ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಇದ್ದು, ಲಕ್ಷಾಂತರ ನೂತನ ಮತದಾರರು ಪಟ್ಟಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಚುನಾವಣೆ ಆಯೋಗ ತಿಳಿಸಿದೆ. ಇದರ ಬೆನ್ನಲ್ಲೇ, ಸ್ಥಳೀಯರಲ್ಲದವರಿಗೂ (Non Locals) ಕಾಶ್ಮೀರದಲ್ಲಿ ಮತದಾರರ ಗುರುತಿನ ಚೀಟಿ ನೀಡಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ (Mehbooba Mufti) ಸೇರಿ ಪ್ರತಿಪಕ್ಷಗಳ ಹಲವು ನಾಯಕರು ಆರೋಪಿಸಿದ್ದಾರೆ.
“ಜಮ್ಮು-ಕಾಶ್ಮೀರದಲ್ಲಿ ಚುನಾವಣೆ ಮುಂದೂಡುವುದರ ಹಿಂದೆ ಬಿಜೆಪಿಯ ಕುತಂತ್ರವಿದೆ. ಇದರ ಭಾಗವಾಗಿಯೇ ಈಗ ಸ್ಥಳೀಯರಲ್ಲದವರ ಹೆಸರುಗಳೂ ಮತದಾರರ ಪಟ್ಟಿ ಸೇರ್ಪಡೆಯಾಗುತ್ತಿರುವುದು ಚುನಾವಣೆ ಮೇಲೆ ಪರಿಣಾಮ ಬೀರಲಿದೆ. ಬಿಜೆಪಿಯ ಇಂತಹ ನಡೆಯಗಳು ಅಪಾಯಕಾರಿ” ಎಂದು ಮುಫ್ತಿ ಟ್ವೀಟ್ ಮಾಡಿದ್ದಾರೆ.
“ಕಣಿವೆಯ ಮತದಾರರು ಬೆಂಬಲಿಸುವ ಕುರಿತು ಬಿಜೆಪಿಗೆ ಅಭದ್ರತೆ ಕಾಡುತ್ತಿದೆ. ಹಾಗಾಗಿಯೇ, ಹೊರಗಿನವರನ್ನು ಮತದಾರರ ಪಟ್ಟಿಗೆ ಸೇರಿಸುತ್ತಿದೆ. ಆದರೆ, ಬಿಜೆಪಿಯ ಇಂತಹ ಯಾವುದೇ ಷಡ್ಯಂತ್ರಗಳು ಫಲ ನೀಡುವುದಿಲ್ಲ” ಎಂದು ನ್ಯಾಷನಲ್ ಕಾನ್ಫರೆನ್ಸ್‌ನ ಉಮರ್ ಅಬ್ದುಲ್ಲಾ (Omar Abdullah) ಹೇಳಿದ್ದಾರೆ.
ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ೩೭೦ನೇ ವಿಧಿ ರದ್ದುಗೊಳಿಸಿದ ಬಳಿಕ ಬೇರೆ ರಾಜ್ಯದವರೂ ಕಣಿವೆಯಲ್ಲಿ ಭೂಮಿ, ಆಸ್ತಿ ಖರೀದಿಸುವ ಹಕ್ಕು ಹೊಂದಿದ್ದಾರೆ. ಕಳೆದ ಜುಲೈನಿಂದ ಕಾಶ್ಮೀರದಲ್ಲಿ ಮತದಾರರ ಪಟ್ಟಿಗೆ ನೂತನ ಮತದಾರರನ್ನು ಸೇರಿಸಲಾಗುತ್ತಿದ್ದು, ೨೦-೨೫ ಲಕ್ಷ ಜನರ ಸೇರ್ಪಡೆಯಾಗಲಿದೆ ಎಂದು ಚುನಾವಣೆ ಆಯೋಗ ತಿಳಿಸಿದೆ. ಕಣಿವೆಯಲ್ಲಿ ಮುಂದಿನ ವರ್ಷ ಚುನಾವಣೆ ನಡೆಯುವ ಸಾಧ್ಯತೆ ಇದೆ.
ಇದನ್ನೂ ಓದಿ | ಮತದಾರರಿಗೆ ಆಮಿಷಗಳನ್ನು ನಿಲ್ಲಿಸದಿದ್ದರೆ ಚುನಾವಣಾ ಆಯೋಗಕ್ಕೆ ದೇವರೇ ಗತಿ : ಸುಪ್ರೀಂ