Site icon Vistara News

Water Tank Collapsed: ಭೀಕರ ದುರಂತ; ಇಬ್ಬರು ಸ್ಥಳದಲ್ಲೇ ಸಾವು-12ಮಂದಿಗೆ ಗಂಭೀರ ಗಾಯ

Water tank Collapsed

ಮಥುರಾ: ಉತ್ತರಪ್ರದೇಶದ ಮಥುರಾ(Mathura)ದಲ್ಲಿ ವಾಟರ್‌ ಟ್ಯಾಂಕ್‌ ಕುಸಿದು(Water Tank Collapsed) ಬಿದ್ದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, 12ಕ್ಕೂ ಅಧಿಕ ಜನರಿಗೆ ಗಂಭೀರವಾಗಿ ಗಾಯಗಳಾಗಿವೆ. ಅವಶೇಷದಡಿಯಲ್ಲಿ ಅನೇಕ ಮನೆಗಳು ಸಿಲುಕಿಕೊಂಡಿವೆ. ಯುಪಿ ಆವಾಸ್‌ ವಿಕಾಸ್‌ ಪರಿಷತ್‌ ಅಭಿವೃದ್ಧಿಪಡಿಸಿರುವ ಕೃಷ್ಣ ವಿಹಾರ್‌ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ಹತ್ತಿರ ಮನೆಗಳಿಗೆ ಭೀಕರ ಹಾನಿಯಾಗಿದೆ.

ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. 12 ಮಂದಿಯನ್ನು ಅವಶೇಷದಡಿಯಿಂದ ಹೊರಗೆಳೆದಿದ್ದು, ಅವರ ಸ್ಥಿತಿ ಬಹಳ ಗಂಭೀರವಾಗಿದೆ. ಸ್ಥಳದಲ್ಲಿ ಅಗ್ನಿ ಶಾಮಕ ದಳ, ಪೊಲೀಸರು, ಕಂದಾಯ ಇಲಾಖೆ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ

ಬರೋಬ್ಬರಿ 2.5 ಲಕ್ಷ ಲೀಟರ್‌ ನೀರಿನ ಟ್ಯಾಂಕ್‌ ಕುಸಿದು ಬಿದ್ದಿದ್ದು, ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಭೀತಿ ಇದೆ. NDRF ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರಂಭದಲ್ಲಿ ಅವಶೇಷದಡಿಯಲ್ಲಿ ಸಿಲುಕಿದ್ದ ನಾಲ್ವರನ್ನು ಹೊರತೆಗೆಯಲಾಗಿತ್ತು. ಬಳಿಕ ಈ ಸಂಖ್ಯೆ 12ಕ್ಕೆ ಏರಿಕೆ ಆಗಿತ್ತು. ಆ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ಶೈಲೇಂದ್ರ ಸಿಂಗ್‌ ಹೇಳಿದ್ದಾರೆ.

ಜಿಲ್ಲಾ ಮ್ಯಾಜಿಸ್ಟ್ರೇಟ್ ಸಿಂಗ್ ಮತ್ತು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಶೈಲೇಶ್ ಕುಮಾರ್ ಪಾಂಡೆ ಸೇರಿದಂತೆ ಜಿಲ್ಲೆಯ ಎಲ್ಲಾ ಉನ್ನತ ಅಧಿಕಾರಿಗಳು ಸ್ಥಳದಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಗಳ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಸಂತ್ರಸ್ತ ಕುಟುಂಬಗಳಿಗೆ ಆಹಾರ ಮತ್ತು ವಸತಿ ಸೌಲಭ್ಯ ಕಲ್ಪಿಸಲು ಕಂದಾಯ ಇಲಾಖೆ ಶ್ರಮಿಸುತ್ತಿದೆ.

ಎರಡೂ ವರ್ಷಗಳ ಹಿಂದೆ ನಿರ್ಮಾಣ

2021ರಲ್ಲಿ ಈ ಟ್ಯಾಂಕ್‌ನ ಕಾಮಗಾರಿ ಪೂರ್ಣಗೊಂಡಿತ್ತು ಎಂದು ತಿಳಿಸಿದ ಜಿಲ್ಲಾಧಿಕಾರಿಗಳು, ಗಂಗಾಜಲ ಕುಡಿಯುವ ನೀರಿನ ಯೋಜನೆಯಡಿ 6 ಕೋಟಿ ರೂ. ವೆಚ್ಚದಲ್ಲಿ ಜಲ ನಿಗಮದಿಂದ ಟ್ಯಾಂಕ್‌ ನಿರ್ಮಿಸಲಾಗಿದೆ ಎಂದು ತಿಳಿಸಿದರು. ಕೇವಲ ಮೂರು ವರ್ಷಗಳಲ್ಲಿ ಕಟ್ಟಡ ಕುಸಿತದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಅವರು ಹೇಳಿದರು. ಇನ್ನು ಘಟನಾ ಸ್ಥಳಕ್ಕೆ ಭಾರತೀಯ ಸೇನೆಯ ತಂಡ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ.

ಇದನ್ನೂ ಓದಿ: Birla Opus: ಬಿರ್ಲಾ ಪೇಂಟ್ ಜಾಹೀರಾತು ನಿಮಗೂ ಇಷ್ಟ ಆಗಿರಬೇಕಲ್ಲವೇ? ಇದರ ಸಂದೇಶ ಏನು? ಹಿನ್ನೆಲೆ ಏನು? ಕುತೂಹಲಕರ ಮಾಹಿತಿ

Exit mobile version