Site icon Vistara News

ನಾಯಿ ವಾಕಿಂಗ್‌ಗೆ ಸ್ಟೇಡಿಯಂನಿಂದ ಕ್ರೀಡಾಳುಗಳನ್ನೇ ಹೊರಗಟ್ಟುತ್ತಿದ್ದ ಅಧಿಕಾರಿ, ಪತ್ನಿ ಬೇರೆ ಬೇರೆ ರಾಜ್ಯಕ್ಕೆ ಟ್ರಾನ್ಸ್‌ಫರ್

ನವದೆಹಲಿ: ತನ್ನ ನಾಯಿಯ ಜತೆ ವಾಕಿಂಗ್‌ಗೆ ಹೋಗಲೆಂದು ರಾಜಧಾನಿಯ ತ್ಯಾಗರಾಜ ಸ್ಟೇಡಿಯಂನ್ನು ಸಂಜೆ ಏಳು ಗಂಟೆಗೇ ಖಾಲಿ ಮಾಡಿಸುತ್ತಿದ್ದ ಐಎಎಸ್‌ ಅಧಿಕಾರಿ ಸಂಜೀವ್‌ ಖೈರ್ವಾರ್‌ ಅವರನ್ನು ಲಡಾಖ್‌ಗೆ ವರ್ಗಾಯಿಸಲಾಗಿದೆ. ಐಎಎಸ್‌ ಅಧಿಕಾರಿಯೂ ಆಗಿರುವ ಅವರ ಪತ್ನಿ ರಿಂಕು ದುಗ್ಗಾ ಅವರು ಅರುಣಾಚಲ ಪ್ರದೇಶಕ್ಕೆ ಟ್ರಾನ್ಸ್‌ಫರ್‌ ಮಾಡಲಾಗಿದೆ. ಕ್ರೀಡಾಳುಗಳನ್ನೇ ಹೊರಗಟ್ಟಿ ತಮ್ಮ ಮರ್ಜಿ ಮೆರೆದ ಅಧಿಕಾರಿಗಳ ವಿರುದ್ಧ ದೇಶಾದ್ಯಂತ ಕೇಳಿಬಂದ ಆಕ್ರೋಶಕ್ಕೆ ಶರಣಾಗಿ ಕೇಂದ್ರ ಗೃಹ ಸಚಿವಾಲಯ ಈ ಕ್ರಮ ಕೈಗೊಂಡಿದೆ.

ದೆಹಲಿಯ ಕಂದಾಯ ವಿಭಾಗದ ಪ್ರಿನ್ರಿಪಾಲ್‌ ಸೆಕ್ರೆಟರಿ ಅಗಿರುವ ಖೈರ್ವಾರ್‌ ಅವರು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ತ್ಯಾಗರಾಜ ಸ್ಟೇಡಿಯಂನಿಂದ ಎಲ್ಲ ಕ್ರೀಡಾಳುಗಳನ್ನು ಏಳು ಗಂಟೆಗೆ ಹೊರ ಹೋಗುವಂತೆ ನೋಡಿಕೊಂಡಿದ್ದರು. ಬಳಿಕ ಅವರು ತಮ್ಮ ಪತ್ನಿ ಮತ್ತು ನಾಯಿ ಜತೆ ಅಲ್ಲಿ ವಾಕಿಂಗ್‌ ಮಾಡುತ್ತಿದ್ದರು! ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ಕೇಳಿ ಬಂದಾಗ ದಿಲ್ಲಿಯ ಮುಖ್ಯ ಕಾರ್ಯದರ್ಶಿಗಳಿಂದ ವರದಿ ಕೇಳಿದ ಗೃಹ ಇಲಾಖೆ, ಅವರ ವರದಿಯ ನೆಲೆಯಲ್ಲಿ ಕ್ರಮ ಕೈಗೊಂಡಿದೆ.‌

ಇದನ್ನೂ ಓದಿ| ಹಿರಿಯ ಐಪಿಎಸ್ ಅಧಿಕಾರಿ ರವೀಂದ್ರನಾಥ್‌ ರಾಜೀನಾಮೆ

ರಾತ್ರಿ ಹತ್ತರವರೆಗೂ ಅವಕಾಶ
ಖೈರ್ವಾರ್‌ ದಂಪತಿಯ ಆಟಾಟೋಪಗಳ ಬಗ್ಗೆ ಮಾಹಿತಿ ಬರುತ್ತಲೇ ಜಾಗೃತರಾದ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್.‌ ರಾಜಧಾನಿಯ ಎಲ್ಲ ಸರಕಾರಿ ಕ್ರೀಡಾಂಗಣಗಳನ್ನು ರಾತ್ರಿ ಹತ್ತು ಗಂಟೆವರೆಗೂ ತೆರೆದಿಡಬೇಕು, ಕ್ರೀಡಾಳುಗಳು ಸವಲತ್ತುಗಳನ್ನು ಬಳಸುವಂತಾಗಬೇಕು ಎಂದು ಸೂಚಿಸಿದ್ದರು.

ಯಾರು ಈ ಸಂಜೀವ್‌ ಖೈರ್ವಾರ್‌?
ಸಂಜೀವ್‌ ಖೈರ್ವಾರ್‌ (51) 1994ರ ಬ್ಯಾಚಿನ ಐಎಎಸ್‌ ಅಧಿಕಾರಿ. ಹಿಂದೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಕಂದಾಯ, ಹಣಕಾಸು ಮತ್ತು ಸಾರ್ವಜನಿಕ ಆಡಳಿತ ವಿಭಾಗಗಳಲ್ಲಿ ಪ್ರಮುಖ ಹುದ್ದೆಗಳನ್ನು ಹೊಂದಿದ್ದರು. ಅರ್ಥಶಾಸ್ತ್ರದಲ್ಲಿ ಎಂಎ ಮತ್ತು ಕಂಪ್ಯೂಟರ್‌ ಸೈನ್ಸ್‌ನಲ್ಲಿ ಬಿಟೆಕ್‌ ಪದವಿ ಗಳಿಸಿರುವ ಅವರು, ಮುಸ್ಸೂರಿಯಲ್ಲಿ ಐಎಎಸ್‌ ತರಬೇತಿ ಮುಗಿಸಿದವರೇ ಚಂಡೀಗಢದಲ್ಲಿ ಮೊದಲ ಪೋಸ್ಟಿಂಗ್‌ ಪಡೆದಿದ್ದರು. ಖೈರ್ವಾರ್‌ ಅವರ ಪತ್ನಿ ರಿಂಕು ದುಗ್ಗಾ ಅವರು ಕೂಡಾ 1994ರ ಬ್ಯಾಚಿನ ಐಎಎಸ್‌ ಅಧಿಕಾರಿಯಾಗಿದ್ದಾರೆ.

ಸಾಮಾನ್ಯವಾಗಿ ಐಎಎಸ್‌ ಅಧಿಕಾರಿ ದಂಪತಿಗಳನ್ನು ಒಂದೇ ಪ್ರದೇಶದಲ್ಲಿ ಪೋಸ್ಟಿಂಗ್‌ ಮಾಡಲಾಗುತ್ತದೆ. ಆದರೆ, ಈ ಅಧಿಕಾರಿಗಳಿಬ್ಬರು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದರಿಂದ ಇದೀಗ ಬೇರೆ ಬೇರೆ ರಾಜ್ಯಗಳಲ್ಲಿ ಉದ್ಯೋಗ ಮಾಡಬೇಕಾಗಿ ಬಂದಿದೆ.

Exit mobile version