ಡಿಸ್ಪುರ: ಅಸ್ಸಾಂನಲ್ಲಿ ಇತ್ತೀಚೆಗೆ ನಡೆದ ಮೂವರ ಕೊಲೆ ಪ್ರಕರಣವೀಗ (Triple Murder Case) ಹಲವು ಸ್ವರೂಪಗಳನ್ನು ಪಡೆದಿದೆ. ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ಹಿಂದೂ ಪತ್ನಿ ಹಾಗೂ ಆಕೆಯ ತಂದೆ-ತಾಯಿಯನ್ನು ಕೊಂದಿರುವ ಪ್ರಕರಣವು ಲವ್ ಜಿಹಾದ್ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಕರೆದಿರುವ ಬೆನ್ನಲ್ಲೇ, ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷ ಭೂಪೇನ್ ಬೋರಾ ಅವರು ಲವ್ ಜಿಹಾದ್‌ಅನ್ನು (Love Jihad) ಭಗವಾನ್ ಕೃಷ್ಣ ಹಾಗೂ ರುಕ್ಮಿಣಿ ಮದುವೆ ಜತೆ ಹೋಲಿಕೆ ಮಾಡಿದ್ದಾರೆ. ಹಾಗಾಗಿ, ಭೂಪೇನ್ ಬೋರಾ ಅವರಿಗೆ ಹಿಮಂತ ಬಿಸ್ವಾ ಶರ್ಮಾ ಖಡಕ್ ಎಚ್ಚರಿಕೆ ನೀಡಿದ್ದಾರೆ.
“ಕೃಷ್ಣ ಹಾಗೂ ರುಕ್ಮಿಣಿ ಅವರ ಪ್ರೇಮ ಕತೆಯನ್ನು ಭೂಪೇನ್ ಬೋರಾ ಅವರು ಲವ್ ಜಿಹಾದ್‌ಗೆ ಹೋಲಿಸಿರುವುದು ಖಂಡನೀಯವಾಗಿದೆ. ಎಲ್ಲ ಸನಾತನಿಗಳು ಭೂಪೇನ್ ಬೋರಾ ಅವರ ವಿರುದ್ಧ ಕೇಸ್ ದಾಖಲಿಸಿದರೆ, ನಮ್ಮ ಸರ್ಕಾರವು ಅವರ ವಿರುದ್ಧ ಕ್ರಮ ತೆಗೆದುಕೊಳ್ಳದೆ ಇರಲು ಸಾಧ್ಯವಿಲ್ಲ. ಭೂಪೇನ್ ಬೋರಾ ಹೇಳಿಕೆ ಖಂಡಿಸಿ ಯಾರಾದರೂ ದೂರು ನೀಡಿದರೆ, ಪೊಲೀಸರು ಅವರನ್ನು ಬಂಧಿಸುವುದು ನಿಶ್ಚಿತ” ಎಂದು ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
“ಲವ್ ಜಿಹಾದ್ ಎಂದರೆ, ಇಸ್ಲಾಂ ಧರ್ಮದ ಯುವಕನು ಹಿಂದು ಧರ್ಮದ ಯುವತಿಯನ್ನು ಮದುವೆಯಾಗಿ, ಆಕೆಯು ಇಸ್ಲಾಂ ಧರ್ಮಕ್ಕೆ ಮತಾಂತರವಾಗು ಎಂದು ಒತ್ತಾಯಿಸುವುದೇ ಆಗಿದೆ. ಆದರೆ, ಕೃಷ್ಣನು ನಿನ್ನ ಧರ್ಮ ಬದಲಾಯಿಸಿಕೊ ಎಂದು ರುಕ್ಮಿಣಿಗೆ ಎಂದೂ ಒತ್ತಾಯ ಮಾಡಿರಲಿಲ್ಲ” ಎಂದು ಟಾಂಗ್ ನೀಡಿದ್ದಾರೆ.
ಭೂಪೇನ್ ಬೋರಾ ಹೇಳಿದ್ದೇನು?
“ಭಾರತದ ಪ್ರಾಚೀನ ಗ್ರಂಥಗಳಲ್ಲಿ ಮದುವೆ ಕುರಿತು ಹಲವು ವ್ಯಾಖ್ಯಾನ, ಉದಾಹರಣೆಗಳಿವೆ. ಕೃಷ್ಣನು ರುಕ್ಮಿಣಿಯನ್ನು ಓಡಿಸಿಕೊಂಡು ಹೋಗಿರುವ ಉಲ್ಲೇಖವೂ ಇದೆ. ಆದರೆ, ಇಂದಿನ ಕಾಲದಲ್ಲಿ ಬೇರೆ ಬೇರೆ ಧರ್ಮದ ಅಥವಾ ಬೇರೆ ಸಮುದಾಯಗಳ ಯುವಕ-ಯುವತಿ ಮದುವೆಯಾಗುವುದನ್ನು ಹಿಮಂತ ಬಿಸ್ವಾ ಶರ್ಮಾ ಅವರು ಲವ್ ಜಿಹಾದ್‌ಗೆ ಹೋಲಿಸುವುದು ಸರಿಯಲ್ಲ” ಎಂದು ಭೂಪೇನ್ ಬೋರಾ ಹೇಳಿದ್ದರು.
ಇದನ್ನೂ ಓದಿ: Pramod Mutalik : ಆನ್‌ಲೈನ್ ಮದುವೆ ನೋಂದಣಿಯಿಂದ ಲವ್ ಜಿಹಾದ್ ಹೆಚ್ಚಳ; ಮುತಾಲಿಕ್ ತೀವ್ರ ವಿರೋಧ
ಏನಿದು ಪ್ರಕರಣ?
ಕೆಲ ದಿನಗಳ ಹಿಂದೆ ಗೋಲಘಾಟ್ ಪಟ್ಟಣದಲ್ಲಿ ನಾಜಿಬುರ್ ರೆಹಮಾನ್ ಬೋರಾ (25) ಎಂಬ ಮುಸ್ಲಿಂ ವ್ಯಕ್ತಿಯು ತನ್ನ ಪತ್ನಿ ಸಂಘಮಿತ್ರ ಘೋಷ್ (24), ಆಕೆಯ ಪೋಷಕರಾದ ಸಂಜೀವ್ ಘೋಷ್ ಹಾಗೂ ಜುನು ಘೋಷ್ ಎಂಬುವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಬಳಿಕ ಆತ ಪೊಲೀಸರಿಗೆ ಶರಣಾಗಿದ್ದಾನೆ. ಸಂಘಮಿತ್ರ ಘೋಷ್ ಹಿಂದು ಧರ್ಮದವರಾದ ಕಾರಣ ಲವ್ ಜಿಹಾದ್ ಆರೋಪಗಳು ಕೇಳಿಬಂದಿವೆ.