Site icon Vistara News

Wayanad Landslide: ವಯನಾಡು ಈಗ ಸಾವಿನ ಮನೆ: ಮೃತರ ಸಂಖ್ಯೆ 240, 160 ಶವ ಪತ್ತೆ, 220 ಜನ ಮಿಸ್ಸಿಂಗ್; ಭೀಕರ ಚಿತ್ರಣ ಇಲ್ಲಿದೆ

Wayanad Landslide

Wayanad landslide death toll reaches 240; 169 dead bodies recovered

ತಿರುವನಂತಪುರಂ: ಕೇರಳದ (Kerala) ವಯನಾಡು ಜಿಲ್ಲೆ ಮೆಪ್ಪಾಡಿ ಪ್ರದೇಶದ ಹಲವು ಗ್ರಾಮಗಳಲ್ಲಿ ಸಂಭವಿಸಿದ ಭೀಕರ ಭೂಕುಸಿತದಿಂದಾಗಿ (Wayanad Landslide) ಮೃತಪಟ್ಟವರ ಸಂಖ್ಯೆ 240ಕ್ಕೆ ತಲುಪಿದೆ. ಇದುವರೆಗೆ 160 ಶವಗಳನ್ನು ಅವಶೇಷಗಳಿಂದ ಹೊರತೆಗೆಯಲಾಗಿದ್ದು, ಈಗಲೂ ಕಾರ್ಯಾಚರಣೆ ಮುಂದುವರಿದಿದೆ. ಅಷ್ಟೇ ಅಲ್ಲ, 220 ಜನ ಇನ್ನೂ ನಾಪತ್ತೆಯಾಗಿರುವ ಕಾರಣ, ಅವರು ನಾಪತ್ತೆಯಾಗಿ ಈಗಾಗಲೇ 48 ಗಂಟೆಯಾಗಿರುವ ಕಾರಣ ಸಾವಿನ ಸಂಖ್ಯೆ ಜಾಸ್ತಿಯಾಗವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಆರೋಗ್ಯ ಕೇಂದ್ರದಲ್ಲಿ ಹೆಣಗಳ ರಾಶಿ

ಕಲ್ಲು, ಮಣ್ಣು ಸೇರಿ ಹಲವು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶವಗಳನ್ನು ಎನ್‌ಡಿಆರ್‌ಎಫ್‌ ಹಾಗೂ ಎಸ್‌ಡಿಆರ್‌ಎಫ್‌ ಸಿಬ್ಬಂದಿಯು ನಿರಂತರ ಕಾರ್ಯಾಚರಣೆ ಮೂಲಕ ಹೊರತೆಗೆಯುತ್ತಿದ್ದಾರೆ. ಮೆಪ್ಪಾಡಿ ಕೌಟುಂಬಿಕ ಆರೋಗ್ಯ ಕೇಂದ್ರ ಹಾಗೂ ನಿಲಂಬುರ್‌ ಸರ್ಕಾರಿ ಆಸ್ಪತ್ರೆಯಲ್ಲಿ ಶವಗಳ ರಾಶಿಯೇ ಬಿದ್ದದ್ದು, ಅವರ ಕುಟುಂಬಸ್ಥರು ಶವಗಳನ್ನು ಪತ್ತೆಹಚ್ಚಲು ಕೂಡ ಕಷ್ಟವಾಗುತ್ತಿದೆ. ಇನ್ನು, ಶವ ಪತ್ತೆಹಚ್ಚುವ ಕುಟುಂಬಸ್ಥರ ಆಕ್ರಂದನವು ಮುಗಿಲು ಮುಟ್ಟಿದೆ. ಮೆಪ್ಪಾಡಿ ಆರೋಗ್ಯ ಕೇಂದ್ರ ಹಾಗೂ ನಿಲಂಬುರ್‌ ಆಸ್ಪತ್ರೆಯಲ್ಲಿ ಈಗ ಎಲ್ಲೆಂದರಲ್ಲಿ ಶವಗಳೇ ಕಣ್ಣಿಗೆ ರಾಚುತ್ತಿವೆ.

ಭರದಿಂದ ಸಾಗುತ್ತಿರುವ ಕಾರ್ಯಾಚರಣೆ

ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ ಜತೆಗೆ ಭಾರತೀಯ ಸೇನೆಯ ಯೋಧರು, ರಾಜ್ಯ ಪೊಲೀಸರು ಕೂಡ ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ. ಭೂಕುಸಿತ ಪೀಡಿತ ಪ್ರದೇಶಗಳಿಂದ ಸೈನಿಕರು ಸುಮಾರು 5,500 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿದ್ದಾರೆ. ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌, ಸೇನೆ, ಪೊಲೀಸರು, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸ್ವಯಂ ಸೇವಕರು ಸೇರಿ ಒಟ್ಟು 600 ಮಂದಿಯು ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ ಎಂದು ತಿಳಿದುಬಂದಿದೆ.

ವಯನಾಡು ದುರಂತವನ್ನು ರಾಷ್ಟ್ರೀಯ ವಿಪತ್ತು ಎಂಬುದಾಗಿ ಘೋಷಿಸಬೇಕು ಎಂದು ರಾಜ್ಯಸಭೆಯಲ್ಲಿ ಕಾಂಗ್ರೆಸ್‌ ಸೇರಿ ಹಲವು ಪ್ರತಿಪಕ್ಷಗಳು ಆರೋಪಿಸಿವೆ. ಇನ್ನು, ಜುಲೈ 23ರಂದೇ ಭೂಕುಸಿತ, ಹವಾಮಾನ್ಯ ವೈಪರೀತ್ಯದ ಕುರಿತು ಕೇರಳ ಸರ್ಕಾರಕ್ಕೆ ಮಾಹಿತಿ ನೀಡಲಾಗಿತ್ತು ಎಂಬುದಾಗಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ತಿಳಿಸಿದ್ದಾರೆ. ಮೃತರ ಕುಟುಂಬಸ್ಥರಿಗೆ ಕೇಂದ್ರ ಸರ್ಕಾರವು ತಲಾ 2 ಲಕ್ಷ ರೂ. ಹಾಗೂ ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರ ಘೋಷಣೆ ಮಾಡಿದೆ. ನೌಕಾಪಡೆ ತಂಡಗಳು, ವಾಯುಪಡೆ ಹೆಲಿಕಾಪ್ಟರ್‌ಗಳನ್ನು ಕೂಡ ರಕ್ಷಣಾ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗುತ್ತಿದೆ.

ಇದನ್ನೂ ಓದಿ: Wayanad Landslide: ಎಲ್ಲೆಂದರಲ್ಲಿ ಹೆಣಗಳ ರಾಶಿ; ಕೊಚ್ಚಿ ಹೋದ ಬದುಕು: ಸ್ಮಶಾನದಂತಾದ ಭೂಲೋಕದ ಸ್ವರ್ಗ ವಯನಾಡು

Exit mobile version