Site icon Vistara News

Wayanad Landslide: ಎಲ್ಲೆಂದರಲ್ಲಿ ಹೆಣಗಳ ರಾಶಿ; ಕೊಚ್ಚಿ ಹೋದ ಬದುಕು: ಸ್ಮಶಾನದಂತಾದ ಭೂಲೋಕದ ಸ್ವರ್ಗ ವಯನಾಡು

Wayanad Landslide

ತಿರುವನಂತಪುರಂ: ಕೇರಳ-ಹೆಸರು ಕೇಳುತ್ತಿದ್ದರೆ ಸಾಕು ಹಚ್ಚ ಹಸಿರಿನ ಗುಡ್ಡ-ಬೆಟ್ಟ, ನದಿಯ ನಿನಾದ, ಪ್ರಕೃತಿ ಸೌಂದರ್ಯದಿಂದ ಕೂಡಿದ ಬಯಲು ಈ ಚಿತ್ರವೇ ಕಣ್ಣ ಮುಂದೆ ಬರುತ್ತದೆ. ಅದರಲ್ಲಿಯೂ ವಯನಾಡು ಎಂದರೆ ಪ್ರವಾಸಿಗರ ಪಾಲಿಗೆ ಸ್ವರ್ಗ ಎನಿಸಿಕೊಂಡಿದೆ. ಆದರೆ ಇದೀಗ ಇಲ್ಲಿನ ಚಿತ್ರಣವೇ ಬದಲಾಗಿದೆ. ಮಂಗಳವಾರ ಬೆಳಗ್ಗೆ ವಯನಾಡು ಜಿಲ್ಲೆಯ ಮೆಪ್ಪಾಡಿ ಗ್ರಾಮ ಪಂಚಾಯತ್‌ ಬಳಿಯ ಗುಡ್ಡಗಾಡು ಪ್ರದೇಶಗಳಲ್ಲಿ ಭಾರಿ ಭೂಕುಸಿತ ಸಂಭವಿಸಿ ಊರನ್ನೇ ಅಪೋಶನ ತೆಗೆದುಕೊಂಡಿದ್ದು, ಇದೀಗ ಎಲ್ಲಡೆ ಆಕ್ರಂದನದ ಕೂಗು ಕೇಳಿ ಬರುತ್ತಿದೆ. ಸ್ವರ್ಗದಂತಿದ್ದ ಭೂಮಿ ಸ್ಮಶಾನದಂತಾಗಿದೆ (Wayanad Landslide).

ಭೂಕುಸಿತ ಬಾಧಿತ ಚುರಲ್‌ಮಲ ಗ್ರಾಮದಲ್ಲಿ ಅಂಗಡಿ, ಮನೆಗಳು ಮಣ್ಣಿನಡಿಯಲ್ಲಿ ಹುದುಗಿದ್ದರೆ ವಾಹನಗಳು ನೆರೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಸದ್ಯ ಈ ಗ್ರಾಮದ ಚಿತ್ರಣ ಗುರುತೇ ಸಿಗದಂತೆ ಬದಲಾಗಿದೆ. ಕೆಲವು ಕಿಲೋಮೀಟರ್ ದೂರದಲ್ಲಿರುವ ಮುಂಡಕೈನಲ್ಲಿ ಉಂಟಾದ ಭೂಕುಸಿತದ ಪರಿಣಾಮವನ್ನು ಚುರಲ್‌ಮಲ ಗ್ರಾಮ ಎದುರಿಸುತ್ತಿದ್ದು, ಮಣ್ಣು ಮತ್ತು ಅವಶೇಷಗಳ ರಾಶಿಯೇ ಇಲ್ಲಿ ಕಂಡು ಬಂದಿದೆ. ಅಲ್ಲದೆ ಎರುವಾಝಂಜಿ ನದಿಯು ತನ್ನ ಪಥವನ್ನು ಬದಲಾಯಿಸಿ ಗ್ರಾಮದ ಮಧ್ಯದ ಮೂಲಕ ಹರಿಯುತ್ತಿದೆ. ಇದರಿಂದ ರಸ್ತೆಗಳೂ ಕೊಚ್ಚಿಕೊಂಡು ಹೋಗಿ ಕಾರ್ಯಾಚರಣೆಗೆ ಇನ್ನಷ್ಟು ತೊಡುಕುಂಟು ಮಾಡಿದೆ.

ಪಥ ಬದಲಿಸಿ ಹರಿದ ನದಿ ಕಾರ್ಮಿಕರ ವಸತಿಗೃಹ ಸೇರಿದಂತೆ ತನ್ನ ಹೊಸ ಹಾದಿಯಲ್ಲಿ ಸಿಕ್ಕ ಎಲ್ಲವನ್ನೂ ಸೆಳೆದುಕೊಂಡು ಹೋಗಿದೆ. ಇದು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಗೂ ಹಾನಿಯುಂಟು ಮಾಡಿದ್ದು, 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಾಪತ್ತೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

“ವಿದ್ಯಾರ್ಥಿಗಳ ಬಗ್ಗೆ ವಿಚಾರಿಸಲು ನಾನು ಪೋಷಕರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇನೆ” ಎಂದು ಪ್ರಾಂಶುಪಾಲರು ಹೇಳಿದ್ದಾರೆ. ಭೂಕುಸಿತದಲ್ಲಿ ಮುಂಡಕೈಗೆ ಸಂಪರ್ಕ ಕಲ್ಪಿಸುವ ಸೇತುವೆ ನಾಶವಾಗಿದ್ದರಿಂದ ಹಲವರು ಚುರಲ್‌ಮಲದಲ್ಲಿ ಗಂಟೆಗಳ ಕಾಲ ಸಿಲುಕಿಕೊಂಡಿದ್ದರು. ಬಳಿಕ ಸೇನಾ ಸಿಬ್ಬಂದಿ ತಾತ್ಕಾಲಿಕ ಸೇತುವೆ ನಿರ್ಮಿಸಿ ಅವರನ್ನು ರಕ್ಷಿಸಿದ್ದಾರೆ.

ಸ್ಥಳೀಯರು ಹೇಳೋದೇನು?

ಈ ಭೂಕುಸಿತದ ಶಾಕ್‌ನಿಂದ ಇನ್ನೂ ಹಲವರು ಹೊರ ಬಂದಿಲ್ಲ. ಸ್ಥಳೀಯರೊಬ್ಬರು ಈ ಬಗ್ಗೆ ಮಾತನಾಡಿ, ʼʼನಾನು ಈ ರೀತಿಯ ದುರಂತವನ್ನು ನಿರೀಕ್ಷಿಸಿರಲೇ ಇಲ್ಲ. ಇದು ಭೂಕುಸಿತ ಪೀಡಿತ ಪ್ರದೇಶವಲ್ಲವಾಗಿದ್ದರಿಂದ ಯಾರಿಗೂ ದುರಂತದ ಬಗ್ಗೆ ಮುನ್ಸೂಚನೆಯೇ ಇರಲಿಲ್ಲ. ಗ್ರಾಮದ ಹಲವು ಮಂದಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಕೆಲವರ ಮೃತದೇಹ ಹಲವು ಕಿ.ಮೀ. ದೂರದ ಮಲಪ್ಪುರಂ ಜಿಲ್ಲೆಯ ನಿಲಂಬೂರ್‌ನಲ್ಲಿ ಪತ್ತೆಯಾಗಿದೆʼʼ ಎಂದು ಭೀಕರತೆಯನ್ನು ಬಿಚ್ಚಿಟ್ಟಿದ್ದಾರೆ.

ಮಂಗಳವಾರದ ಭೀಕರ ಭೂಕುಸಿತಕ್ಕೆ ಮೊದಲು ಭಾನುವಾರ ಮುಂಡಕೈ ಬೆಟ್ಟದ ಮೇಲೆ ಸಣ್ಣ ಭೂಕುಸಿತ ಉಂಟಾಗಿತ್ತು. ಹೀಗಾಗಿ ಸ್ಥಳಾಂತರಗೊಂಡ ಜನರಿಗಾಗಿ ಚುರಲ್‌ಮಲ ಶಾಲೆಯಲ್ಲಿ ಪರಿಹಾರ ಶಿಬಿರವನ್ನು ತೆರೆಯಲಾಗಿತ್ತು. ಸೋಮವಾರದವರೆಗೂ ಮಳೆ ಮುಂದುವರಿದಿದ್ದರಿಂದ ಬಳಿಕ ಅವರನ್ನು ಬೇರೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿತ್ತು. ಇದರಿಂದಾಗಿ ಅವರು ಮಂಗಳವಾರ ಮುಂಜಾನೆ ಸಂಭವಿಸಿದ ದುರಂತದಿಂದ ಪಾರಾಗಿದ್ದಾರೆ.

ಹೀಗೆ ಪಾರಾದವರ ಪೈಕಿ ಒಬ್ಬರಾದ ಡಾಲಿ ಎನ್ನುವ ಮಹಿಳೆ ಈ ಬಗ್ಗೆ ಮಾತನಾಡಿ ಮುಂಡಕೈಯಲ್ಲಿದ್ದ ತಮ್ಮ ಐವರು ಸಂಬಂಧಿಕರು ಜೀವ ಕಳೆದುಕೊಂಡಿದ್ದಾರೆ. ಅಧಿಕಾರಿಗಳು ಮೊದಲೇ ಮುಂಡಕೈಯಿಂದ ಹಲವರನ್ನು ಸ್ಥಳಾಂತರಿಸಿದ್ದರೆ ಸಾವಿನ ಪ್ರಮಾಣ ತಗ್ಗಿಸಬಹುದಿತ್ತು ಎಂದಿದ್ದಾರೆ. ಸದ್ಯ ವಿವಿಧೆಡೆ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ಇನ್ನು ಮುಂಡಕೈ ಗ್ರಾಮದಲ್ಲಿ ಪರಿಸ್ಥಿತಿ ಇನ್ನೂ ಭೀಕರವಾಗಿದ್ದು ಇಲ್ಲಿದ್ದ ಬಹುತೇಕ ಮನೆಗಳು ನಾಶವಾಗಿವೆ. ಸುಮಾರು 400 ಮನೆಗಳ ಪೈಕಿ 30 ಮಾತ್ರ ಉಳಿದಿದೆ. ಉಳಿದವೆಲ್ಲ ಕುಸಿದಿವೆ ಎಂದು ಗ್ರಾಮ ಪಂಚಾಯತ್‌ ಅದಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: Wayanad Landslide Explainer: ಪ್ರಕೃತಿ ಮೇಲೆ ಮಾನವನ ವಿಕೃತಿ; ವಯನಾಡು ಭೂಕುಸಿತಕ್ಕೆ ಇಲ್ಲಿದೆ ಕಾರಣಗಳ ಪಟ್ಟಿ

Exit mobile version