Site icon Vistara News

Watch Video: ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ವೇದಿಕೆಯಲ್ಲಿ ಮೋದಿ-ಪವಾರ್ ಮಾತುಕತೆ!

PM Narendra Modi and Sharad Pawar

ನವದೆಹಲಿ: ಪುಣೆಯಲ್ಲಿ (Pune) ನಡೆದ ಲೋಕಮಾನ್ಯ ತಿಲಕ್ ನ್ಯಾಷನಲ್ (Lokmanya Tilak National Award) ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಎನ್‌ಸಿಪಿ ನಾಯಕ ಶರದ್ ಪವಾರ್ (Sharad Pawar) ಅವರೊಂದಿಗೆ ವೇದಿಕೆಯನ್ನು ಹಂಚಿಕೊಂಡರು. ನಾಗರಿಕರಲ್ಲಿ ದೇಶಭಕ್ತಿಯನ್ನು ಜಾಗೃತಗೊಳಿಸುವುದು ಮತ್ತು ಪರಮೋಚ್ಛ ನಾಯಕತ್ವವಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿಯನ್ನು ಈ ವೇಳೆ ಪ್ರದಾನ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಶರದ್ ಪವಾರ್ ಅವರು ಭಾಗವಹಿಸಿದ್ದು, ವಿಶೇಷವಾಗಿತ್ತು.

ಈ ಸಮಾರಂಭದಲ್ಲಿ ಭಾಗವಹಿಸಿದಂತೆ ಇಂಡಿಯಾ ಕೂಟ(ಪ್ರತಿಪಕ್ಷಗಳ ಕೂಟ)ದ ನಾಯಕರು ಮಾಡಿದ ಮನವಿಗಳಿಗೆ ಶರದ್ ಪವಾರ್ ಅವರೇನೂ ಮಹತ್ವ ನೀಡಿದಂತೆ ಕಾಣಲಿಲ್ಲ. ಬಿಜೆಪಿಯ ವಿರುದ್ಧ ಪ್ರತಿಪಕ್ಷಗಳು ಒಂದಾಗುತ್ತಿರುವ ಹೊತ್ತಿನಲ್ಲಿ ಮೋದಿ ಅವರೊಂದಿಗೆ ವೇದಿಕೆಯನ್ನು ಹಂಚಿಕೊಳ್ಳುವುದು ಸೂಕ್ತವಲ್ಲ. ಸಭೆಯಲ್ಲಿ ಭಾಗವಹಿಸಬಾರದು ಎಂದು ಮನವಿ ಮಾಡುತ್ತಿದ್ದ ಪ್ರತಿಪಕ್ಷಗಳ ಸಂಸದರನ್ನೇನೂ ಪವಾರ್ ಅವರು ಭೇಟಿಯಾಗಲು ಹೋಗಲಿಲ್ಲ

ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಎನ್‌ಸಿಪಿ ನಾಯಕ ಶರದ್ ಪವಾರ್ ಕೆಲ ಹೊತ್ತ ಪರಸ್ಪರ ಮಾತುಕತೆ ನಡೆಸಿದರು. ಈ ಕುರಿತಾದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಲೋಕಮಾನ್ಯ ತಿಲಕ್ ಅವರು ಸ್ವಾತಂತ್ರ್ಯ ಹೋರಾಟದ ದಿಕ್ಕನ್ನೇ ಬದಲಿಸಿದರು. ಬ್ರಿಟಿಷ್‌ರು ತಿಲಕ್ ಅವರನ್ನು ಭಾರತೀಯ ಅಶಾಂತಿಯ ಪಿತಾಮಹ ಎಂದು ಕರೆಯುತ್ತಿದ್ದರು. ಭಾರತದ ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದ ತಿಲಕ್ ಅವರ ಹೆಸರಿನ ಪ್ರಶಸ್ತಿ ಸ್ವೀಕರಿಸುತ್ತಿರುವುದು ಗೌರವವಾಗಿದೆ ಎಂದು ಪಿಎಂ ನರೇಂದ್ರ ಮೋದಿ ಅವರು ಹೇಳಿದರು.

ಈ ಸುದ್ದಿಯನ್ನೂ ಓದಿ: PM Narendra Modi: ಶರದ್ ಪವಾರ್ ಸಮ್ಮುಖದಲ್ಲೇ ತಿಲಕ್ ಪ್ರಶಸ್ತಿ ಸ್ವೀಕರಿಸಿದ ಮೋದಿ; I-N-D-I-A ಮುಖಂಡರು ಸಿಡಿಮಿಡಿ!

ಲೋಕಮಾನ್ಯ ತಿಲಕರ ಪರಂಪರೆಯನ್ನು ಗೌರವಿಸಲು 1983ರಲ್ಲಿ ಈ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು. ಪ್ರತಿ ವರ್ಷ ಆಗಸ್ಟ್ 1 ರಂದು ತಿಲಕರ ಪುಣ್ಯತಿಥಿಯಂದು ಈ ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ. ಮಂಗಳವಾರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆ, ಕೆಲವು ಸಾಮಾಜಿಕ ಸಂಘಟನೆಗಳು ಮತ್ತು ವಿವಿಧ ರಾಜಕೀಯ ಪಕ್ಷಗಳ ಸದಸ್ಯರು ಮೋದಿ ವಿರುದ್ಧ ಜಂಟಿ ಪ್ರತಿಭಟನೆ ನಡೆಸಿದರು. ಪ್ರಮುಖ ಸಾಮಾಜಿಕ ಕಾರ್ಯಕರ್ತ ಬಾಬಾ ಅಧವ್ ನೇತೃತ್ವದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡವರು ಕಪ್ಪು ಬಾವುಟವನ್ನು ಪ್ರದರ್ಶಿಸಿದರು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version