ಕಳೆದು, ನಮ್ಮ ಎದೆಯ ಗೂಡಿನಲ್ಲಿ ಅಕ್ಷರ ಬಿತ್ತುವ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಶಿಕ್ಷಕರ ಬೀಳ್ಕೊಡುಗೆ ಎಂದರೆ ಅದು ಲಾಸ್ಟ್ ಬೆಂಚ್ ವಿದ್ಯಾರ್ಥಿಗಳು ಸೇರಿ ಎಲ್ಲರಿಗೂ ಬೇಸರದ ಸಂಗತಿಯೇ.