ನವ ದೆಹಲಿ: ಸ್ಪೈಸ್ ಜೆಟ್ ವಿಮಾನಗಳಲ್ಲಿ ಬೆನ್ನು ಬೆನ್ನಿಗೇ ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಂಡು ಆತಂಕ ಸೃಷ್ಟಿಯಾಗುತ್ತಿರುವ ನಡುವೆಯೇ ಇದೀಗ ವಿಸ್ತಾರ ಏರ್‌ಲೈನ್ಸ್‌ಗೆ ಸೇರಿದ ವಿಮಾನವೊಂದರಲ್ಲೂ ಟೆಕ್ನಿಕಲ್ ಸಮಸ್ಯೆ ಕಾಣಿಸಿಕೊಂಡಿದೆ.
ಬ್ಯಾಂಕಾಕ್‌ನಿಂದ ದಿಲ್ಲಿಗೆ ಬಂದ ವಿಸ್ತಾರ ಏರ್‌ಬಸ್ ಎ೩೨೦ ವಿಮಾನ ರನ್‌ವೇಯಲ್ಲಿ ಅತ್ಯಂತ ಸುರಕ್ಷಿತವಾಗಿ ಇಳಿದ ಬಳಿಕ ಟ್ಯಾಕ್ಸಿ ಬೇಯಿಂದ ಪಾರ್ಕಿಂಗ್ ಬೇ-ಗೆ ಹೋಗುವ ನಡುವೆ ಎರಡು ಎಂಜಿನ್‌ಗಳ ಪೈಕಿ ಒಂದು ಎಂಜಿನ್ ಬಂದ್ ಆಗಿ ಸಮಸ್ಯೆ ಉಂಟಾಯಿತು. ಒಂದನೇ ನಂಬರ್‌ನ ಎಂಜಿನ್ ಒಮ್ಮಿಂದೊಮ್ಮೆಗೇ ಆಫ್ ಆದ ಹಿನ್ನೆಲೆಯಲ್ಲಿ ಬಳಿಕ ವಿಮಾನವನ್ನು ಎಳೆಯುವ ಟೋಯಿಂಗ್ ವಾಹನವನ್ನು ತರಿಸಿಕೊಂಡು ಪಾರ್ಕಿಂಗ್ ಬೇ-ಗೆ ಎಳೆದುಕೊಂಡು ಹೋಗಬೇಕಾಯಿತು.
ಎಫ್‌ಎಲ್‌ಟಿ ಯುಕೆ-೧೨೨ ಎಂದು ಕರೆಯಲಾಗುವ ವಿಮಾನದಲ್ಲಿ ಜುಲೈ ಐದರಂದು ಈ ಸಮಸ್ಯೆ ಕಾಣಿಸಿಕೊಂಡಿದೆ. ರನ್ ವೇಯಲ್ಲಿ ಸುರಕ್ಷಿತವಾಗಿ ಇಳಿದ ಬಳಿಕ ಒಂದು ಎಂಜಿನ್ ಆಫ್ ಆಗುತ್ತಿದ್ದಂತೆಯೇ ಕೂಡಲೇ ಏರ್ ಟ್ರಾಫಿಕ್ ಕಂಟ್ರೋಲ್‌ಗೆ ಮಾಹಿತಿ ನೀಡಲಾಯಿತು ಎಂದು ತಿಳಿದುಬಂತು.
ʻʻವಿಮಾನ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ೧೦ನೇ ನಂಬರ್‌ನ ರನ್‌ವೇಯಲ್ಲಿ ಸುರಕ್ಷಿತವಾಗಿ ಇಳಿದಿದೆ. ರನ್‌ವೇಯಿಂದ ಟ್ಯಾಕ್ಸಿ ಬೇ ವರೆಗೆ ವಿಮಾನ ಸಾಗಿದ್ದು, ಬಳಿಕ ಒಂದನೇ ನಂಬರ್ ಎಂಜಿನ್ ಒಮ್ಮೆಗೇ ಕೆಲಸ ನಿಲ್ಲಿಸಿತು. ಬಳಿಕ ಏರ್ ಟ್ರಾಫಿಕ್ ಕಂಟ್ರೋಲ್‌ಗೆ ಮಾಹಿತಿ ನೀಡಿ ಟೋ ಟ್ರಕ್‌ನ್ನು ತರಿಸಿಕೊಳ್ಳಲಾಯಿತುʼʼʼ ಎಂದು ಹೇಳಲಾಗಿದೆ.
ಸಮಸ್ಯೆ ಆಗಿದ್ದೇನು?
ʻʻವಿಮಾನ ಲ್ಯಾಂಡ್ ಆಗಿ ಪಾರ್ಕಿಂಗ್ ಬೇ ಕಡೆಗೆ ಹೋಗುವ ವೇಳೆ ಸಣ್ಣದೊಂದು ವಿದ್ಯುತ್ ಸಂಪರ್ಕ ಸಮಸ್ಯೆಯಾಯಿತು. ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ನಾವು ಟೋಯಿಂಗ್ ವಾಹನ ಒದಗಿಸುವಂತೆ ಮನವಿ ಮಾಡಿದೆವುʼʼ ಎಂದು ವಿಸ್ತಾರ ಏರ್‌ಲೈನ್ಸ್ ವಕ್ತಾರರು ತಿಳಿಸಿದ್ದಾರೆ.
ಸ್ಪೈಸ್ ಜೆಟ್ ನಿರಂತರ ಸಮಸ್ಯೆ
ಸ್ಪೈಸ್ ಜೆಟ್ ವಿಮಾನದಲ್ಲಿ ಇತ್ತೀಚೆಗೆ ನಿರಂತರವಾಗಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ. ಕಳೆದ ೧೮ ದಿನಗಳ ಅವಧಿಯಲ್ಲಿ ೮ ಬಾರಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ. ಹೀಗಾಗಿ ಇದರ ಸುರಕ್ಷತೆಯ ಬಗ್ಗೆ ಪ್ರಶ್ನೆ ಮಾಡಿರುವ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ)ವು ಸಂಸ್ಥೆಗೆ ನೋಟಿಸ್ ಜಾರಿಗೊಳಿಸಿದೆ.
ಇದನ್ನೂ ಓದಿ| ಸ್ಪೈಸ್ ಜೆಟ್ ನಲ್ಲಿ 18 ದಿನಗಳಲ್ಲಿ 8 ಸಲ ತಾಂತ್ರಿಕ ದೋಷ ಪತ್ತೆ, ಡಿಜಿಸಿಎ ನೋಟಿಸ್