ಪಣಜಿ: ಗೋವಾದಲ್ಲಿ ಹರಿಯಾಣ ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಅವರು ಅನುಮಾನಾಸ್ಪದವಾಗಿ ಸಾವಿಗೀಡಾದ ಪ್ರಕರಣದವು (Sonali Phogat Death) ದಿನಕ್ಕೊಂದು ತಿರುವು ಪಡೆಯುತ್ತಿದೆ. “ಸೋನಾಲಿ ಫೋಗಟ್ ಸಾವಿಗೆ ಅವರ ಪಿಎ ಸುಧೀರ್ ಸಂಗ್ವಾನ್ ಹಾಗೂ ಬಾಡಿಗಾರ್ಡ್ ಸುಖವಿಂದರ್ ವಾಸಿ ಸಂಚು ರೂಪಿಸಿದ್ದಾರೆ. ಹೃದಯಾಘಾತವಲ್ಲ, ಅವರನ್ನು ಹತ್ಯೆ ಮಾಡಲಾಗಿದೆ” ಎಂದು ಸೋನಾಲಿ ಫೋಗಟ್ ಅವರ ಸಂಬಂಧಿ ಅಮನ್ ಪುನಿಯಾ ಆರೋಪಿಸಿದ್ದಾರೆ. ಇದರ ಬೆನ್ನಲ್ಲೇ ಗೋವಾ ಪೊಲೀಸರು ನೀಡಿದ ಮಾಹಿತಿಯು ಸಂಚಲನ ಮೂಡಿಸಿದೆ.
“ಪಾರ್ಟಿ ಮಾಡುವ ವೇಳೆ ಸೋನಾಲಿ ಫೋಗಟ್ ಅವರಿಗೆ ಡ್ರಗ್ಸ್ ನೀಡಲಾಗಿದೆ. ಇದರ ಓವರ್‌ಡೋಸ್‌ನಿಂದಾಗಿ ಅವರು ಮೃತಪಟ್ಟಿರುವ ಸಾಧ್ಯತೆ ಇದೆ. ಮರಣೋತ್ತರ ಪರೀಕ್ಷೆ ವರದಿ ಪ್ರಕಾರ ಅವರ ಮೈಮೇಲೆ ಗಾಯಗಳಿರುವುದು ತಿಳಿದುಬಂದ ಕಾರಣ ಹೆಚ್ಚಿನ ತನಿಖೆ ನಡೆಸಿದ ವೇಳೆ ಇದೆಲ್ಲ ಬಯಲಾಗಿದೆ” ಎಂದು ಗೋವಾ ಐಜಿಪಿ ಓಂವೀರ್ ಸಿಂಗ್ ಬಿಷ್ಣೋಯಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
“ಸಾವಿಗೀಡಾಗುವ ದಿನದ ಬೆಳಗಿನ ಜಾವ ೪.೩೦ರ ಸುಮಾರಿಗೆ ಅವರು ನಿಯಂತ್ರಣದಲ್ಲಿರಲಿಲ್ಲ. ಅವರಿಗೆ ಡ್ರಗ್ಸ್ ಹಾಗೂ ನಶೆ ಬರುವ ಕೆಮಿಕಲ್ ನೀಡಿದ ಕಾರಣ ನಿಯಂತ್ರಣ ತಪ್ಪಿದ್ದರು. ಆರೋಪಿಯು ಸೋನಾಲಿ ಅವರನ್ನು ಶೌಚಾಲಯಕ್ಕೆ ಕರೆದುಕೊಂಡು ಹೋಗಿದ್ದಾನೆ. ಎರಡು ಗಂಟೆಯವರೆಗೆ ಏನೇನು ನಡೆದಿದೆ ಎಂಬುದು ತಿಳಿದುಬಂದಿಲ್ಲ. ವಿಧಿವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ (ಎಫ್‌ಎಸ್‌ಎಲ್) ಹೆಚ್ಚಿನ ತನಿಖೆ ನಡೆಸಲಿದ್ದಾರೆ” ಎಂದು ಮಾಹಿತಿ ನೀಡಿದ್ದಾರೆ.
ತಪ್ಪೊಪ್ಪಿಕೊಂಡ ಆರೋಪಿಗಳು
ಸೋನಾಲಿ ಫೋಗಟ್ ತಂಗಿದ್ದ ಹೋಟೆಲ್‌ನಲ್ಲಿರುವ ಕ್ಲಬ್‌ನಲ್ಲಿ ಪಾರ್ಟಿ ಮಾಡುವ ವೇಳೆ ಫೋಗಟ್ ಅವರಿಗೆ ಪಾನೀಯದಲ್ಲಿ ಮತ್ತು ಬರುವ ಕೆಮಿಕಲ್ ಮಿಶ್ರಣ ಮಾಡಿ, ಬಲವಂತವಾಗಿ ನೀಡಿರುವುದನ್ನು ಪಿಎ ಹಾಗೂ ಬಾಡಿಗಾರ್ಡ್ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸಿಸಿಟಿವಿ ವಿಡಿಯೊಗಳನ್ನು ಅವಲೋಕಿಸಿ ಪೊಲೀಸರು ಆರೋಪಿಗಳ ವಿಚಾರಣೆ ಮಾಡಿದ್ದು, ಈ ವೇಳೆ ತಪ್ಪೊಪ್ಪಿಕೊಂಡಿದ್ದಾರೆ ಎಂಬುದಾಗಿ ಹೇಳಿದ್ದಾರೆ.
ಅತ್ಯಾಚಾರಗೈದು ಕೊಲೆ?
ಸೋನಾಲಿ ಫೋಗಟ್ ತಂಗಿದ ಕೋಣೆಯಲ್ಲಿ ಬೇರೆ ಯಾರೋ ಇದ್ದರೂ ಎಂಬ ಕುರಿತು ಪೊಲೀಸರು ಮಾಹಿತಿ ನೀಡಿರುವ ಹಾಗೂ ಸೋನಾಲಿ ಅವರ ಸಂಬಂಧಿಕರು ಮಾಡಿರುವ ಆರೋಪಗಳನ್ನು ನೋಡಿದರೆ, ಬಿಜೆಪಿ ನಾಯಕಿಯ ಮೇಲೆ ಅತ್ಯಾಚಾರ ನಡೆದಿದೆ ಎಂಬ ಶಂಕೆಯೂ ವ್ಯಕ್ತವಾಗಿದೆ. ಡ್ರಗ್ಸ್ ಹಾಗೂ ನಶೆ ಬರುವ ಕೆಮಿಕಲ್ ನೀಡಿದ ಕಾರಣ ಅರೆಪ್ರಜ್ಞಾವಸ್ಥೆಯಲ್ಲಿರುವ ಫೋಗಟ್ ಮೇಲೆ ಅತ್ಯಾಚಾರ ನಡೆದಿದೆ. ಬಳಿಕ ಹಲ್ಲೆ ಮಾಡಿ ಹತ್ಯೆಗೈಯಲಾಗಿದೆ ಎಂದು ಅನುಮಾನಿಸಲಾಗಿದೆ.
ಇದನ್ನೂ ಓದಿ | Sonali Phogat Death | ಮರಣೋತ್ತರ ವರದಿ ಬೆನ್ನಲ್ಲೇ ಸೋನಾಲಿ ಫೋಗಟ್ ಅವರ ಇಬ್ಬರು ಆಪ್ತರ ಬಂಧನ