Site icon Vistara News

Viral video | ಸಹಪಾಠಿಗೆ ಥಳಿಸಿದ ತೆಲಂಗಾಣ ಬಿಜೆಪಿ ಅಧ್ಯಕ್ಷನ ಮಗ, ವಿಡಿಯೋ ವೈರಲ್‌

telangana ragging

ಹೈದರಾಬಾದ್‌: ತೆಲಂಗಾಣ ರಾಜ್ಯ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್‌ ಅವರ ಪುತ್ರ ಭಗೀರಥ್‌ ಎಂಬಾತ ಸಹಪಾಠಿಯೊಬ್ಬನಿಗೆ ಅಮಾನವೀಯ ರೀತಿಯಲ್ಲಿ ಥಳಿಸುತ್ತಿರುವ ವಿಡಿಯೋ ವೈರಲ್‌ ಆಗಿದೆ. ಈತ ಮಹೀಂದ್ರ ಯೂನಿವರ್ಸಿಟಿಯ ವಿದ್ಯಾರ್ಥಿಯಾಗಿದ್ದು, ಇದಕ್ಕೆ ಸಂಬಂಧಿಸಿ ಈತ ಹಾಗೂ ಇನ್ನಿತರ ಐವರ ಮೇಲೆ ಎಫ್‌ಐಆರ್‌ ದಾಖಲಾಗಿದೆ. ಇದು ಈಗ ರಾಜಕೀಯ ವಾಗ್ಯುದ್ಧಕ್ಕೆ ಕಾರಣವಾಗಿದೆ.

ಯೂನಿವರ್ಸಿಟಿ ಕ್ಯಾಂಪಸ್‌ ಒಳಗೆ ಈ ಘಟನೆ ನಡೆದಿದೆ. ಭಗೀರಥ ಮತ್ತು ಆತನ ಗೆಳೆಯರು ಈ ಥಳಿತಕ್ಕೊಳಗಾದ ವಿದ್ಯಾರ್ಥಿಯನ್ನು ರ್ಯಾಗಿಂಗ್‌ ಮಾಡಿದ್ದಾರೆ ಎನ್ನಲಾಗಿದೆ. ತೆಲಂಗಾಣ ರಾಷ್ಟ್ರ ಸಮಿತಿಯ ಮಾಧ್ಯಮ ವಕ್ತಾರ ಸತೀಶ್‌ ರೆಡ್ಡಿ ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಶೇರ್‌ ಮಾಡಿದ್ದಾರೆ. ʼʼಇದೊಂದು ರ್ಯಾಂಗಿಂಗ್‌ ಪ್ರಕರಣ. ಬಂಡಿ ಸಂಜಯ್‌ ಅವರ ಮಗ ಸಹಪಾಠಿಯನ್ನು ಹೊಡೆಯುತ್ತಿದ್ದಾನೆ. ಮಿ.ಜೆ.ಪಿ. ನಡ್ಡಾ ಈ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಬಹುದೇ?ʼʼ ಎಂದು ವ್ಯಂಗ್ಯವಾಡಿದ್ದಾರೆ.

ಇದೇ ಪ್ರಕರಣದ ಇನ್ನೊಂದು ವಿಡಿಯೋವನ್ನು ಹಂಚಿಕೊಂಡಿರುವ ಥಳಿತಕ್ಕೊಳಗಾದ ವಿದ್ಯಾರ್ಥಿ ಶ್ರೀರಾಮ್‌ ಎಂಬಾತ, ʼʼಇದೊಂದು ಸಣ್ಣ ಘಟನೆ. ಆತನ ಗೆಳೆಯನ ಸೋದರಿ ಮೇಲೆ ನಾನು ಕೈಮಾಡಿದ ವಿಷಯದಲ್ಲಿ ನಮಗಿಬ್ಬರಿಗೂ ಜಗಳ ಉಂಟಾಗಿ ಹೀಗಾಗಿದೆʼʼ ಎಂದು ಜಾಲತಾಣದಲ್ಲಿ ಬರೆದುಕೊಂಡಿದ್ದಾನೆ. ʼʼಈ ಪ್ರಕರಣ ಇಲ್ಲಿಗೆ ಮುಕ್ತಾಯವಾಗಿದೆ. ನಾವು ಬ್ಯಾಚ್‌ಮೇಟ್‌ಗಳು ಮತ್ತು ಗೆಳೆಯರುʼʼ ಎಂದಿದ್ದಾನೆ.

ಬಂಡಿ ಸಂಜಯ್‌ ಅವರೂ ಈ ಬಗ್ಗೆ ಹೇಳಿಕೆ ನೀಡಿದ್ದು, ʼʼಈ ಪ್ರಕರಣ ನಡೆದಿರುವುದು ಎರಡು ತಿಂಗಳ ಹಿಂದೆ. ಈಗ ಕೆಸಿಆರ್‌ ಇದನ್ನು ಹಿಗ್ಗಿಸಿರುವುದು, ನನ್ನ ಮಗನ ಮೇಲೆ ಕ್ರಿಮಿನಲ್‌ ಕಂಪ್ಲೇಂಟ್‌ ನೀಡುವಂತೆ ಮಾಡಿರುವುದು ಹೀನ ರಾಜಕೀಯʼʼ ಎಂದು ಕೆಂಡ ಕಾರಿದ್ದಾರೆ.

ಆದರೆ ವೈರಲ್‌ ಆಗಿರುವ ಇನ್ನೊಂದು ವಿಡಿಯೋದಲ್ಲಿ, ಭಗೀರಥ್‌ ಮತ್ತೊಬ್ಬ ವಿದ್ಯಾರ್ಥಿಯನ್ನು ಥಳಿಸುತ್ತಿರುವುದು ಕಂಡುಬಂದಿದ್ದು, ಇದರ ಬಗ್ಗೆ ವಿವರಗಳು ದೊರೆತಿಲ್ಲ.

ಇದನ್ನೂ ಓದಿ | Hindu Girl Raped | ತೆಲಂಗಾಣದಲ್ಲಿ 15 ವರ್ಷದ ಹಿಂದು ಬಾಲಕಿ ಮೇಲೆ ಇಬ್ಬರು ಮುಸ್ಲಿಮರಿಂದ ನಿರಂತರ ಅತ್ಯಾಚಾರ

Exit mobile version