Site icon Vistara News

Wall collapsed: ದೇಗುಲದ ಗೋಡೆ ಕುಸಿದು 9 ಮಕ್ಕಳ ದಾರುಣ ಸಾವು, ಹಲವರ ಸ್ಥಿತಿ ಗಂಭೀರ

ಭೋಪಾಲ್‌: ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ದೇವಸ್ಥಾನದಲ್ಲಿ ಗೋಡೆ ಕುಸಿದು(Wall collapsed) 9 ಮಕ್ಕಳು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಶಾಹಪುರದ ಹರ್ದೌಲ್ ಬಾಬಾ ದೇವಸ್ಥಾನದಲ್ಲಿ ನಡೆದ ಧಾರ್ಮಿಕ ಸಮಾರಂಭದಲ್ಲಿ ಈ ದಾರುಣ ಘಟನೆ ನಡೆದಿದೆ. ಗಾಯಗೊಂಡ ಮಕ್ಕಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಬಳಿಕ ಸ್ಥಳೀಯರ ನೆರವಿನೊಂದಿಗೆ ಪೊಲೀಸರು ರಕ್ಷಣಾ ಕಾರ್ಯ ನಡೆಸಿದರು. ಗೋಡೆಯ ಕುಸಿತದ ನಂತರ ಅವಶೇಷಗಳನ್ನು ತೆಗೆದುಹಾಕಲು ಕೆಲಸ ಮಾಡುತ್ತಿರುವ ತಂಡ ಚುರುಕಿನಿಂದ ಕಾರ್ಯನಿರ್ಹಿಸುತ್ತಿದೆ. ಮೃತ ಮಕ್ಕಳು 10ರಿಂದ 15 ವರ್ಷದವರಾಗಿದ್ದಾರೆ. ವಿಶೇಷ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ.

ಇಂದೋರ್​​ನಲ್ಲಿ ಕೆಲವು ತಿಂಗಳ ಹಿಂದೆ ಇಂತಹದ್ದೇ ಒಂದು ಘಟನೆ ನಡೆದಿತ್ತು. ಶ್ರೀ ಬೆಳೆಶ್ವರ ಮಹಾದೇವ ಜುಲೇಲಾಲ್​ ದೇವಸ್ಥಾನದಲ್ಲಿ ಮೆಟ್ಟಿಲು ಬಾವಿ ಕುಸಿದ ಅವಘಡದಲ್ಲಿ 35 ಜನ ಮೃತಪಟ್ಟಿದ್ದರು, ಈ ದೇವಸ್ಥಾನದ ಒಳಭಾಗದಲ್ಲಿರುವ ಈ ಮೆಟ್ಟಿಲು ಬಾವಿಯನ್ನು ಸಿಮೆಂಟ್ ಸ್ಲ್ಯಾಬ್​​ನಿಂದ ಮುಚ್ಚಿಡಲಾಗಿತ್ತು. ಮಾ.30ರಂದು ಶ್ರೀರಾಮನವಮಿ ಆಚರಣೆ ಪ್ರಯುಕ್ತ ಇದೇ ಸ್ಲ್ಯಾಬ್​​ ಮೇಲೆ ಕುಳಿತು ಹವನ ನಡೆಸಲಾಗುತ್ತಿತ್ತು. ಅದೇ ವೇಳೆ ಆ ಭಾಗ ಕುಸಿದುಬಿದ್ದಿದೆ ಎಂದು ಹೇಳಲಾಗಿದೆ. ಮೆಟ್ಟಿಲು ಬಾವಿ ಕುಸಿದ ತಕ್ಷಣ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು. ಪ್ರಾರಂಭದಲ್ಲಿ 13 ಮೃತದೇಹಗಳು ಸಿಕ್ಕಿದ್ದವು. ಬಳಿಕ ಈ ಸಾವಿನ ಸಂಖ್ಯೆ 35ಕ್ಕೆ ಏರಿಕೆಯಾಗಿತ್ತು.

ದೇವಸ್ಥಾನದಲ್ಲಿರುವ ಈ ಕಲ್ಯಾಣಿ ಅಥವಾ ಮೆಟ್ಟಿಲು ಬಾವಿಯನ್ನು ಸಿಮೆಂಟ್​ ಸ್ಲ್ಯಾಬ್​​ನಿಂದ ಮುಚ್ಚಲಾಗಿತ್ತು. ಅದಕ್ಕೆ ಕಬ್ಬಿಣದ ಸರಳುಗಳು, ರಾಡ್​​ಗಳ ಬೆಂಬಲಕೊಟ್ಟು ಭದ್ರ ಮಾಡಲಾಗಿತ್ತು. ಆದರೆ ದೇವಸ್ಥಾನ ಸುಮಾರು 60ವರ್ಷ ಹಳೆಯದ್ದು ಎನ್ನಲಾಗಿದೆ. ಅಷ್ಟಕ್ಕೂ ಈ ಮೆಟ್ಟಿಲ ಬಾವಿಗೆ ಮುಚ್ಚುಗೆ ಮಾಡಿದ್ದು ಯಾವಾಗ ಎಂಬ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಶ್ರೀರಾಮನವಮಿ ದಿನ ಅಪಾರಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಇದೇ ಸ್ಲ್ಯಾಬ್​​ ಅನೇಕರು ಕುಳಿತಿದ್ದರು. ಇದರಿಂದ ಭಾರ ತಾಳಲಾರದೆ ಕುಸಿದುಬಿದ್ದಿದೆ. ಬಾವಿಗೆ ಬಿದ್ದವರು ಒಂದಷ್ಟು ಜನರಾದರೆ, ಕೆಲವರು ಆ ಕಬ್ಬಿಣದ ಸರಳು ತಾಗಿ, ಗಾಯಗೊಂಡು ಮೃತಪಟ್ಟಿದ್ದಾಗಿ ವರದಿಯಾಗಿದೆ.

ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​​ ಅವರು ಘಟನೆ ಬಗ್ಗೆ ತನಿಖೆಗೆ ಆದೇಶಿಸಿದ್ದರು. ಈ ಬಾವಿಯಿದ್ದಂತೆ ಅಲ್ಲಿ ದೇವಸ್ಥಾನ ಕಟ್ಟಿದ್ದು ಹೇಗೆ ಎಂದೂ ಪ್ರಶ್ನಿಸಿದ್ದಾರೆ. ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಮತ್ತು ಗಾಯಾಳುಗಳ ಕುಟುಂಬಕ್ಕೆ 50 ಸಾವಿರ ರೂ. ಘೋಷಿಸಿದ್ದರು.

ಇದನ್ನೂ ಓದಿ: Duniya Vijay: ವಿಜಯ್ ನಟಿಸಿ, ನಿರ್ದೇಶಿಸಿರುವ ‘ಭೀಮ ಚಿತ್ರದ  ಟ್ರೈಲರ್‌ ಔಟ್‌; ಕ್ರೇಜ್‌ ಹೆಚ್ಚಿಸಿದ ʻಸಲಗʼ!

Exit mobile version