ನವದೆಹಲಿ: ಕೇಂದ್ರ ಸರ್ಕಾರ ಡಿಜಿಟಲ್ ತಂತ್ರಜ್ಞಾನಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಇದಕ್ಕಾಗಿ ಡಿಜಿಟಲ್ ಇಂಡಿಯಾ (Digital India) ಎಂಬ ಅಭಿಯಾನವನ್ನೇ ಆರಂಭಿಸಿದೆ. ಸರ್ಕಾರಿ ಕಚೇರಿಗಳಿಂದ ಹಿಡಿದು ಕೋರ್ಟ್‌ಗಳ ವಿಚಾರಣೆಗಳ ಲೈವ್ ಸ್ಟ್ರೀಮ್‌ವರೆಗೆ ಡಿಜಿಟಲೀಕರಣಗೊಳಿಸಲಾಗುತ್ತಿದೆ. ಆನ್‌ಲೈನ್ ಅರ್ಜಿ, ಆನ್‌ಲೈನ್ ವಹಿವಾಟು, ದಾಖಲೆಗಳ ಕಂಪ್ಯೂಟರೀಕರಣ, ಆನ್‌ಲೈನ್ ಸೇವೆಗಳು ಸೇರಿ ಹಲವು ದಿಸೆಯಲ್ಲಿ ದೇಶವು ಡಿಜಿಟಲೀಕರಣಗೊಳ್ಳುತ್ತಿದೆ. ಇದರ ಬೆನ್ನಲ್ಲೇ, ಈಗ ಸಂಸತ್ತು ಕೂಡ ಡಿಜಿಟಲ್ (Digital Sansad) ಆಗುವತ್ತ ಮಹತ್ವದ ಹೆಜ್ಜೆ ಇರಿಸಲಾಗಿದೆ.
ಹೌದು, ದೇಶದ ಸಂಸತ್ತು ಕೂಡ ಡಿಜಿಟಲ್ ಆಗುತ್ತಿದೆ. ಸಂಸತ್ತು ಕೂಡ ಪೇಪರ್‌ಲೆಸ್ ಆಗಿ ಮಾರ್ಪಡಿಸುವ ದಿಸೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಇದಕ್ಕೆ ನಿದರ್ಶನ ಎಂಬಂತೆ, ಉಪ ರಾಷ್ಟ್ರಪತಿ ಜಗದೀಪ್ ಧನ್‌ಕರ್ ಅವರು ರಾಜ್ಯಸಭೆಗೆ ಟ್ಯಾಬ್ಲೆಟ್ ತೆಗೆದುಕೊಂಡು ಬಂದಿದ್ದು, ಪೇಪರ್‌ಗಳಿಗೆ ವಿದಾಯ ಹೇಳಿದ್ದಾರೆ. ಟ್ಯಾಬ್ಲೆಟ್ ನೋಡಿಕೊಂಡೇ ರಾಜ್ಯಸಭೆ ಸದಸ್ಯರ ಹೆಸರುಗಳನ್ನು ಕೂಗುವುದು ಸೇರಿ ಕಲಾಪದ ವಿವಿಧ ಚಟುವಟಿಕೆಗಳನ್ನು ಕೈಗೊಂಡಿದ್ದಾರೆ. ಹಾಗಾಗಿ, ಇನ್ನು ಕೆಲವೇ ದಿನಗಳಲ್ಲಿ ಸಂಸತ್ತು ಕಾಗದರಹಿತ ಆಗಲಿದೆ ಎಂದೇ ಹೇಳಲಾಗುತ್ತಿದೆ.
ಟ್ಯಾಬ್ಲೆಟ್ ಬಳಸಿದ ಧನ್‌ಕರ್
ಸಂಸತ್ತಿನಲ್ಲಿ ಆಧುನಿಕ ತಂತ್ರಜ್ಞಾನದ ಅಳವಡಿಕೆ ಹಾಗೂ ಆಧುನಿಕ ಡಿಜಿಟಲ್ ಉಪಕರಣಗಳನ್ನು ಬಳಕೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು ಡಿಜಿಟಲ್ ಸಂಸತ್ ಎಂಬ ಯೋಜನೆ ಜಾರಿಗೆ ತಂದಿದೆ. ಈ ಯೋಜನೆ ಅಡಿಯಲ್ಲಿಯೇ ಜಗದೀಪ್ ಧನ್‌ಕರ್ ಅವರು ಟ್ಯಾಬ್ ಬಳಸುವ ಮೂಲಕ ಪೇಪರ್‌ಲೆಸ್ ಸಂಸತ್ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ ಎನ್ನಲಾಗುತ್ತಿದೆ. ದೇಶವನ್ನು ಡಿಜಿಟಲೀಕರಣಗೊಳಿಸುವ ಜತೆಗೆ ಸಂಸತ್‌ಅನ್ನೂ ಡಿಜಿಟಲ್ ತಂತ್ರಜ್ಞಾನದತ್ತ ಕೊಂಡೊಯ್ಯುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ ಎಂದು ತಿಳಿದುಬಂದಿದೆ.
ಹೊಸ ಸಂಸತ್ ಭವನದಲ್ಲಿ ಕೃತಕ ಬುದ್ಧಿಮತ್ತೆ
ಸಂಸತ್ತನ್ನು ಡಿಜಿಟಲೀಕರಣಗೊಳಿಸುವ ದಿಸೆಯಲ್ಲಿ ಕೇಂದ್ರ ಸರ್ಕಾರ ಹಲವು ರೀತಿಯಲ್ಲಿ ಯೋಜನೆ ರೂಪಿಸಿದೆ. ಅದರಲ್ಲೂ, ಸೆಂಟ್ರಲ್ ವಿಸ್ಟಾ ಯೋಜನೆ ಅಡಿಯಲ್ಲಿ ನಿರ್ಮಿಸಿರುವ ಸಂಸತ್ ಭವನದಲ್ಲಿ ಕೃತಕ ಬುದ್ಧಿಮತ್ತೆ (Artificial Intelligence) ತಂತ್ರಜ್ಞಾನವನ್ನೂ ಅಳವಡಿಸಲಾಗುತ್ತದೆ. ಇನ್ನು ಸಂಸತ್ತಿನ ಪ್ರತಿಯೊಬ್ಬ ಸದಸ್ಯರಿಗೂ ಅತ್ಯಾಧುನಿಕ ಟ್ಯಾಬ್ಲೆಟ್‌ಗಳನ್ನು ನೀಡಲಾಗುತ್ತದೆ. ಕಲಾಪಗಳ ಭಾಷಣಗಳು, ನೋಟಿಫಿಕೇಷನ್‌ಗಳು, ಪ್ರಶ್ನೆಗಳನ್ನು ಕೇಳುವುದು ಸೇರಿ ಹಲವು ರೀತಿಯಲ್ಲಿ ಸಂಸದರು ಟ್ಯಾಬ್ಲೆಟ್‌ಗಳನ್ನು ಸದುಪಯೋಗಪಡಿಸಿಕೊಳ್ಳಬಹುದು. ನೂತನ ಸಂಸತ್ ಭವನವನ್ನು ಉದ್ಘಾಟಿಸಿದ ಬಳಿಕವೇ ಸಂಸದರಿಗೆ ಟ್ಯಾಬ್ಲೆಟ್‌ಗಳನ್ನು ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.
ಕೃತಕ ಬುದ್ಧಿಮತ್ತೆ ಅಳವಡಿಕೆ, ಟ್ಯಾಬ್ಲೆಟ್‌ಗಳ ವಿತರಣೆ ಸೇರಿ ಇನ್ನೂ ಹಲವು ಡಿಜಿಟಲ್ ಮೂಲ ಸೌಕರ್ಯಗಳನ್ನು ಸಂಸತ್ತಿನಲ್ಲಿ ಒದಗಿಸಲಾಗುತ್ತದೆ ಎಂದು ತಿಳಿದುಬಂದಿದೆ. ಡಿಜಿಟಲ್ ಸಂಸತ್ ಎಂಬ ವೇದಿಕೆಯನ್ನು ರಚಿಸಿ, ಅಲ್ಲಿ ಸಂಸತ್ತಿನ ಕಲಾಪಗಳು, ಸಂಸದರ ಚಟುವಟಿಕೆಗಳು ಸೇರಿ ವಿವಿಧ ರೀತಿಯ ಮಾಹಿತಿಯನ್ನೂ ಒಂದೇ ವೇದಿಕೆಯ ಅಡಿಯಲ್ಲಿ ತರುವುದು ಸರ್ಕಾರದ ಉದ್ದೇಶವಾಗಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಡಿಜಿಟಲ್ ಬಳಕೆದಾರರ ಡೇಟಾ ಸುರಕ್ಷಿತವಾಗಿಡುವುದು ಅತಿ ಮುಖ್ಯ