ನವದಹಲಿ: ವಿದ್ಯುನ್ಮಾನ ಮತಯಂತ್ರಗಳಲ್ಲಿ (EVM) ಚಲಾವಣೆಯಾಗುವ ಪ್ರತಿಯೊಂದು ಮತಗಳನ್ನೂ ವಿವಿಪ್ಯಾಟ್‌ನಲ್ಲಿ ದಾಖಲಾಗುವ ಮುದ್ರಿತ ಪ್ರತಿಯೊಂದಿಗೆ ತಾಳೆ ಹಾಕಬೇಕು (VVPAT Verification) ಎಂದು ಕೋರಿರುವ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್ (Supreme Court) ಇಂದು (ಏಪ್ರಿಲ್ 24) ತನ್ನ ತೀರ್ಪು ಪ್ರಕಟಿಸಲಿದೆ.
ಮತದಾರ ಇವಿಎಂನಲ್ಲಿ ಮತ ಚಲಾಯಿಸಿದ ಕೂಡಲೇ ಆತ ಯಾವ ಪಕ್ಷಕ್ಕೆ ಮತ ಹಾಕಿದ್ದಾನೆ ಎನ್ನುವ ವಿವರ ಆ ಪಕ್ಷದ ಅಭ್ಯರ್ಥಿಯ ಚಿಹ್ನೆಯೊಂದಿಗೆ ವಿವಿಪ್ಯಾಟ್ ಯಂತ್ರದಲ್ಲಿ ಕಾಣಿಸಿಕೊಂಡು ಬಳಿಕ ಮುದ್ರಿತ ರೂಪದಲ್ಲಿ ಒಳ ಸೇರಿಕೊಳ್ಳುತ್ತದೆ. ಆದರೆ ಮತ ಎಣಿಕೆ ವೇಳೆ ಪ್ರತಿ ಕ್ಷೇತ್ರದ ಆಯ್ದ ಬೂತ್‌ಗಳಲ್ಲಿ ಮಾತ್ರವೇ ಚಲಾವಣೆಯಾದ ಮತ ಮತ್ತು ವಿವಿಪ್ಯಾಟ್‌ನಲ್ಲಿ ದಾಖಲಾದ ಮುದ್ರಿತ ಪ್ರತಿಗಳೊಂದಿಗೆ ತಾಳೆ ಹಾಕಲಾಗುತ್ತದೆ. ಆದರೆ ಎಲ್ಲ ಮತಗಳನ್ನೂ ತಾಳೆ ಹಾಕಬೇಕು ಎಂದು ಅರ್ಜಿದಾರರು ಕೋರಿ ಕೋರ್ಟ್ ಮೆಟ್ಟಿಲೇರಿದ್ದರು.
ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರನ್ನೊಳಗೊಂಡ ನ್ಯಾಯಪೀಠವು ಎರಡು ದಿನಗಳ ವಿಚಾರಣೆಯ ನಂತರ ಏಪ್ರಿಲ್ 18ರಂದು ಅರ್ಜಿಗಳ ಮೇಲಿನ ತೀರ್ಪನ್ನು ಕಾಯ್ದಿರಿಸಿತ್ತು. ವಿಚಾರಣೆ ಚುನಾವಣಾ ಆಯೋಗದ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಮಣಿಂದರ್ ಸಿಂಗ್, ʼʼಇವಿಎಂಗಳು ಸ್ವತಂತ್ರ ಯಂತ್ರಗಳಾಗಿವೆ ಮತ್ತು ಅವುಗಳನ್ನು ತಿರುಚಲು ಸಾಧ್ಯವಿಲ್ಲ. ಆದರೆ ಮಾನವ ದೋಷದ ಸಾಧ್ಯತೆಯನ್ನು ತಳ್ಳಿ ಹಾಕಲಾಗುವುದಿಲ್ಲʼʼ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.
ಚುನಾವಣಾ ಪ್ರಕ್ರಿಯೆಯ ಪಾವಿತ್ರ್ಯವನ್ನು ಕಾಪಾಡಬೇಕು ಎಂದು ಒತ್ತಿ ಹೇಳಿದ ನ್ಯಾಯಮೂರ್ತಿ ದತ್ತಾ, “ನೀವು ನ್ಯಾಯಾಲಯದ ಒಳಗೆ ಮತ್ತು ನ್ಯಾಯಾಲಯದ ಹೊರಗೆ ಆತಂಕಗಳನ್ನು ನಿವಾರಿಸಬೇಕು. ನಿರೀಕ್ಷಿಸಿದ ಕೆಲಸವನ್ನು ಮಾಡಲಾಗುತ್ತಿಲ್ಲ ಎಂಬ ಆತಂಕ ಯಾರಿಗೂ ಇರಬಾರದು” ಎಂದು ಹೇಳಿದ್ದರು. ಜತೆಗೆ “ಎಲ್ಲವನ್ನೂ ಅನುಮಾನಿಸಲು ಸಾಧ್ಯವಿಲ್ಲ. ಚುನಾವಣಾ ಆಯೋಗ ಏನಾದರೂ ಒಳ್ಳೆಯದನ್ನು ಮಾಡಿದ್ದರೆ ನೀವು ಅದನ್ನು ಪ್ರಶಂಸಿಸಬೇಕು. ನೀವು ಎಲ್ಲವನ್ನೂ ಟೀಕಿಸಬೇಕಾಗಿಲ್ಲ” ಎಂದು ನ್ಯಾಯಪೀಠವು ಅರ್ಜಿದಾರರಿಗೆ ತಿಳಿಸಿತ್ತು.
ವಿವಿಪ್ಯಾಟ್ ಮತವನ್ನು ಸರಿಯಾಗಿ ಚಲಾಯಿಸಲಾಗಿದೆಯೇ ಮತ್ತು ಮತದಾರ ತಾವು ಬೆಂಬಲಿಸುವ ಅಭ್ಯರ್ಥಿಗೆ ಮತ ಚಲಾವಣೆ ಆಗಿದೆಯೇ ಎನ್ನುವುದನ್ನು ಖಾತರಿಪಡಿಸಲು ಅನುವು ಮಾಡಿಕೊಡುತ್ತದೆ. ವಿವಿಪ್ಯಾಟ್ ಮುದ್ರಿತ ವಿವರಗಳನ್ನು ಮುಚ್ಚಿದ ಲಕೋಟೆಯಲ್ಲಿ ಇರಿಸಲಾಗುತ್ತದೆ ಮತ್ತು ವಿವಾದವಿದ್ದರೆ ಅದನ್ನು ತೆರೆಯಬಹುದಾಗಿದೆ. ಪ್ರಸ್ತುತ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಐದು ಇವಿಎಂಗಳ ವಿವಿಪ್ಯಾಟ್ ಸ್ಲಿಪ್‌ಗಳನ್ನು ಪರಿಶೀಲಿಸಲಾಗುತ್ತದೆ.
ಇದನ್ನೂ ಓದಿ: VVPAT Verification: ಇವಿಎಂ-ವಿವಿಪ್ಯಾಟ್ ತಾಳೆಯ ಪ್ರಕ್ರಿಯೆ ತಿಳಿಸಿ; ಆಯೋಗಕ್ಕೆ ಸುಪ್ರೀಂ ಸೂಚನೆ
ಅರ್ಜಿದಾರರ ಆತಂಕವೇನು?
ಇವಿಎಂ ಮತದಾನದ ವ್ಯವಸ್ಥೆಯ ಬಗ್ಗೆ ಪ್ರತಿಪಕ್ಷಗಳ ಪ್ರಶ್ನೆಗಳು ಮತ್ತು ಆತಂಕಗಳ ನಡುವೆ, ಕೋರ್ಟ್‌ಗೆ ಸಲ್ಲಿಸಿದ ಅರ್ಜಿಗಳು ಪ್ರತಿ ಮತದ ಪರಿಶೀಲನೆ ನಡೆಸಬೇಕು ಎಂದು ಮನವಿ ಸಲ್ಲಿಸಿವೆ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ಮತ್ತು ಕಾರ್ಯಕರ್ತ ಅರುಣ್ ಕುಮಾರ್ ಅಗರ್ವಾಲ್ ಈ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಅಗರ್ವಾಲ್ ಅವರು ಎಲ್ಲಾ ವಿವಿಪ್ಯಾಟ್ ಸ್ಲಿಪ್‌ಗಳನ್ನು ಎಣಿಕೆ ಮಾಡಲು ಕೋರಿದ್ದಾರೆ. ಹೀಗಾಗಿ ಇಂದಿನ ತೀರ್ಪು ಕುತೂಹಲ ಮೂಡಿಸಿದೆ.