ನವದೆಹಲಿ: ಜನ ಆರಾಮದಾಯಕವಾಗಿ ಪ್ರಯಾಣಿಸಲಿ, ಯಾವುದೇ ಟ್ರಾಫಿಕ್ ಕಿರಿಕಿರಿಯಿಲ್ಲದೆ ಸರಿಯಾದ ಸಮಯಕ್ಕೆ ನಿಗದಿತ ಸ್ಥಳಕ್ಕೆ ತೆರಳಲಿ ಎಂದು ದೇಶದ ಪ್ರಮುಖ ನಗರಗಳಲ್ಲಿ ಮೆಟ್ರೋ ರೈಲುಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ, ಇತ್ತೀಚಿನ ಕೆಲ ದಿನಗಳಲ್ಲಿ ದೆಹಲಿ ಮೆಟ್ರೋದಲ್ಲಿ ಜನರಿಂದ ಬೇಜವಾಬ್ದಾರಿಯುತ ವರ್ತನೆಗಳು ಹೆಚ್ಚಾಗಿವೆ. ಇದಕ್ಕೆ ನಿದರ್ಶನ ಎಂಬಂತೆ, ದೆಹಲಿ ಮೆಟ್ರೋದಲ್ಲಿ ಒಂದಿಬ್ಬರು ಬಡಿದಾಡಿಕೊಂಡಿದ್ದಾರೆ. ಈ ವಿಡಿಯೊ (Viral Video) ಈಗ ವೈರಲ್ ಆಗಿದೆ.
ಹೌದು, ಚಲಿಸುವ ಮೆಟ್ರೋದಲ್ಲಿಯೇ ಇಬ್ಬರು ವ್ಯಕ್ತಿಗಳು ಜಗಳವಾಡಿದ್ದಾರೆ. ಒಬ್ಬನಿಗೆ ಇನ್ನೊಬ್ಬ ಸಿನಿಮಾ ಶೈಲಿಯಲ್ಲಿ ಪಂಚ್ ಮಾಡುವುದು, ಮತ್ತೊಬ್ಬ ಈತನನ್ನು ತಳ್ಳುವುದು, ಹೊಡೆದಾಟ, ಬಡಿದಾಟ, ನೂಕಾಟ, ತಳ್ಳಾಟವೆಲ್ಲ ನಡೆದಿದೆ. ಮೊದಲು ಇಬ್ಬರ ನಡುವೆ ವಾದ ಶುರುವಾಗಿದೆ. ವಾದವು ವಿಕೋಪಕ್ಕೆ ತೆರಳಿ ಇಬ್ಬರೂ ಕೈ ಕೈ ಮಿಲಾಯಿಸಿದ್ದಾರೆ. ಪಕ್ಕದಲ್ಲಿದ್ದ ಪ್ರಯಾಣಿಕರು ಇವರ ಜಗಳವನ್ನು ಬಿಡಿಸಲು ಯತ್ನಿಸಿದರೂ ಅದು ಸಾಧ್ಯವಾಗಿಲ್ಲ. ಅಷ್ಟರಮಟ್ಟಿಗೆ, ಇಬ್ಬರೂ ಬೇಜವಾಬ್ದಾರಿ, ಅನಾಗರಿಕ ವರ್ತನೆ ತೋರಿದ್ದಾರೆ.
ಇಲ್ಲಿದೆ ವೈರಲ್ ವಿಡಿಯೊ
A fight broke out between two people on @OfficialDMRC Violet Line. #viral #viralvideo #delhi #delhimetro pic.twitter.com/FbTGlEu7cn
— Sachin Bharadwaj (@sbgreen17) June 28, 2023
ಸಾರ್ವಜನಿಕ ಸ್ಥಳದಲ್ಲಿ, ಅದರಲ್ಲೂ ದೆಹಲಿ ಮೆಟ್ರೋದಲ್ಲಿ ಹೀಗೆ ಜಗಳವಾಡಿದ ವಿಡಿಯೊ ವೈರಲ್ ಆಗುತ್ತಲೇ ನಾಗರಿಕರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. “10-12 ವರ್ಷದ ಮಕ್ಕಳ ರೀತಿ ಹೀಗೆ ಜಗಳವಾಡಿದ್ದು ನಾಚಿಕೆಗೇಡು” ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. “ಮೆಟ್ರೋ ಇರುವುದು ಏಕೆ? ಅದು ನಮಗೆ ಅನುಕೂಲವಾಗಲಿ ಎಂದು ಮಾಡಿರುವ ಸಾರಿಗೆ ವ್ಯವಸ್ಥೆ. ಇಲ್ಲಿ ಹೇಗಿರಬೇಕು, ಹೇಗೆ ವರ್ತಿಸಬೇಕು ಎಂಬುದು ಗೊತ್ತಿಲ್ಲದಿದ್ದರೆ, ಅನಾಗರಿಕರಾಗಿದ್ದರೆ ಹೀಗೆಯೇ ಆಗುತ್ತದೆ” ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಹೀಗೆ, ಒಬ್ಬೊಬ್ಬರು ಒಂದೊಂದು ರೀತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Viral Video : ದೆಹಲಿ ಮೆಟ್ರೋದಲ್ಲೇ ಹೇರ್ ಸ್ಟ್ರೈಟ್‌ನರ್ ಬಳಸಿದ ಯುವತಿ, ವಿಡಿಯೊ ವೈರಲ್!
ಇತ್ತೀಚಿನ ಕೆಲ ತಿಂಗಳಿಂದ ದೆಹಲಿ ಮೆಟ್ರೋ ಬೇಜವಾಬ್ದಾರಿಯುತ ಚಟುವಟಿಕೆಗಳ ತಾಣವಾಗಿದೆ. ಯುವ ಪ್ರೇಮಿಗಳು ಲಿಪ್ ಲಾಕ್ ಮಾಡಿಕೊಂಡ, ಮಹಿಳೆಯರು ಅವಾಚ್ಯ ಶಬ್ದಗಳಿಂದ ಬೈದಾಡಿಕೊಂಡ, ಯುವತಿಯೊಬ್ಬಳು ಚಲಿಸುವ ಮೆಟ್ರೋದಲ್ಲಿ ಹೇರ್ ಸ್ಟ್ರೈಟ್‌ನರ್ ಬಳಸಿದ ವಿಡಿಯೊಗಳು ವೈರಲ್ ಆಗಿವೆ. ಹಾಗಾಗಿ, ದೆಹಲಿ ಮೆಟ್ರೋದಲ್ಲಿ ಸಂಚರಿಸುವವರ ವರ್ತನೆ ಮೇಲೆ ನಿಗಾ ಇಡುವ, ಅಕ್ರಮ ನಡೆದರೆ ಕ್ರಮ ತೆಗೆದುಕೊಳ್ಳುವ ವ್ಯವಸ್ಥೆ ಜಾರಿಗೆ ತರಬೇಕು ಎಂದು ಜನ ಆಗ್ರಹಿಸಿದ್ದಾರೆ.