ನವದೆಹಲಿ: ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ (HD Deve Gowda) ಅವರು ರಾಜ್ಯಸಭೆಯಲ್ಲಿ ಮಾತನಾಡಲಿದ್ದು, “ಮಲ್ಲಿಕಾರ್ಜುನ ಖರ್ಗೆ ಅವರೇ ಕರ್ನಾಟಕದ ಮುಖ್ಯಮಂತ್ರಿಯಾಗಬೇಕು ಎಂಬುದು ನನ್ನ ಒತ್ತಾಯವಾಗಿತ್ತು” ಎಂದು ಹೇಳಿದರು. “ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ (Congress JDS Government) ರಚನೆ ಸಂದರ್ಭದಲ್ಲಿ, ಎಚ್.ಡಿ. ಕುಮಾರಸ್ವಾಮಿ (HD Kumaraswamy) ಬೇಡ, ಮಲ್ಲಿಕಾರ್ಜುನ ಖರ್ಗೆ ಅವರೇ ಮುಖ್ಯಮಂತ್ರಿಯಾಗಬೇಕು ಎಂಬುದಾಗಿ ನಾನು ಆಗ್ರಹಿಸಿದೆ. ಆದರೆ, ಕಾಂಗ್ರೆಸ್ ಹೈಕಮಾಂಡ್ (Congress High Command) ಇದಕ್ಕೆ ಅವಕಾಶ ಕೊಡಲಿಲ್ಲ” ಎಂದು ಹೇಳಿದರು.
“ಮಲ್ಲಿಕಾರ್ಜುನ ಖರ್ಗೆ ಅವರು ನಿಷ್ಠಾವಂತ ವ್ಯಕ್ತಿ. ಅವರು ಹಿರಿಯರು ಕೂಡ ಆಗಿದ್ದರು. ಆದರೆ, ಕಾಂಗ್ರೆಸ್ ಹೈಕಮಾಂಡ್ ಅವರನ್ನು ಸಿಎಂ ಆಗಲು ಬಿಡಲಿಲ್ಲ. ಇನ್ನು, ಸರ್ಕಾರ ರಚನೆಯಾದ 13 ತಿಂಗಳಿಗೇ ಎಚ್.ಡಿ.ಕುಮಾರಸ್ವಾಮಿ ಸರ್ಕಾರ ಪತನವಾಯಿತು. ಸರ್ಕಾರ ರಚನೆಯಾಗಲು ಯಾರು ಕಾರಣ ಗೊತ್ತಾ? ಇದೇ ಕಾಂಗ್ರೆಸ್ ನಾಯಕರು ಮೈತ್ರಿ ಸರ್ಕಾರವನ್ನು ಕೆಡವಿದರು” ಎಂದು ತಿಳಿಸಿದರು.
ಖರ್ಗೆ ಪ್ರಧಾನಿಯಾಗಲು ಕಾಂಗ್ರೆಸ್ ಒಪ್ಪುವುದೇ?
“ಕಾಂಗ್ರೆಸ್ ಪಕ್ಷವು ಎಂತಹ ಮನಸ್ಥಿತಿ ಹೊಂದಿದೆ ಎಂಬುದು ನನಗೆ ಮಾತ್ರ ಗೊತ್ತು. ಮುಂದೊಂದು ದಿನ, ಮಲ್ಲಿಕಾರ್ಜುನ ಖರ್ಗೆ ಅವರೇ ಪ್ರಧಾನಿಯಾಗಬೇಕು ಎಂದು ಯಾರಾದರೂ ಪ್ರಸ್ತಾಪಿಸಿದರೆ, ಅದಕ್ಕೆ ಹೈಕಮಾಂಡ್ ಒಪ್ಪುವುದೇ? ಖಂಡಿತವಾಗಿಯೂ ಕಾಂಗ್ರೆಸ್ ಇದಕ್ಕೆ ಒಪ್ಪುವುದಿಲ್ಲ. ಏಕೆಂದರೆ ಕಾಂಗ್ರೆಸ್ ಎಂತಹ ಪಕ್ಷ ಎಂಬುದು ನನಗೆ ಗೊತ್ತಿದೆ. ನಾನು ಜೀವನದಲ್ಲಿ ಪಕ್ಷದಿಂದ ಪಕ್ಷಕ್ಕೆ ಜಿಗಿದವನಲ್ಲ. ಆದರೆ, ಕಾಂಗ್ರೆಸ್ ನಮ್ಮ ಪಕ್ಷವನ್ನು ಛಿದ್ರಗೊಳಿಸಲು, ನಿರ್ನಾಮ ಮಾಡಲು ಹೊರಟಿತು. ಆಗ ನಾನು ಮೈತ್ರಿ ಮಾಡಿಕೊಳ್ಳಲು ಮುಂದಾದೆ” ಎಂದು ತಿಳಿಸಿದರು.
ಇದನ್ನೂ ಓದಿ: ದೇವೇಗೌಡರಿಗೆ ಈ ವಯಸ್ಸಲ್ಲಿ ಬಿಜೆಪಿ, ಮೋದಿ ಸಹವಾಸ ಏಕೆ ಬೇಕಿತ್ತು? ರಾಜ್ಯಸಭೆಯಲ್ಲಿ ಖರ್ಗೆ ಪ್ರಶ್ನೆ
ಮನಮೋಹನ್ ಸಿಂಗ್ ಅತ್ತರು
“ದೇಶವನ್ನು 10 ವರ್ಷ ಆಳಿದ ಡಾ. ಮನಮೋಹನ್ ಸಿಂಗ್ ಅವರು ಅತ್ತರು. ಅವರು ಅತ್ಯಂತ ಪ್ರಾಮಾಣಿಕ ವ್ಯಕ್ತಿಯಾಗಿದ್ದಾರೆ. ಅವರು ದೇಶವನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಿದವರು. ಅಂತಹ ನಿಷ್ಠಾವಂತ ವ್ಯಕ್ತಿಯೇ ಒಂದು ದಿನ ಅತ್ತುಬಿಟ್ಟರು. ಲೋಕಸಭೆಯಲ್ಲಿ 2ಜಿ ತರಂಗ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚರ್ಚೆಯಾದಾಗ, ದುಃಖ ತಾಳದ ಮನಮೋಹನ್ ಸಿಂಗ್ ಅತ್ತರು” ಎಂದು ದೇವೇಗೌಡರು ಸ್ಮರಿಸಿದರು.
ಮೋದಿ ಜತೆ ಉತ್ತಮ ಬಾಂಧವ್ಯ
“ಪ್ರಧಾನಿ ನರೇಂದ್ರ ಮೋದಿ ಅವರ ಜತೆ ನನ್ನದು ಉತ್ತಮ ಬಾಂಧವ್ಯ ಇದೆ. ಅವರು ನನ್ನನ್ನು ಗೌರವದಿಂದ ಕಾಣುತ್ತಾರೆ. ಆದರೆ, ಒಂದು ದಿನವೂ ಮೋದಿ ಅವರ ಬಳಿ ವೈಯಕ್ತಿಕ ಕೆಲಸಕ್ಕಾಗಿ ಹೋಗಿಲ್ಲ” ಎಂದು ತಿಳಿಸಿದರು. “ಪ್ರಜಾಪ್ರಭುತ್ವ ನಶಿಸಿ ಹೋಗುತ್ತದೆ ಎಂದು ದೇಶದಲ್ಲಿ ಆರೋಪಿಸುವವರು ಇದ್ದಾರೆ. ಆದರೆ, ನಾನು ಹೇಳುತ್ತಿದ್ದೇನೆ. ಭಾರತದ ಪ್ರಜಾಪ್ರಭುತ್ವಕ್ಕೆ ಏನೂ ಆಗುವುದಿಲ್ಲ. ಎಂದಿಗೂ ನಿರಂಕುಶ ಪ್ರಭುತ್ವ ಜಾರಿಯಾಗುವುದಿಲ್ಲ. ಏಕೆಂದರೆ, ಪ್ರಜಾಪ್ರಭುತ್ವವು ಜನರ ಮನಸ್ಸಿನಲ್ಲಿ ನೆಲೆಯೂರಿದೆ” ಎಂದು ಹೇಳಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ