Site icon Vistara News

Vivek Agnihotri | ದಿಲ್ಲಿ ಹೈಕೋರ್ಟ್‌ಗೆ ವಿವೇಕ್ ಅಗ್ನಿಹೋತ್ರಿ ಕ್ಷಮೆಯಾಚನೆ, ಖುದ್ದು ಹಾಜರಾಗಿ ಎಂದ ಜಡ್ಜ್!

Vivek Agnihotri

ನವದೆಹಲಿ: ಬುದ್ಧಿಜೀವಿ ಮತ್ತು ಆಕ್ಟಿವಿಸ್ಟ್‌ಗಳನ್ನು ‘ಅರ್ಬನ್ ನಕ್ಸಲ್’ ಎಂದು ಕರೆಯುವ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಅವರು ದಿಲ್ಲಿ ಹೈಕೋರ್ಟ್‌ ಮುಂದೆ, ಅಫಿಡವಿಟ್ ಮೂಲಕ ಬೇಷರತ್ ಕ್ಷಮೆಯಾಚಿಸಿದ್ದಾರೆ. ಆದರೆ, ಅಫಿಡವಿಟ್ ಮೂಲಕ ಕ್ಷಮೆ ಬೇಡ. ನ್ಯಾಯಾಲಯಕ್ಕೆ ಖುದ್ದು ಬಂದು ಕ್ಷಮೆ ಕೇಳಬೇಕು ಎಂದು ನ್ಯಾಯಮೂರ್ತಿಗಳು ವಿವೇಕ್ ಪರ ವಕೀಲರಿಗೆ ಸೂಚಿಸಿದ್ದಾರೆ. ಭೀಮ ಕೋರೆಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತ ಗೌತಮ್ ನವ್ಲಾಖ್ ಅವರಿಗೆ ದಿಲ್ಲಿ ಹೈಕೋರ್ಟ್‌ ಜಾಮೀನು ನೀಡಿತ್ತು. ನ್ಯಾಯಾಲಯದ ಈ ಕ್ರಮವನ್ನು ವಿವೇಕ್ ಅಗ್ನಿಹೋತ್ರಿ ಸೇರಿದಂತೆ ಹಲವರು ನಿಂದಿಸಿದ್ದರು.

ನ್ಯಾಯಾಂಗ ನಿಂದನೆ ಆರೋಪದಲ್ಲಿ ವಿವೇಕ್ ಅಗ್ನಿಹೋತ್ರಿ ಮತ್ತು ಇತರರ ವಿರುದ್ಧ ಕಾನೂನು ಕ್ರಮಕ್ಕೆ ದಿಲ್ಲಿ ಹೈಕೋರ್ಟ್ ಮುಂದಾದ ಹಿನ್ನೆಲೆಯಲ್ಲಿ ವಿವೇಕ್ ಅಗ್ನಿಹೋತ್ರಿ ಅವರು ಬೇಷರತ್ ಆಗಿ ನ್ಯಾಯಾಲಯದ ಕ್ಷಮೆಯಾಚಿಸಿದ್ದಾರೆ.

ದಿಲ್ಲಿ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿಯಾಗಿದ್ದ ಎಸ್. ಮರಳೀಧರ್ ಅವರು ಆಕ್ಟಿವಿಸ್ಟ್ ಗೌತಮ್ ನವ್ಲಾಖ್ ಅವರಿಗೆ ಜಾಮೀನು ನೀಡಿದ್ದರು. ಇದೇ ಕಾರಣಕ್ಕಾಗಿ ವಿವೇಕ್ ಅಗ್ನಿಹೋತ್ರಿ ಹಾಗೂ ಇತರರು ಜಸ್ಟೀಸ್ ಮುರಳೀಧರ್ ಅವರನ್ನು ಟೀಕಿಸಿದ್ದರು. ಜಾಮೀನು ನೀಡುವಾಗ ಪಕ್ಷಪಾತಿಯಾಗಿ ವರ್ತಿಸಿದ್ದಾರೆಂದು ಜರಿದಿದ್ದರು. ಈ ಹಿನ್ನೆಲೆಯಲ್ಲಿ ಕೋರ್ಟ್ ಕ್ರಮಕ್ಕೆ ಮುಂದಾಗಿತ್ತು. ಈಗ ಜಸ್ಟೀಸ್ ಎಸ್. ಮುರಳೀಧರ್ ಅವರು ಒಡಿಶಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ವಿವೇಕ್ ಅಗ್ನಿಹೋತ್ರಿ ಬೇಷರತ್ ಕ್ಷಮೆಯಾಚಿಸುವ ಅಫಿಡವಿಟ್ ಅನ್ನು ದಿಲ್ಲಿ ಹೈಕೋರ್ಟ್‌‌ನ ಜಸ್ಟೀಸ್ ಸಿದ್ಧಾರ್ಥ ಮೃದುಲ್ ಮತ್ತು ತಲ್ವಂತ್ ಸಿಂಗ್ ಅವರ ಪೀಠಕ್ಕೆ ಸಲ್ಲಿಸಲಾಗಿದೆ. ಆದರೆ, ಕ್ಷಮೆಯಾಚನೆಗೆ ಖುದ್ದು ಹಾಜರಾಗುವಂತೆ ವಿವೇಕ್ ಅಗ್ನಿಹೋತ್ರಿ ಅವರಿಗೆ ಕೋರ್ಟ್ ಸೂಚಿಸಿದೆ.

ನಾವು ಅವರಿಗೆ(ಅಗ್ನಿಹೋತ್ರಿ) ಕೋರ್ಟ್‌ಗೆ ಹಾಜರಾಗಲು ಸೂಚಿಸುತ್ತಿದ್ದೇವೆ. ಯಾಕೆಂದರೆ ಅವರು ನ್ಯಾಯಾಂಗ ನಿಂದೆನೆ ಮಾಡಿದ್ದಾರೆ. ಖುದ್ದಾಗಿ ಪಶ್ಚಾತ್ತಾಪ ಪಡಲು ಅವರಿಗೆ ಏನಾದರೂ ತೊಂದರೆ ಇದೆಯೇ? ಪಶ್ಚಾತ್ತಾಪವನ್ನು ಯಾವಾಗಲೂ ಅಫಿಡವಿಟ್ ಮೂಲಕ ವ್ಯಕ್ತಪಡಿಸಲಾಗುವುದಿಲ್ಲ ಎಂದು ಪೀಠವು ಖಾರವಾಗಿ ಸೂಚಿಸಿದೆ.

ಇದನ್ನೂ ಓದಿ | ವರವರ ರಾವ್‌ ಶಾಶ್ವತ ಜಾಮೀನು ತಿರಸ್ಕಾರ: ಜೈಲು ಸ್ಥಿತಿ ಸುಧಾರಿಸಲು ಸೂಚಿಸಿದ ಬಾಂಬೆ ಹೈಕೋರ್ಟ್‌

Exit mobile version