ರಾಷ್ಟ್ರದ ರಾಜಕೀಯದ ಅತ್ಯಂತ ದೊಡ್ಡ ಸ್ಥಾನಗಳಲ್ಲಿ ಇರುವವರು, ರಾಷ್ಟ್ರೀಯ ಪಕ್ಷಗಳ ನಾಯಕರು ಎನಿಸಿಕೊಂಡವರು ನಾಲಿಗೆಯನ್ನು ಮಿತಿ ಮೀರಿ ಹರಿಬಿಡುವ ಚಾಳಿ ಈ ದಿನಗಳಲ್ಲಿ ಹೆಚ್ಚುತ್ತಿದೆ. ರಾಜಸ್ಥಾನದ (Rajasthan Election) ಚುನಾವಣಾ ಪ್ರಚಾರಸಭೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಜೇಬುಗಳ್ಳ (Pickpocket) ಮತ್ತು ಅಪಶಕುನ (bad omen) ಎಂದು ಕರೆದಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರಿಗೆ ಚುನಾವಣಾ ಆಯೋಗ (election Commission) ನೋಟಿಸ್ ಜಾರಿ ಮಾಡಿದೆ (Show Cause Notice). 2023ರ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 6 ವಿಕೆಟ್ಗಳ ಸೋಲನುಭವಿಸಲು ಪಂದ್ಯವನ್ನು ವೀಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಹೋಗಿದ್ದೇ ಕಾರಣ. ಅವರೊಬ್ಬ ಅಪಶಕುನದ ವ್ಯಕ್ತಿ ಎಂಬುದಾಗಿ ರಾಹುಲ್ ಗಾಂಧಿ ಟೀಕಿಸಿದ್ದರು. ಇನ್ನೊಬ್ಬ ನಾಯಕಿ, ತೃಣಮೂಲ ಕಾಂಗ್ರೆಸ್‌ನ ಅಧಿನಾಯಕಿ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಭಾರತೀಯ ತಂಡವು ಐಸಿಸಿ ವರ್ಲ್ಡ್ ಕಪ್‌ನ ಎಲ್ಲ ಪಂದ್ಯಗಳನ್ನು ಗೆದ್ದರೂ ಫೈನಲ್‌ನಲ್ಲಿ ಸೋಲು ಅನುಭವಿಸಿತು. ಈ ಪಂದ್ಯವನ್ನು ‘ಪಾಪಿಗಳು’ (Sinners) ನೋಡಲು ಬಂದಿದ್ದರು. ಹಾಗಾಗಿ ಸೋತರು ಎಂದು ಪರೋಕ್ಷವಾಗಿ ಮೋದಿಯವರನ್ನು ಚುಚ್ಚಿದ್ದಾರೆ. ಇತ್ತ ಬಿಜೆಪಿ ನಾಯಕರೂ ಕಮ್ಮಿಯಿಲ್ಲ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಬರ್ತ್‌ಡೇ ದಿನ ಮ್ಯಾಚ್ ಇಟ್ಟಿದ್ದಕ್ಕೆ ಭಾರತ ಸೋತು ಹೋಯಿತು ಎಂದು ಬಿಜೆಪಿ ನಾಯಕ ಹಾಗೂ ಅಸ್ಸಾಮ್ ಸಿಎಂ ಹಿಮಂತ್ ಬಿಸ್ವಾ ಶರ್ಮಾ (Himanta biswa sarma) ತಿರುಗೇಟು ನೀಡಿದ್ದಾರೆ.
ಯಾವ ರೀತಿಯಿಂದ ನೋಡಿದರೂ ಇಂಥ ಮಾತುಗಳು ಸಮರ್ಥನೀಯವಲ್ಲ. ಮೋದಿಯವರನ್ನು ವ್ಯಂಗ್ಯವಾಡುತ್ತಿರುವ ನಾಯಕರ ಮಾತುಗಳಲ್ಲೇ ಸ್ವತಃ ವೈರುಧ್ಯವಿದೆ. ನಮ್ಮ ಸಂವಿಧಾನ ʼವೈಚಾರಿಕ ಮನೋಧರ್ಮʼದ ಬೆಳವಣಿಗೆಯನ್ನು ಅಪೇಕ್ಷಿಸುತ್ತದೆ. ಮೌಢ್ಯ, ಮೂಢನಂಬಿಕೆಗಳನ್ನು ಯಾರೂ ಪೋಷಿಸಬಾರದು. ಆದರೆ ಮೋದಿಯವರನ್ನು ʼಅಪಶಕುನʼ ಎನ್ನುವುದು ಯಾವ ಬಗೆಯ ವೈಚಾರಿಕ ಮನೋಭಾವ? ಇದೇ ಮಾತನ್ನೇ ಸ್ವತಃ ರಾಹುಲ್ ಗಾಂಧಿಯವರ ಕಡೆಗೆ ತಿರುಗಿಸಿ ನೋಡಿದರೆ, ಕಳೆದ ಎರಡು ಲೋಕಸಭೆ ಚುನಾವಣೆಗಳಲ್ಲಿ ರಾಹುಲ್ ಗಾಂಧಿಯವರ ನಾಯಕತ್ವದಲ್ಲಿಯೇ ಕಾಂಗ್ರೆಸ್ ಚುನಾವಣೆ ಎದುರಿಸಿತ್ತು. ಅಧಿಕೃತ ವಿರೋಧ ಪಕ್ಷವಾಗುವುದಕ್ಕೂ ಸಾಧ್ಯವಿಲ್ಲದಷ್ಟು ಸ್ಥಾನಗಳಿಗೆ ಇಳಿಯಿತು. ಈ ʼಸಾಧನೆʼಗೂ ರಾಹುಲ್ ಗಾಂಧಿಯವರ ʼಕಾಲ್ಗುಣʼ ಕಾರಣ ಎನ್ನೋಣವೆ? ಅದು ಹೇಗೆ ತಪ್ಪೋ, ಹಾಗೇ ಇದು ಕೂಡ ತಪ್ಪು. ಈ ನಿಟ್ಟಿನಲ್ಲಿ ಚುನಾವಣಾ ಆಯೋಗ ನೀಡಿದ ನೋಟಿಸ್ ಸರಿಯಾಗಿಯೇ ಇದೆ. ಮಮತಾ ಬ್ಯಾನರ್ಜಿ ಅವರಿಗೂ, ಹಿಮಂತ ಬಿಸ್ವ ಶರ್ಮಾ ಅವರಿಗೂ ಈ ಕುರಿತು ಆಯೋಗ ಎಚ್ಚರಿಕೆ ನೀಡಬೇಕು.
ಚುನಾವಣೆಯ ಸಂದರ್ಭದಲ್ಲಿ ಎದುರಾಳಿಯನ್ನು ಟೀಕಿಸುವುದು ಇದ್ದುದೇ. ಕೆಲವೊಮ್ಮೆ ಮೊನಚಾದ ವ್ಯಂಗ್ಯದ ಬಾಣಗಳು ಅತ್ತಿಂದಿತ್ತ ಓಡಾಡುತ್ತವೆ. ಇದು ಸಹಜ. ಆದರೆ ಅದು ವೈಯಕ್ತಿಕವೋ, ಕೌಟುಂಬಿಕವೋ, ಆಗಬಾರದು. ರಾಜಕೀಯ ನಾಯಕರ ನಿಲುವುಗಳು, ತಾತ್ವಿಕತೆ, ಸರ್ಕಾರವಿದ್ದರೆ ಅವರ ಯೋಜನೆಗಳ ಸೋಲು ಗೆಲುವುಗಳು ಇವೆಲ್ಲ ಮಾತಿನ ವಿಮರ್ಶೆಯ ವಸ್ತುವಾಗಬೇಕು. ಆದರೆ ಮಾತುಗಳು ಮಿತಿಯನ್ನು ಮೀರಿ ಕಳಪೆ ರೀತಿಯಲ್ಲಿ ಬೈದಾಡಿಕೊಳ್ಳುತ್ತಿರುವುದು ವಿಷಾದಕರ. ವಾಗ್ದಾಳಿಗಳು ಸಭ್ಯತೆಯ ಎಲ್ಲೆ ಮೀರದಂತಿರಬೇಕು, ಆರೋಗ್ಯಕರವಾಗಿರಬೇಕು. ವಾಚಾಮಗೋಚರವಾಗಿ ಬೈದಾಡಿಕೊಳ್ಳುವುದು ರಾಜಕೀಯ ಪಕ್ಷಗಳ ಮುಖಂಡರಿಗೆ ಖಂಡಿತ ಶೋಭೆ ತರದು. ಕೇರಳದ ಇಂಥ ಒಂದು ಪ್ರಕರಣದಲ್ಲಿ, ರಾಜಕಾರಣಿಗಳು ಹಾಗೂ ಉನ್ನತ ಸ್ಥಾನದಲ್ಲಿರುವವರು ಅನ್ಯರ ಬಗ್ಗೆ ಮಾನಹಾನಿಕರವಾದ ಮಾತುಗಳನ್ನು ಆಡಬಾರದು ಎಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿತ್ತು. ಈ ಕುರಿತು ಕೇರಳದ ಮಾಜಿ ಸಚಿವ ಎಂ.ಎನ್ ಮಣಿ ಎಂಬವರಿಗೆ ಛೀಮಾರಿಯನ್ನೂ ಹಾಕಿತ್ತು. ಇದು ಕೋರ್ಟ್ ಹೇಳದೆಯೂ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಅರ್ಥ ಮಾಡಿಕೊಳ್ಳಬೇಕಾದ ಮಾತು.
ಇಲ್ಲವಾದರೆ ಏನಾಗುತ್ತದೆ? ಇದಕ್ಕೊಂದು ಉದಾಹರಣೆ ಕೊಡಬಹುದು. 2007ರಲ್ಲಿ ನರೇಂದ್ರ ಮೋದಿಯವರನ್ನು ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ʼಸಾವಿನ ಸರದಾರʼ ಎಂದು ಕರೆದಿದ್ದರು. 2017ರಲ್ಲಿ ಮಣಿಶಂಕರ ಅಯ್ಯರ್ ಅವರು ಮೋದಿಯವರನ್ನು ʼನೀಚʼ ಎಂದು ಕರೆದಿದ್ದರು. ಇತ್ತೀಚೆಗೆ ಗುಜರಾತ್ ಚುನಾವಣೆ ಸಂದರ್ಭ ಮೋದಿಯವರಿಗೆ ಮಲ್ಲಿಕಾರ್ಜುನ ಖರ್ಗೆಯವರು ʼರಾವಣʼ ಎಂದಿದ್ದರು. ಆದರೆ ಇಂಥ ಹೇಳಿಕೆಗಳೆಲ್ಲ ಹೇಳಿದವರಿಗೇ ತಿರುಮಂತ್ರವಾಗಿ, ನಿಂದಿಸಲ್ಪಟ್ಟವರು ಭಾರಿ ಬಹುಮತದಿಂದ ಗೆದ್ದಿದ್ದರು. ಮತದಾರರ ಮನಶ್ಶಾಸ್ತ್ರ ಅರ್ಥ ಮಾಡಿಕೊಳ್ಳುವ ಜನನಾಯಕರು ಇಂಥ ಬೈಗುಳಗಳನ್ನು ತಮ್ಮ ಎದುರಾಳಿಗೆ ಬಳಸಲಾರರು. ಇದು ಅವರನ್ನೇ ಇಕ್ಕಟ್ಟಿಗೆ ಸಿಲುಕಿಸುವುದಲ್ಲದೆ, ಅವರ ಚಾರಿತ್ರ್ಯವನ್ನೂ ಹರಾಜಿಗಿಡುತ್ತದೆ. ಎದುರಾಳಿಯನ್ನು ಟೀಕಿಸುವುದರಲ್ಲೂ ಘನತೆ ಇರಬೇಕು.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಬೃಹತ್ ಕಾಮಗಾರಿ ವೇಳೆ ಕಾರ್ಮಿಕರ ಸುರಕ್ಷತೆ ಖಾತರಿಪಡಿಸಿ