ಹೊಸದಿಲ್ಲಿ: ಉತ್ತರ ಪ್ರದೇಶದ ಮುಜಾಫರ್‌ನಗರದ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯೊಬ್ಬರು ಶಾಲಾ ವಿದ್ಯಾರ್ಥಿಗೆ ಸಹಪಾಠಿಗಳಿಂದ ಕಪಾಳಮೋಕ್ಷ (slapping students) ಮಾಡುವಂತೆ ಹೇಳುತ್ತಿರುವ ವಿಡಿಯೋ ಹೊರಬಿದ್ದಿದ್ದು, ಇದೀಗ ವೈರಲ್ (Viral video) ಆಗಿದೆ. ಟೀಚರ್ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಈ ವಿಡಿಯೋ ವೈರಲ್ ಆಗಿದ್ದು, ಶಿಕ್ಷಕಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಇಲಾಖೆಗೆ ಸೂಚಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಹುಡುಗ ಮುಸ್ಲಿಮನಾಗಿದ್ದು, ಶಿಕ್ಷಕಿಯ ಈ ವರ್ತನೆಯು ಕೋಮುವಾದಿ ಸ್ವರೂಪದ್ದಾಗಿದೆಯೇ ಎಂದು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಡಿಯೋದಲ್ಲಿ ಶಿಕ್ಷಕಿ ಕೋಮುವಾದ ಸೂಚಕ ಪದಗಳನ್ನು ಬಳಸಿದ್ದು, ಪೊಲೀಸರೂ ಇದನ್ನು ಖಚಿತಪಡಿಸಿದ್ದಾರೆ.
“ಗಣಿತ ಕೋಷ್ಟಕಗಳನ್ನು ಕಲಿಯದ ಕಾರಣಕ್ಕೆ ಶಿಕ್ಷಕಿಯೊಬ್ಬರು ಕೆಲವು ಶಾಲಾ ವಿದ್ಯಾರ್ಥಿಗಳನ್ನು ಸಹಪಾಠಿಗಳಿಂದ ಹೊಡೆಸುತ್ತಿರುವ ವೈರಲ್ ವೀಡಿಯೊವನ್ನು ನಾವು ಗಮನಿಸಿದ್ದೇವೆ. ವೀಡಿಯೊದಲ್ಲಿನ ಆಕ್ಷೇಪಾರ್ಹ ಮಾತಿನ ಬಳಕೆಯ ಬಗ್ಗೆ ನಾವು ಆ ಶಾಲೆಯ ಪ್ರಾಂಶುಪಾಲರೊಂದಿಗೆ ಮಾತನಾಡಿದ್ದೇವೆ” ಎಂದು ಪೊಲೀಸ್ ವರಿಷ್ಠಾಧಿಕಾರಿ ಸತ್ಯನಾರಾಯಣ ಪ್ರಜಾಪತ್ ಹೇಳಿದ್ದಾರೆ.
ತಮ್ಮ ಮಕ್ಕಳ ಅಧ್ಯಯನಕ್ಕೆ ಗಮನ ಕೊಡದ ಮುಸ್ಲಿಂ ಮಕ್ಕಳ ತಾಯಂದಿರೇ ಅವರ ಶೈಕ್ಷಣಿಕ ಕುಸಿತಕ್ಕೆ ಕಾರಣ ಎಂದು ಶಿಕ್ಷಕರು ಟೀಕಿಸಿದ್ದಾರೆ. ಈ ಬಗ್ಗೆ ನಾವು ಶಿಕ್ಷಣ ಅಧಿಕಾರಿಗೆ ತಿಳಿಸಿದ್ದು, ಶಿಕ್ಷಕಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮಕ್ಕಳ ಹಕ್ಕುಗಳ ಸಂಸ್ಥೆಯು ಕೂಡ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆದೇಶಿಸಿದೆ.
ಇದನ್ನೂ ಓದಿ: Viral Video | ನನ್ನ ಬಿಟ್ಟು ಯಾರನ್ನು ಮದುವೆ ಆಗ್ತಿದ್ದೀಯಾ?-ವರನ ಮೈಮೇಲೆ ಏರಿ ಕುಳಿತ ಕಪ್ಪು ಕೋತಿ, ಪಕ್ಕಕ್ಕೆ ಸರಿದ ವಧು!