ಗಾಂಧಿನಗರ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಕೈಗೊಂಡ ಚಂದ್ರಯಾನ 3 ಮಿಷನ್ (Chandrayaan 3 Mission) ಯಶಸ್ವಿಯಾಗಿದ್ದು, ಇದು ವಿಶ್ವವೇ ಭಾರತದ ಕಡೆ ನೋಡುವಂತಾಗಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಮಿಷನ್ ಸಾಫ್ಟ್ ಲ್ಯಾಂಡ್ ಮಾಡುವ ಮೂಲಕ ಜಗತ್ತೇ ಇಸ್ರೋ ಕಡೆ ತಿರುಗಿ ನೋಡುವಂತೆ ಮಾಡಿದೆ. ಇದರ ಬೆನ್ನಲ್ಲೇ, ಇಸ್ರೋ ಮುಖ್ಯಸ್ಥ ಎಸ್. ಸೋಮನಾಥ್ (S Somanath) ಅವರು ಮತ್ತೊಂದು ಮಹತ್ವದ ಘೋಷಣೆ ಮಾಡಿದ್ದಾರೆ. “ಚಂದ್ರನ ಅಂಗಳದಲ್ಲಿ ಭಾರತೀಯನೊಬ್ಬನನ್ನು ಇಳಿಸುವತನಕ ಚಂದ್ರಯಾನ ಮಿಷನ್ ಸರಣಿಯನ್ನು (Chandrayaan Series) ಮುಂದುವರಿಸಲಾಗುವುದು” ಎಂದು ಹೇಳಿದ್ದಾರೆ.
ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಜತೆಗೆ ಎಸ್. ಸೋಮನಾಥ್ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. “ಚಂದ್ರಯಾನ 3 ಮಿಷನ್ ಅದ್ಭುತ ಯಶಸ್ಸು ಕಂಡಿದೆ. ಮಿಷನ್ ಕಳುಹಿಸಿದ ದತ್ತಾಂಶ ಆಧರಿಸಿ ವೈಜ್ಞಾನಿಕ ಪ್ರಕಟಣೆಯನ್ನು ಆರಂಭಿಸಲಾಗಿದೆ. ನಾವೀಗ, ಚಂದ್ರನ ಅಂಗಳದಲ್ಲಿ ಭಾರತೀಯನೊಬ್ಬನನ್ನು ಇಳಿಸುವತನಕ ಚಂದ್ರಯಾನ ಸರಣಿಯ ಮಿಷನ್‌ಅನ್ನು ಮುಂದುವರಿಸಲು ತೀರ್ಮಾನಿಸಿದ್ದೇವೆ” ಎಂದು ಮಾಹಿತಿ ನೀಡಿದರು.
“ಚಂದ್ರನ ಅಂಗಳಕ್ಕೆ ಮನುಷ್ಯನನ್ನು ಕಳುಹಿಸುವ ಮುನ್ನ ಭಾರಿ ಪ್ರಮಾಣದ ತಯಾರಿ ಬೇಕಾಗುತ್ತದೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗುತ್ತದೆ. ಮುಂದಿನ ಮಿಷನ್‌ನಲ್ಲಿ ನಾವು ಇದೆಲ್ಲವನ್ನೂ ಸಾಧಿಸುವ ಹಾಗೂ ಆ ಮೂಲಕ ಮಾನವಸಹಿತ ಚಂದ್ರಯಾನ ಕೈಗೊಳ್ಳುವ ವಿಶ್ವಾಸದಲ್ಲಿದ್ದೇವೆ” ಎಂದು ತಿಳಿಸಿದರು. ಇದೇ ವೇಳೆ, ಗಗನಯಾನದ ಸಿದ್ಧತೆಯೂ ಮುಂದುವರಿದಿದೆ ಎಂದು ಕೂಡ ಹೇಳಿದರು.
#WATCH | On the development of the Carbon-Carbon (C-C) rocket engine nozzle, ISRO chairman S Somanath says, "…It is a technology that we wanted to develop for many years. It has been eluding us, going away from us. We have now mastered it, built it and tested it successfully.… pic.twitter.com/14MAjuDvOJ
— ANI (@ANI) April 17, 2024
2023ರ ಜುಲೈ 14ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ನಿಲ್ದಾಣದಿಂದ LVM3 ರಾಕೆಟ್‌ನ ಮೂಲಕ ಉಡಾವಣೆಗೊಂಡ ಚಂದ್ರಯಾನ-3, ಒಂದು ತಿಂಗಳ ಕಾಲ ಬಾಹ್ಯಾಕಾಶ ಹಾರಾಟದ ನಂತರ ಆಗಸ್ಟ್ 23ರಂದು ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಇಳಿಯಿತು. ಆ ಮೂಲಕ ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡ್ ಆದ ಜಗತ್ತಿನ ಮೊದಲ ಮಿಷನ್ ಎಂಬ ಖ್ಯಾತಿಗೆ ಭಾಜನವಾಯಿತು. ಇದರೊಂದಿಗೆ ಇಸ್ರೋ ಮೈಲುಗಲ್ಲು ಸ್ಥಾಪಿಸಿದೆ.
ಚಂದ್ರಯಾನ 3 ಮಿಷನ್ ಲ್ಯಾಂಡ್ ಆದ ಪ್ರದೇಶವನ್ನು ಶಿವಶಕ್ತಿ ಎಂಬುದಾಗಿ ಕರೆಯಲು ಅಂತಾರಾಷ್ಟ್ರೀಯ ಖಗೋಳ ಒಕ್ಕೂಟವು ಅನುಮತಿ ಸೂಚಿಸಿದೆ. ಇದರೊಂದಿಗೆ ಬಾಹ್ಯಾಕಾಶ ನೌಕೆ ಇಳಿದ ಪ್ರದೇಶವೀಗ ಅಧಿಕೃತವಾಗಿ ಶಿವಶಕ್ತಿ ಪಾಯಿಂಟ್ ಎನಿಸಿದೆ. ಚಂದ್ರಯಾನ 3 ಯಶಸ್ಸಿನ ಬಳಿಕ ಮಿಷನ್ ಲ್ಯಾಂಡ್ ಆದ ಪ್ರದೇಶಕ್ಕೆ ಶಿವಶಕ್ತಿ ಪಾಯಿಂಟ್ ಎಂಬುದಾಗಿ ಕರೆಯೋಣ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಬೆಂಗಳೂರಿನ ಪೀಣ್ಯದಲ್ಲಿರುವ ಇಸ್ರೋ (ISRO) ಕಮಾಂಡ್ ಪಾಯಿಂಟ್ ಪೀಣ್ಯದ ಇಸ್ಟಾಕ್‌ನಲ್ಲಿ ಇಸ್ರೋ ವಿಜ್ಞಾನಿಗಳನ್ನು ಉದ್ದೇಶಿಸಿ ಅವರು ಮಾತನಾಡಿದ್ದರು. ವಿಕ್ರಮ್ ಲ್ಯಾಂಡರ್ ಹಾಗೂ ಪ್ರಗ್ಯಾನ್ ರೋವರ್‌ಗಳನ್ನು ಶಿವ ಮತ್ತು ಶಕ್ತಿಗೆ ಹೋಲಿಸಿದ್ದರು. ವಿಜ್ಞಾನ ಮತ್ತು ತಂತ್ರಜ್ಞಾನದ ಬಲದಿಂದ ಈ ಸಾಧನೆ ಸಾಧ್ಯವಾಗಿದೆ. ವಿಕ್ರಮ್‌ನ ವಿಶ್ವಾಸದ ಜತೆಗೆ ಪ್ರಗ್ಯಾನ್‌ನ ಪರಾಕ್ರಮ ಇದೆ. ಹೀಗಾಗಿ ವಿಕ್ರಮ್ ಲ್ಯಾಂಡರ್ ಇಳಿದ ಜಾಗವನ್ನು ಶಿವಶಕ್ತಿ ಪಾಯಿಂಟ್ ಎಂದು ಕರೆಯೋಣ ಎಂದಿದ್ದರು.
ಇದನ್ನೂ ಓದಿ: Chandrayaan-3 mission: ಇಸ್ರೋದ ಚಂದ್ರಯಾನ-3 ಟೀಮ್‌ಗೆ ಅಮೆರಿಕದ ಪ್ರಶಸ್ತಿ: ʼಸ್ಫೂರ್ತಿʼ ಎಂದ ಸ್ಪೇಸ್ ಫೌಂಡೇಶನ್