ವಯನಾಡು: ಭಾರಿ ಮಳೆಯಿಂದ ಉಂಟಾದ ಪ್ರವಾಹ ಹಾಗೂ ಭೀಕರ ಭೂಕುಸಿತಕ್ಕೆ ಕೇರಳದ ವಯನಾಡು ಈಗ ಸೂತಕದ ಮನೆಯಂತಾಗಿದೆ. ಭೂಕುಸಿತದಲ್ಲಿ (Wayanad Landslide) ಮೃತರ ಸಂಖ್ಯೆ ಈಗ 300ದಾಟಿದೆ. ಇನ್ನು ನಾಪತ್ತೆಯಾದವರ ಸಂಖ್ಯೆ ಅದೆಷ್ಟೋ.. ಈ ನಡುವೆ ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ (ISRO) ಇಂದು ವಯನಾಡಿನ ಉಪಗ್ರಹ ಚಿತ್ರಗಳನ್ನು ಬಿಡುಗಡೆ ಮಾಡಿದೆ.
ಹೈ-ರೆಸಲ್ಯೂಷನ್ ಉಪಗ್ರಹ ಚಿತ್ರಗಳನ್ನು ರಿಲೀಸ್ ಮಾಡಿರುವ ಇಸ್ರೋ, ಕೇರಳದ ವಯನಾಡಿನಲ್ಲಿ ಸುಮಾರು 300 ಜನರನ್ನು ಬಲಿ ಪಡೆದ ಭೀಕರ ಭೂಕುಸಿತ ಹೇಗಾಯಿತು ಎಂಬುದನ್ನು ತೋರಿಸಿದೆ. ಉಪಗ್ರಹ ಚಿತ್ರಗಳ ಪ್ರಕಾರ ಸಮುದ್ರ ಮಟ್ಟದಿಂದ 1500 ಮೀಟರ್ ಎತ್ತರದಲ್ಲಿರುವ ಗುಡ್ಡದ ಭೂಕುಸಿತದ ಪ್ರಭಾವ ಸುಮಾರು 8 ಕಿಮೀ ವ್ಯಾಪ್ತಿಯಲ್ಲಿ ಸಾಗಿದೆ. ಸುಮಾರು 86,000 ಚ.ಮೀ ಪ್ರದೇಶಕ್ಕೆ ಹಾನಿ ವ್ಯಾಪಿಸಿದೆ. ಇನ್ನು ಈ ಪ್ರದೇಶದಲ್ಲಿ ಭಾರೀ ಪ್ರಮಾಣದ ಹಾನಿ ಸಂಭವಿಸಿದೆ.
ಇನ್ನು ಉಪಗ್ರಹದ ಮಾಹಿತಿಯ ಪ್ರಕಾರ ಈ ಹಿಂದೆ ಭೂ ಕುಸಿತ ಸಂಭವಿಸಿದ ಅದೇ ಸ್ಥಳದಲ್ಲೇ ಭೂ ಕುಸಿತವಾಗಿದೆ ಎಂದು ಹೇಳಲಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಯನಾಡ್ ಭೂಕುಸಿದ ಉಪಗ್ರಹ ಚಿತ್ರವನ್ನು ಬಿಡುಗಡೆಗೊಳಿಸಿ ಹಾನಿಯ ವ್ಯಾಪ್ತಿಯನ್ನು ತಿಳಿಸಿದೆ. ಭಾರೀ ದೊಡ್ಡ ಪ್ರಮಾಣದ ಕುಸಿತ ಎಂಬುದು ಚಿತ್ರಗಳ ಮೂಲಕ ಸ್ಪಷ್ಟವಾಗಿದೆ.
ಭೂಕುಸಿತ ವಿನಾಶವನ್ನು ಸೆರೆಹಿಡಿಯಲು, ಹೈದರಾಬಾದ್‌ನಲ್ಲಿರುವ ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್ (ಎನ್‌ಆರ್‌ಎಸ್‌ಸಿ) ಇಸ್ರೋದ ಸುಧಾರಿತ ಕಾರ್ಟೊಸ್ಯಾಟ್-3 ಆಪ್ಟಿಕಲ್ ಉಪಗ್ರಹ ಮತ್ತು ಮೋಡದ ಹೊದಿಕೆಯನ್ನು ಭೇದಿಸಬಲ್ಲ RISAT ಉಪಗ್ರಹದ ಸಹಾಯದಿಂದ ಇಂ ಚಿತ್ರವನ್ನು ಸೆರೆ ಹಿಡಿದಿದೆ.
ವಯನಾಡಿನ ಹಲವಾರು ಸ್ಥಳಗಳಲ್ಲಿ ರಕ್ಷಣಾ ತಂಡಗಳು ಗುರುವಾರ ರಕ್ಷಣಾ ಕಾರ್ಯವನ್ನು ಪುನರಾರಂಭಿಸಿವೆ. 1600 ಕ್ಕೂ ಹೆಚ್ಚು ಪಡೆಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ಕೇರಳ ಸಚಿವ ಕೆ ರಾಜನ್ ಹೇಳಿದ್ದಾರೆ. ನದಿಗಳಲ್ಲಿ, ಬೆಟ್ಟ ಕುಸಿತದ ಅವಶೇಷಗಳ ಅಡಿಯಲ್ಲಿ ಶವಗಳು ಸಿಗುತ್ತಿವೆ. ಇದರ ಮಧ್ಯೆಯೇ, ಕಾಂಗ್ರೆಸ್ ನಾಯಕರೂ ಆಗಿರುವ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ವಯನಾಡಿಗೆ ಭೇಟಿ ನೀಡಿದ್ದು, ಸಂತ್ರಸ್ತ ಕುಟುಂಬಗಳ ಜತೆ ಅವರು ಮಾತುಕತೆ ನಡೆಸಿದ್ದಾರೆ.
ವಯನಾಡು ಜಿಲ್ಲೆಯ ಮೆಪ್ಪಾಡಿ ಹಾಗೂ ಚೂರಲ್‌ಮಲ ಪ್ರದೇಶಗಳ ಗ್ರಾಮಗಳು ಸಂಪೂರ್ಣವಾಗಿ ಮಸಣದಂತಾಗಿವೆ. ಈ ಪ್ರದೇಶಗಳಿಗೆ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾ ಅವರು ಭೇಟಿ ನೀಡಿದ್ದಾರೆ. ಪ್ರವಾಹದಲ್ಲಿ ಕುಟುಂಬಸ್ಥರನ್ನು ಕಳೆದುಕೊಂಡಿರುವ, ನೀರಿನಲ್ಲಿ ಮನೆಗಳು ಕೊಚ್ಚಿ ಹೋಗಿ ನಿರಾಶ್ರಿತರಾಗಿರುವ ಸಂತ್ರಸ್ತರನ್ನು ಭೇಟಿಯಾದ ಅವರು, ಆತ್ಮಸ್ಥೈರ್ಯ ತುಂಬಿದರು. ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಿ ಹಾನಿಯ ವೀಕ್ಷಣೆ ಮಾಡಿದರು.
ವಯನಾಡು ಜಿಲ್ಲೆಯ ಹಲವೆಡೆ ಸಂಚರಿಸಿದ ಬಳಿಕ ರಾಹುಲ್ ಗಾಂಧಿ ಅವರು ಮಾಧ್ಯಮಗಳ ಜತೆ ಮಾತನಾಡಿದರು. “ವಯನಾಡು ಜನರ ಸ್ಥಿತಿಯನ್ನು ನೋಡಿದಾಗ ನನ್ನ ತಂದೆ ಸಾವಿನ ದಿನ, ಆ ದುಃಖವೇ ಆಯಿತು. ಜನರು ತಂದೆ, ತಾಯಿ ಜತೆಗೆ ಇಡೀ ಕುಟುಂಬವನ್ನೇ ಕಳೆದುಕೊಂಡಿದ್ದಾರೆ. ಇಡೀ ದೇಶದ ಗಮನವೇ ಈಗ ವಯನಾಡು ಮೇಲಿದೆ. ನಾವೆಲ್ಲರೂ ವಯನಾಡು ಪರವಾಗಿ ನಿಲ್ಲೋಣ. ಇದು ಕೇವಲ ವಯನಾಡಿನ ದುರಂತ ಅಲ್ಲ, ರಾಜ್ಯ ಹಾಗೂ ದೇಶದ ದುರಂತವಾಗಿದೆ” ಎಂದು ಭಾವುಕರಾಗಿ ಹೇಳಿದರು
ಇದನ್ನೂ ಓದಿ: Wayanad Landslide: ವಯನಾಡ್ ಅಕ್ಷರಶಃ ಸ್ಮಶಾನ; ಭೂಕುಸಿತ ಸ್ಥಳಕ್ಕೆ ರಾಹುಲ್, ಪ್ರಿಯಾಂಕಾ ಭೇಟಿ ಸ್ಥಗಿತ