Site icon Vistara News

ಕುತುಬ್‌ ಮಿನಾರ್‌ ಸಂಕೀರ್ಣದಲ್ಲಿ ಮತ್ತೆ ನಮಾಜ್‌ಗೆ ಅವಕಾಶ ಕೋರಿದ ವಕ್ಫ್‌ ಅಧ್ಯಕ್ಷ

ಕುತುಬ್‌ ಮಿನಾರ್‌

ನವದೆಹಲಿ: ಜಗತ್ಪ್ರಸಿದ್ಧ ಕುತುಬ್‌ ಮಿನಾರ್‌ ಸಂಕೀರ್ಣದಲ್ಲಿ ಇದೆ ಎನ್ನಲಾದ ಹಿಂದೂ ಮತ್ತು ಜೈನ ಮೂರ್ತಿಗಳನ್ನು ಮರುಸ್ಥಾಪಿಸಬೇಕು ಎಂಬ ಬೇಡಿಕೆಯ ನಡುವೆಯೇ ಈ ಸಂಕೀರ್ಣದಲ್ಲಿರುವ ಮಸೀದಿಯಲ್ಲಿ ಪ್ರಾರ್ಥನೆಗೆ ಅವಕಾಶ ನೀಡಬೇಕು ಎಂದು ದೆಹಲಿಯ ವಕ್ಫ್‌ ಮಂಡಳಿ ಬೇಡಿಕೆ ಮುಂದಿಟ್ಟಿದೆ.
ಪ್ರಾಚ್ಯ ವಸ್ತು ಇಲಾಖೆಗೆ ಸ್ಮಾರಕವಾಗಿ ಹಸ್ತಾಂತರಗೊಂಡ ಸಂದರ್ಭದಲ್ಲಿ ಇಲ್ಲಿ ಯಾವುದೇ ಪೂಜೆಗಳು ನಡೆಯುತ್ತಿರಲಿಲ್ಲ. ಹೀಗಾಗಿ ಮತ್ತೆ ಪೂಜೆ, ಮೂರ್ತಿಗಳ ಸ್ಥಾಪನೆಗೆ ಅವಕಾಶ ನೀಡಲಾಗದು ಎಂದು ಇಲಾಖೆ ಇತ್ತೀಚೆಗೆ ಕೋರ್ಟ್‌ಗೆ ತಿಳಿಸಿತ್ತು. ಈ ನಡುವೆ, ಸಂಕೀರ್ಣದಲ್ಲಿರುವ ಕುವ್ವತ್‌-ಉಲ್‌-ಇಸ್ಲಾಂ ಮಸೀದಿಯಲ್ಲಿ ನಡೆಯುತ್ತಿದ್ದ ನಮಾಜನ್ನು ಪ್ರಾಚ್ಯ ವಸ್ತು ಇಲಾಖೆಯವರೇ ನಿಲ್ಲಿಸಿದ್ದರು. ಇದನ್ನು ಮರು ಆರಂಭಿಸಲು ಅವಕಾಶ ನೀಡಬೇಕು ಎಂದು ದೆಹಲಿಯ ವಕ್ಫ್‌ ಮಂಡಳಿ ಅಧ್ಯಕ್ಷ ಅಮಾನುತುಲ್ಲಾ ಖಾನ್‌ ಆಗ್ರಹಿಸಿದ್ದಾರೆ. ಈ ಸಂಬಂಧ ಅವರು ಪ್ರಾಚ್ಯ ವಸ್ತು ಇಲಾಖೆಯ ಪ್ರಧಾನ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

ಕುವ್ವತ್‌-ಉಲ್‌-ಇಸ್ಲಾಂ ಮಸೀದಿಯ ಇಮಾಮ್‌ ಆಗಿರುವ ಮೌಲ್ವಿ ಶೇರ್‌ ಮೊಹಮ್ಮದ್‌ ಅವರು ಕೂಡಾ ಕಳೆದ ಮೇ 7ರಂದು ಪತ್ರವೊಂದನ್ನು ಬರೆದಿದ್ದು, ಪ್ರಾಚ್ಯ ವಸ್ತು ಇಲಾಖೆ ಅಧಿಕಾರಿಗಳು ನಮಾಜ್‌ ಮಾಡಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ಮಸೀದಿಯಲ್ಲಿ ಈ ಹಿಂದೆ ನಡೆಯುತ್ತಿದ್ದ ನಮಾಜ್‌ನ್ನು ಅಧಿಕಾರಿಗಳು ನಿಲ್ಲಿಸಿದ್ದು, ಅದರ ಪುನರಾರಂಭಕ್ಕೆ ಅವಕಾಶ ನೀಡುವಂತೆ ಸೂಚಿಸಬೇಕು ಎಂದು ಕೋರಲಾಗಿದೆ.

ಇದನ್ನೂ ಓದಿ: Qutub Minar ಪೂಜಾಸ್ಥಳವಲ್ಲ, ಕೇವಲ ಸ್ಮಾರಕ ಅಷ್ಟೆ ಎಂದ ಪ್ರಾಚ್ಯ ವಸ್ತು ಇಲಾಖೆ

ಆದರೆ, ಪ್ರಾಚ್ಯ ವಸ್ತು ಇಲಾಖೆಯ ಪರ ವಕೀಲರು ಯಾವ ಕಾರಣಕ್ಕೂ ಇಲ್ಲಿ ಧಾರ್ಮಿಕ ಪೂಜೆ, ಪ್ರಾರ್ಥನೆಗಳಿಗೆ ಅವಕಾಶವಿಲ್ಲ ಎಂದು ಹೇಳಿದ್ದಾರೆ. ಇತ್ತೀಚೆಗೆ ಕುತುಬ್‌ ಮಿನಾರ್‌ ಸಂಕೀರ್ಣದಲ್ಲಿರುವ ಮೂರ್ತಿಗಳಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಕೋರಿ ಸಲ್ಲಿಸಿದ ಅರ್ಜಿಗೆ ಪ್ರತಿಯಾಗಿಯೂ ಎಎಸ್‌ಐ ಇದೇ ಅಭಿಮತವನ್ನು ವ್ಯಕ್ತಪಡಿತ್ತು.

ಕುತುಬ್‌ ಮಿನಾರ್‌ ಒಂದು ಪೂಜಾ ಸ್ಥಳವಲ್ಲ. ಅದು ಒಂದು ಸ್ಮಾರಕ. ಇದನ್ನು ಕೇಂದ್ರ ಸರಕಾರ ಬಹುಕಾಲದಿಂದ ಸಂರಕ್ಷಿಸುತ್ತಿದೆ. ಕುತುಬ್‌ ಮಿನಾರ್‌ ಮತ್ತು ಅದರ ಸಂಕೀರ್ಣದೊಳಗಿನ ಯಾವುದೇ ಭಾಗದಲ್ಲಿ ಯಾವುದೇ ಸಮುದಾಯದವರು ಪೂಜೆ, ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಅವಕಾಶವಿಲ್ಲ ಎಂದು ಎಎಸ್‌ಐ ವಕೀಲರು ಕೋರ್ಟ್‌ಗೆ ತಿಳಿಸಿದ್ದರು.

ದೇವಸ್ಥಾನಗಳ ಪಳೆಯುಳಿಕೆಯಿಂದ ಮಸೀದಿ
ಕುವ್ವತ್‌-ಉಲ್‌-ಇಸ್ಲಾಂ ಮಸೀದಿಯನ್ನು 27 ದೇವಸ್ಥಾನಗಳ ಶಿಲ್ಪ ಕಲಾ ಸ್ತಂಭಗಳು ಮತ್ತು ಇತರ ಪರಿಕರಗಳಿಂದ ನಿರ್ಮಿಸಲಾಗಿದೆ ಎನ್ನುವುದನ್ನು ಮಸೀದಿಯ ಒಳಗೆ ಇರುವ ಪರ್ಷಿಯನ್‌ ಭಾಷೆಯ ಉಲ್ಲೇಖದಲ್ಲಿ ಸ್ಪಷ್ಟಪಡಿಸಲಾಗಿದೆ ಎಂದು ಎಎಸ್‌ಐ ಹೇಳಿತ್ತು. ಈ ವಿಚಾರ ಹೊಸ ವಿವಾದ ತಲೆ ಎತ್ತಲು ಮುನ್ನುಡಿ ಬರೆದಂತಾಗಿತ್ತು. ಆದರೆ, ಇದರ ನಡುವೆಯೇ ಮಸೀದಿಯಲ್ಲಿ ನಮಾಜ್‌ಗೆ ಅವಕಾಶ ಕೋರಿದ್ದು ಹೊಸ ಚರ್ಚೆಗೆ ಕಾರಣವಾಗಿದೆ. ಇದನ್ನೂ ಓದಿ| Explainer: ಜ್ಞಾನವಾಪಿ ಮಸೀದಿ ವಿವಾದ: ಹಿಂದೂಗಳಿಗೆ ಅಡ್ಡಿಯಾಗುತ್ತಾ ಪೂಜಾ ಸ್ಥಳಗಳ ಕಾಯಿದೆ ?

Exit mobile version