ಬೆಂಗಳೂರು: ತಮಿಳು ನಟ ವಿಶಾಲ್ (Actor Vishal ) ಒಂದಲ್ಲ ಒಂದು ವಿವಾದಾತ್ಮಕ ಸುದ್ದಿಯಲ್ಲಿರುತ್ತಾರೆ. ನಟ ವಿಶಾಲ್ ಅಭಿನಯದ ಮಾರ್ಕ್ ಆಂಟನಿ (Mark Antony) ಸೆಪ್ಟೆಂಬರ್ 15ರಂದು ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಹಿಂದಿ ಆವೃತ್ತಿಯು ಸೆಪ್ಟೆಂಬರ್ 28ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಇದೀಗ ನಟ ತಮ್ಮ ತಮಿಳು ಚಿತ್ರದ ಹಿಂದಿ ಆವೃತ್ತಿಗೆ ಪ್ರಮಾಣ ಪತ್ರ ನೀಡಲು ಮುಂಬೈ ಸಿಬಿಎಫ್‍ಸಿ ಅಧಿಕಾರಿಗಳು ಲಂಚ ಕೇಳಿದ್ದರು ಎಂದು ಆರೋಪ ಮಾಡಿದ್ದಾರೆ. ಈ ಸಿನಿಮಾಗೆ ಪ್ರಮಾಣ ಪತ್ರ ನೀಡಲು ಅಧಿಕಾರಿಗಳು ಬರೋಬ್ಬರಿ 6.50 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದರು ಎಂದು ವಿಶಾಲ್ ಹೇಳಿದ್ದಾರೆ. ಅಷ್ಟೇ ಅಲ್ಲದೇ ಈ ಬಗ್ಗೆ ಸಾಕ್ಷಿಗಳೂ ಕೂಡ ನನ್ನಲ್ಲಿದೆ ಎಂದು ಹೇಳಿಕೊಂಡಿದ್ದಾರೆ. ಈ ಕುರಿತು ಸಾಕ್ಷಿ ಸಮೇತ ಅವರು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊ ಮೂಲಕ ಪೋಸ್ಟ್ ಮಾಡಿದ್ದಾರೆ.
ಮಹಾರಾಷ್ಟ್ರ ಏಕನಾಥ್ ಶಿಂಧೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಉದ್ದೇಶಿಸಿ ಮಾತನಾಡಿದ ವಿಶಾಲ್, “ನಾವು ಪ್ರಮಾಣಪತ್ರಕ್ಕಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದೇವು. ಮುಂಬೈನ ಸಿಬಿಎಫ್‌ಸಿ ಕಚೇರಿಯಲ್ಲಿ ನಡೆದ ಘಟನೆಯಿಂದ ನಮಗೆ ಆಘಾತವಾಗಿದೆ. ‘ನಾವು ‘ಮಾರ್ಕ್ ಆಂಟೊನಿ’ ಸಿನಿಮಾವನ್ನು ಹಿಂದಿಗೆ ಡಬ್ ಮಾಡಿ ಬಿಡುಗಡೆಗೆ ಪ್ರಯತ್ನಸಿದ್ದೆವು. ಕೆಲವು ತಾಂತ್ರಿಕ ಕಾರಣಗಳಿಗಾಗಿ ತಡವಾಗಿ ನಾವು ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದೆವು. ರಿಲೀಸ್ ಬೇಗ ಇರುವ ಕಾರಣ ಸ್ವಲ್ಪ ಬೇಗ ಪ್ರಮಾಣ ಪತ್ರ ನೀಡಿ ಎಂದು ಮನವಿ ಮಾಡಿದ್ದೆವು. ಅದಕ್ಕೆ ಬದಲಾಗಿ ಅಲ್ಲಿನ ಅಧಿಕಾರಿಗಳು ನಮ್ಮ ಬಳಿ 6.50 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟರು” ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: Rashmika Mandanna | ರಶ್ಮಿಕಾ ಜತೆ ಡೇಟಿಂಗ್ ಹೋಗಬೇಕು ಎಂದ ನಟ ವಿಶಾಲ್!
ಮಾತು ಮುಂದುವರಿಸಿ ʻʻಸಿಬಿಎಫ್‌ಸಿಯಲ್ಲಿ ನಡೆಯುವ ಸ್ಕ್ರೀನಿಂಗ್‌ಗೆ 3 ಲಕ್ಷ ರೂ. ಮತ್ತು ಪ್ರಮಾಣಪತ್ರ ಪಡೆಯಲು 3.5 ಲಕ್ಷ ರೂ. ನೀಡಬೇಕಿತ್ತು. ಒಂದೇ ದಿನದಲ್ಲಿ ಸಿನಿಮಾದ ಪ್ರಮಾಣ ಪತ್ರ ನೀಡಬೇಕೆಂದರೆ 6.50 ಲಕ್ಷ ಹಣ ನೀಡಬೇಕು ಎಂದು ಸಿಬಿಎಫ್ಸಿ ಮಹಿಳಾ ಅಧಿಕಾರಿ ಹೇಳಿದರು. ನಮಗೆ ಬೇರೆ ದಾರಿ ಇಲ್ಲದೇ ಹಣ ಕೊಡಬೇಕಾಯ್ತು. ತಡವಾಗಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದರೆ 6.50 ಲಕ್ಷ ಹಣ ನೀಡಬೇಕಾಗುತ್ತದೆ. 15 ದಿನಕ್ಕೆ ಮುಂಚೆ ಸಲ್ಲಿಸಿದ್ದರೆ 4 ಲಕ್ಷದಲ್ಲಿ ಕೆಲಸ ಮುಗಿದು ಹೋಗುತ್ತಿತ್ತು’ ಎಂದು ಆ ಅಧಿಕಾರಿ ನಮಗೆ ಹೇಳಿದರು ಎಂದರು.
ಮಾತು ಮುಂದುವರಿಸಿ ʻʻನಮಗೆ ಯಾವುದೇ ಆಯ್ಕೆ ಇರಲಿಲ್ಲ, ನಾವು ಹಣವನ್ನು ಎರಡು ಕಂತುಗಳಲ್ಲಿ ಪಾವತಿಸಿದ್ದೇವೆ. ಸರ್ಕಾರಿ ಕಚೇರಿಗಳಲ್ಲಿ ಈ ರೀತಿ ಆಗುತ್ತಿದೆ. ಈ ಬಗ್ಗೆ ಉನ್ನತ ಅಧಿಕಾರಿಗಳು ಗಮನಹರಿಸಬೇಕೆಂದು ನಾನು ವಿನಂತಿಸುತ್ತೇನೆ” ಎಂದು ಅವರು ಹೇಳಿದರು.
ವಿಶಾಲ್ ಈ ಬಗ್ಗೆ ಪೋಸ್ಟ್ ಹಂಚಿಕೊಂಡು, “ನನ್ನ ವೃತ್ತಿಜೀವನದಲ್ಲಿ ಈ ಪರಿಸ್ಥಿತಿಯನ್ನು ಎಂದಿಗೂ ಎದುರಿಸಲಿಲ್ಲ. ಹಣವನ್ನು ಕೊಡದೇ ಬೇರೆ ದಾರಿ ನನಗಿರಲಿಲ್ಲ. ಇದನ್ನು ಮಹಾರಾಷ್ಟ್ರದ ಮುಖ್ಯಮಂತ್ರಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೆ ತರುತ್ತಿದ್ದೇನೆ. ಈ ಪೋಸ್ಟ್ ಮಾಡಿರುವುದು ನನಗಾಗಿ ಅಲ್ಲ, ಭವಿಷ್ಯದ ನಿರ್ಮಾಪಕರಿಗಾಗಿ. ನನ್ನ ದುಡಿಮೆಯ ಹಣ ಭ್ರಷ್ಟಾಚಾರಕ್ಕೆ ಹೋಗಿದೆ. ಅವರೊಂದಿಗೆ ಮಾತನಾಡಿದ ಸಂಭಾಷಣೆಯ ರೆಕಾರ್ಡ್ ಸಹ ನಮ್ಮ ಬಳಿ ಇದೆʼʼಎಂದರು. ಮಾರ್ಕ್ ಆಂಟೋನಿ ಸಿನಿಮಾದಲ್ಲಿ ಎಸ್ ಜೆ ಸೂರ್ಯ ಕೂಡ ನಟಿಸಿದ್ದಾರೆ. ಈ ಚಿತ್ರವನ್ನು ಅಧಿಕ್ ರವಿಚಂದ್ರನ್ ನಿರ್ದೇಶಿಸಿದ್ದಾರೆ. ಇದರಲ್ಲಿ ಸುನೀಲ್, ಸೆಲ್ವರಾಘವನ್ ಮತ್ತು ರಿತು ಕೂಡ ನಟಿಸಿದ್ದಾರೆ.