ನವದೆಹಲಿ: ಮಾರ್ಚ್ 22, ಬುಧವಾರದಿಂದ ರಮ್ಜಾನ್(Ramzan) ತಿಂಗಳು ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ರಾತ್ರಿ ವೇಳೆ ತಾಜ್ ಮಹಲ್(Taj Mahal) ವೀಕ್ಷಣೆಗೆ ಅವಕಾಶವಿರುವುದಿಲ್ಲ. ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ, ತಾಜ್ ಮಹಲ್ ಹುಣ್ಣಿಮೆಯ ರಾತ್ರಿ ಮತ್ತು ಪ್ರತಿ ತಿಂಗಳ ಹುಣ್ಣಿಮೆಯ ಮೊದಲು ಮತ್ತು ನಂತರದ ಎರಡು ಸಂಜೆಗಳಲ್ಲಿ ಆಯ್ದ ಸಂಖ್ಯೆಯಲ್ಲಿ ಸಂದರ್ಶಕರಿಗೆ ತೆರೆದಿರುತ್ತದೆ. ರಾತ್ರಿ ವೇಳೆ ತಾಜ್ ಮಹಲ್ ವೀಕ್ಷಣೆ ಸಾರ್ವಜನಿಕರಿಗೆ ನಿರ್ಬಂಧವಿದ್ದರೂ ಸ್ಥಳೀಯರು ಮಹಲ್‌ಗೆ ತೆರಳಿ ತರಾವೀಹ್ ಪ್ರಾರ್ಥನೆಯನ್ನು ಸಲ್ಲಿಸಬಹುದಾಗಿದೆ.
ತಾಜ್ ಮಹಲ್‌ನ ಪೂರ್ವ ದ್ವಾರದ ಮೂಲಕ 7.45 ಮತ್ತು 11 ಗಂಟೆ ನಡುವೆ ಮುಸ್ಲಿಮ್ ಸಮುದಾಯಕ್ಕೆ ಪ್ರವೇಶಕ್ಕೆ ಹಾಗೂ ನಿರ್ಗಮನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಭಾರತೀಯ ಪುರಾತತ್ವ ಸಮೀಕ್ಷೆ(ASI) ಮುಖ್ಯಸ್ಥರಾಗಿರುವ ಆರ್ ಕೆ ಪಟೇಲ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಯಾರೂ ಪ್ರಾರ್ಥನೆ ಮಾಡುತ್ತಾರೋ ಅವರಿಗೆ ಮಾತ್ರವೇ ಈ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತದೆ. ಪ್ರವೇಶಿಸುವ ಪ್ರತಿ ವ್ಯಕ್ತಿಯು ತಮ್ಮ ಹೆಸರು, ಆಧಾರ್ ಕಾರ್ಡ್ ನಂಬರ್, ಫೋನ್ ನಂಬರ್, ಮನೆ ವಿಳಾಸ ಇತ್ಯಾದಿ ಮಾಹಿತಿಯನ್ನು ನೀಡಬೇಕಾಗುತ್ತದೆ. ತಾಜ್ ಮಹಲ್ ಪೂರ್ವ ದ್ವಾರದಲ್ಲಿರುವ ನೋಂದಣಿಯಲ್ಲಿ ಈ ಎಲ್ಲ ಮಾಹಿತಿಯನ್ನು ದಾಖಲಿಸಬೇಕಾಗುತ್ತದೆ. ಈ ವೇಳೆ, ಭಾರೀ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿರುತ್ತದೆ ಮತ್ತು ಪ್ರಾರ್ಥನೆಗೆ ಆಗಮಿಸುವವರಿಗೆ ಯಾವುದೇ ಶುಲ್ಕವಿರುವುದಿಲ್ಲ. ಸಮಾಜಘಾತುಕ ಶಕ್ತಿಗಳು ತಾಜ್‌ಮಹಲ್‌ಗೆ ಪ್ರವೇಶಿಸದಂತೆ ತಡೆಯಲು ಸ್ಥಳೀಯರಿಗೆ ಎಚ್ಚರಿಕೆ ನೀಡಲಾಗಿದೆ. ಅಲ್ಲದೆ, ಭಕ್ತರು ರಾತ್ರಿ ವೇಳೆ ಸ್ಮಾರಕದ ಒಳಗೆ ಅಲೆದಾಡದಂತೆ ಸೂಚಿಸಲಾಗಿದೆ.
ಇದನ್ನೂ ಓದಿ: Taj Mahal | ಹಾಗೇ ಉಳಿಯಲಿದೆ ತಾಜ್ಮಹಲ್ 22 ಕೋಣೆಗಳ ರಹಸ್ಯ; ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್
ರಂಜಾನ್ ತಿಂಗಳು ಈ ವರ್ಷ ಮಾರ್ಚ್ 22 ಅಥವಾ 23ರಿಂದ ಪ್ರಾರಂಭವಾಗುತ್ತದೆ. ಮಾರ್ಚ್ 22 ರಂದು ಚಂದ್ರನ ದರ್ಶನವು ಸಂಭವಿಸಿದರೆ ತಾರಾಬಿ ಪ್ರಾರ್ಥನೆಯು ಸಂಜೆ ಪ್ರಾರಂಭವಾಗುತ್ತದೆ. ಇಲ್ಲದಿದ್ದರೆ, ಇದು ಮಾರ್ಚ್ 23 ರಂದು ಪ್ರಾರಂಭವಾಗುವ ನಿರೀಕ್ಷೆಯಿದೆ ಎನ್ನಲಾಗುತ್ತಿದೆ.