Site icon Vistara News

Viral Video: ಕೇದಾರನಾಥ ದೇಗುಲದಲ್ಲಿ ಗೆಳೆಯನಿಗೆ ಪ್ರಪೋಸ್‌ ಮಾಡಿದ ಯುವತಿ; ಕ್ಯೂಟ್‌ ವಿಡಿಯೊ ನೋಡಿ

Woman Proposes Boyfriend

Viral Video: Woman proposes to her boyfriend at Kedarnath temple, debate starts

ಡೆಹ್ರಾಡೂನ್:‌ ಉತ್ತರಾಖಂಡದಲ್ಲಿರುವ ಕೇದಾರನಾಥ ದೇವಾಲಯವು ಹಿಂದುಗಳಿಗೆ ಪವಿತ್ರವಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಯಾತ್ರಿಕರು ಕೇದಾರನಾಥನ ದರ್ಶನ ಪಡೆಯುತ್ತಾರೆ. ಇಷ್ಟೊಂದು ಪ್ರಸಿದ್ಧಯಾಗಿರುವ ಕೇದಾರನಾಥ ದೇವಾಲಯದಲ್ಲಿ ಯುವತಿಯೊಬ್ಬರು ತನ್ನ ಗೆಳೆಯನಿಗೆ ಪ್ರೇಮ ನಿವೇದನೆ ಮಾಡಿದ್ದಾರೆ. ದೇವಾಲಯದ ಎದುರೇ ಯುವತಿಯು ಯುವಕನಿಗೆ ಪ್ರಪೋಸ್‌ ಮಾಡಿರುವ ವಿಡಿಯೊ ವೈರಲ್‌ (Viral Video) ಆಗಿದೆ. ಹಾಗೆಯೇ, ದೇವಾಲಯದ ಆವರಣದಲ್ಲಿ ಹೀಗೆ ಪ್ರೇಮ ನಿವೇದನೆ ಮಾಡಿರುವುದು ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.

ಇಬ್ಬರೂ ಮ್ಯಾಚಿಂಗ್‌ ಎನ್ನುವಂತೆ ಹಳದಿ ಬಟ್ಟೆ ಧರಿಸಿ ದೇವಾಲಯಕ್ಕೆ ತೆರಳಿದ್ದಾರೆ. ದೇವಾಲಯದ ಎದುರು ನಿಂತು ಯುವಕ ಪ್ರಾರ್ಥನೆಯಲ್ಲಿ ತೊಡಗಿರುವಾಗ ಯುವತಿಯು ಮೊಳಕಾಲೂರಿ, ರಿಂಗ್‌ ಕೊಟ್ಟು ಪ್ರೇಮ ನಿವೇದನೆ ಮಾಡುತ್ತಾರೆ. ಗೆಳತಿ ಏಕಾಏಕಿ ಪ್ರಪೋಸ್‌ ಮಾಡಿದ್ದನ್ನು ನೋಡಿದ ಯುವಕನಿಗೆ ಅಚ್ಚರಿಯಾಗುತ್ತದೆ. ಕೂಡಲೇ ಆಕೆಯನ್ನು ತಬ್ಬಿಕೊಂಡು ಪ್ರೀತಿಯನ್ನು ಒಪ್ಪಿಕೊಳ್ಳುತ್ತಾನೆ. ಈ ಮುದ್ದಾದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗಿದೆ. ಆದರೆ, ಒಂದಷ್ಟು ಜನ ಕ್ಯೂಟ್‌ ಜೋಡಿ ಎಂದರೆ, ದೇವಾಲಯದಲ್ಲಿ ಇದೆಲ್ಲ ಬೇಕಾ ಎಂದು ಕೊಂಕು ನುಡಿದಿದ್ದಾರೆ.

ಇಲ್ಲಿದೆ ನೋಡಿ ಕ್ಯೂಟ್‌ ವಿಡಿಯೊ

ಯುವತಿಯು ಪ್ರೇಮ ನಿವೇದನೆ ಮಾಡುವ, ಯುವಕನು ಪ್ರೀತಿಯನ್ನು ಒಪ್ಪಿಕೊಂಡು ಅಪ್ಪಿಕೊಳ್ಳುವ ವಿಡಿಯೊವನ್ನು ರವಿ ಸುತಂಜಾನಿ ಎಂಬುವರು ಟ್ವಿಟರ್‌ನಲ್ಲಿ ಶೇರ್‌ ಮಾಡಿ, ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ದೇವಾಲಯಗಳು ಹಾಗೂ ಯಾತ್ರಾ ಸ್ಥಳಗಳಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಇದೇ ಕಾರಣಕ್ಕಾಗಿ ನಿಷೇಧಿಸಬೇಕು. ದೇವಾಲಯದ 20 ಕಿಲೋಮೀಟರ್‌ ವ್ಯಾಪ್ತಿಯಲ್ಲಿ ಬೇಸಿಕ್‌ ಫೋನ್‌ಗಳನ್ನು ಮಾತ್ರ ಬಳಸಲು ಅವಕಾಶ ನೀಡಬೇಕು. ನಾನು ಈ ವಿಡಿಯೊವನ್ನು ಕೇದಾರನಾಥದಿಂದ ಪೋಸ್ಟ್‌ ಮಾಡಿದ್ದೇನೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Viral Video: ಪ್ರಾಣಕ್ಕಿಂತ ಪ್ರಯಾಣವೇ ಮುಖ್ಯ, ಚಲಿಸುವ ರೈಲಿಗೆ ನೇತಾಡಿದ ಯುವಕನ ವಿಡಿಯೊ ವೈರಲ್

ಮತ್ತೊಂದಿಷ್ಟು ಜನ, ದೇವಾಲಯದಲ್ಲಿ ಪ್ರೇಮ ನಿವೇದನೆ ಮಾಡುವುದರಲ್ಲಿ ಏನು ತಪ್ಪಿದೆ ಎಂದು ಕೇಳಿದ್ದಾರೆ. “ದೇಶದ ಬಹುತೇಕ ದೇವಾಲಯಗಳಲ್ಲಿ ಮದುವೆಯಾಗುತ್ತಾರೆ. ಆದರೆ, ದೇವಾಲಯಗಳಲ್ಲಿ ಪ್ರಪೋಸ್‌ ಮಾಡಿದರೆ ಯಾಕೆ ತಪ್ಪೆನಿಸುತ್ತದೆ” ಎಂದು ಪ್ರಶ್ನಿಸಿದ್ದಾರೆ. “ಇದರಲ್ಲಿ ಕೆಟ್ಟದ್ದು ಏನು ಕಾಣುತ್ತಿದೆ? ಅವರಿಬ್ಬರೂ ಅಸಭ್ಯವಾಗಿ ವರ್ತಿಸಿಲ್ಲ. ಅಷ್ಟು ಚೆನ್ನಾಗಿ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಇಬ್ಬರಿಗೂ ಅಭಿನಂದನೆಗಳು” ಎಂದು ಮತ್ತೊಬ್ಬರು ಜೋಡಿ ಹಕ್ಕಿಗಳ ಪರ ನಿಂತಿದ್ದಾರೆ.

Exit mobile version