Site icon Vistara News

Wayanad Landslide: ವಯನಾಡು ಭೂಕುಸಿತದಲ್ಲಿ ಮೃತರ ಸಂಖ್ಯೆ 402: ಸರ್ವಧರ್ಮ ಪ್ರಾರ್ಥನೆ ಮೂಲಕ ಸಾಮೂಹಿಕ ಶವ ಸಂಸ್ಕಾರ

Wayanad Landslide

ತಿರುವನಂತಪುರಂ: ಕೇರಳ ಮಾತ್ರವಲ್ಲ ದೇಶವನ್ನೇ ಬೆಚ್ಚಿಬೀಳಿಸಿದ್ದ ವಯನಾಡು ಭೂಕುಸಿತ (Wayanad Landslide) ಸಂಭವಿಸಿ ಇಂದಿಗೆ 1 ವಾರ. ಈಗಲೂ ಮೃತದೇಹ ಪತ್ತೆಯಾಗುತ್ತಲೇ ಇದೆ. ಸದ ಪ್ರವಾಸಿಗರಿಂದ ಗಿಜಿಗುಡುತ್ತಿದ್ದ ವಯನಾಡಿನ ಮೇಪ್ಪಾಡಿಯಲ್ಲಿ ಈಗ ಸ್ಮಶಾನ ಮೌನ ಆವರಿಸಿದೆ ಮತ್ತು ಕಣ್ಣೀರಿನ ಕಥೆಗಳೇ ತುಂಬಿಕೊಂಡಿದೆ. ಕಂಡು ಕೇಳರಿಯದ ಈ ಭೀಕರ ದುರಂತದಲ್ಲಿ ಇದುವರೆಗೆ ಮೃತಪಟ್ಟವರ ಸಂಖ್ಯೆ 402ಕ್ಕೆ ಏರಿದ್ದು, ಇನ್ನೂ ನೂರಾರು ಮಂದಿ ಪತ್ತೆಯಾಗಬೇಕಿದೆ. ಇದಕ್ಕಾಗಿ ಕಾರ್ಯಾಚರಣೆ ಮುಂದುವರಿದಿದೆ. ಈ ಮಧ್ಯೆ ಗುರುತು ಸಿಗದ ಮೃತದೇಹಗಳಿಗೆ ಸರ್ವಧರ್ಮ ಪ್ರಾರ್ಥನೆ ಮೂಲಕ ಸಾಮೂಹಿಕವಾಗಿ ಅಂತಿಮ ವಿಧಿ ವಿಧಾನ ನಡೆಸಲಾಗುತ್ತಿದೆ.

ಪುತ್ತುಮಲ ಎಂಬಲ್ಲಿ ಸೋಮವಾರ 29 ಮೃತದೇಹ ಮತ್ತು 154 ದೇಹದ ಭಾಗಗಳ ಅಂತಿಮ ಕ್ರಿಯೆಯನ್ನು ಹಿಂದು, ಕ್ರಿಶ್ಚಿಯನ್‌ ಮತ್ತು ಮುಸ್ಲಿಂ ಧರ್ಮದ ಪ್ರಾರ್ಥನೆ ಬಳಿಕ ನೆರವೇರಿಸಲಾಯಿತು. ಅಪರಾಹ್ನ ಆರಂಭವಾದ ಈ ಪ್ರಕ್ರಿಯೆ ಮಧ್ಯರಾತ್ರಿ ವೇಳೆ ಪೂರ್ತಿಯಾಯಿತು.

ಅವಶೇಷಗಳಡಿ ಸಿಕ್ಕ ಶರೀರದ ಭಾಗಗಳನ್ನೂ ಮೃತದೇಹವೆಂದು ಪರಿಗಣಿಸಿ ಅದಕ್ಕೆ ತಕ್ಕಂತೆ ವಿಧಿ ವಿಧಾನ ನಡೆಸಲಾಯಿತು. ಪ್ರತಿ ಮೃತದೇಹದ ಮುಂಭಾಗದಲ್ಲಿ ಮೊದಲಿಗೆ ಕ್ರಿಶ್ಚಿಯನ್‌ ಬಳಿಕ ಹಿಂದು ಮತ್ತು ಮುಸ್ಲಿಂ ಧರ್ಮದ ಪ್ರಾರ್ಥನೆ ನಡೆಸಿ ನಂತರ ಅಂತ್ಯ ಸಂಸ್ಕಾರ ನಡೆಸಿ ಮಣ್ಣು ಮಾಡಲಾಯಿತು.

ʼʼಮೃತದೇಹದ ಭಾಗಗಳ ಫೋಟೊ, ರಕ್ತದ ಮಾದರಿ, ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸಿ ಇಡಲಾಗುತ್ತಿದೆ. ಭವಿಷ್ಯದಲ್ಲಿ ವಾರಸುದಾರರಿಗೆ ಗುರುತು ಹಿಡಿಯಲು ಸಹಾಯವಾಗುವಂತೆ ಆಲ್ಬಂ ಮಾಡಿ ಇರಿಸಲಾಗುವುದುʼʼ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ʼʼಇದೊಂದು ಭಾವನಾತ್ಮಕ ಕ್ಷಣವಾಗಿತ್ತು. ಮೃತದೇಹದ ಕೆಲವೇ ಭಾಗಗಳು ದೊರೆತ ಹಿನ್ನಲೆಯಲ್ಲಿ ಸರ್ವಧರ್ಮ ಪ್ರಾರ್ಥನೆ ನಡೆಸಿ ಅವರ ಅಂತಿಮ ಸಂಸ್ಕಾರ ನಡೆಸಲಾಗಿದೆʼʼ ಎಂದು ಸ್ಥಳೀಯರು ತಿಳಿಸಿದ್ದಾರೆ. ಆ್ಯಂಬುಲೆನ್ಸ್‌ ಮೂಲಕ ಮೃತದೇಹ ಮತ್ತು ಮೃತದೇಹದ ಭಾಗಗಳನ್ನು ತಂದು ಇದಕ್ಕಾಗಿ ಸಜ್ಜುಗೊಳಿಸಿದ್ದ ಟೇಬಲ್‌ ಮೇಲಿರಿಸಿ ಪ್ರಾರ್ಥನೆ ಸಲ್ಲಿಸುವಾಗ ಸ್ಥಳದಲ್ಲಿದ್ದವರು ಭಾವುಕರಾದರು.

ಅವಘಡ ನಡೆದ ಸ್ಥಳಗಳ ಮಣ್ಣು, ಅವಶೇಷಗಳ ರಾಶಿ ಅಡಿಯಲ್ಲಿ ಸುಮಾರು 180 ಮೃತದೇಹದ ಭಾಗಗಳು ಕಂಡು ಬಂದಿವೆ. ಇನ್ನೂ ಸುಮಾರು 180 ಮಂದಿ ನಾಪತ್ತೆಯಾಗಿದ್ದು ಅವರಿಗಾಗಿ ಹುಡುಕಾಟ ಮುಂದುವರಿದಿದೆ. ಗಾಯಗೊಂಡ 91 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಮಾರು 16 ಕಾಳಜಿ ಕೇಂದ್ರಗಳಲ್ಲಿ 2,514 ಸಂತ್ರಸ್ತರು ಆಶ್ರಯ ಪಡೆದಿದ್ದಾರೆ.

ಇದನ್ನೂ ಓದಿ: Wayanad Landslide: ವಯನಾಡಿಗಾಗಿ ಮಿಡಿಯಿತು ವಿದೇಶಿಗರ ಮನ; ಸಂತ್ರಸ್ತರ ನೆರವಿಗೆ ಧಾವಿಸಿದ ಇಂಗ್ಲೆಂಡ್‌ನ ವಿದ್ಯಾರ್ಥಿನಿಯರು

ಇಂದು ಸೂಜಿಪಾರದಲ್ಲಿ ಹುಡುಕಾಟ ನಡೆಯಲಿದೆ. ಈ ಹಿಂದೆ ಕಾರ್ಯಾಚರಣೆ ನಡೆಸಲು ಸಾಧ್ಯವಾಗದ ಭಾಗಗಳಿಗೆ ತೆರಳಿ ಸ್ವಯಂಸೇವಕರು ಕಾರ್ಯಾಚರಣೆ ನಡೆಸಲಿದ್ದಾರೆ. ಹೆಲಿಕಾಫ್ಟರ್‌ ಮೂಲಕ ರಕ್ಷಣಾ ಸಿಬ್ಬಂದಿ ಇಲ್ಲಿಗೆ ತೆರಳಲಿದ್ದಾರೆ. ತರಬೇತಿ ಪಡೆದ ಇಬ್ಬರು ಅರಣ್ಯ ಇಲಾಖೆ ಸಿಬ್ಬಂದಿ, ನಾಲ್ಕು ಮಂದಿ ಎಸ್‌ಒಜಿ, ಆರು ಮಂದಿ ಸೇನಾ ಸಿಬ್ಬಂದಿಯನ್ನು ಒಳಗೊಂಡ 12 ಮಂದಿಯ ತಂಡ ಪ್ರಯಾಣ ಬೆಳೆಸಲಿದೆ. ಸನ್‌ರೈಸ್‌ ವ್ಯಾಲಿಯ ಸುತ್ತಮುತ್ತ ಶೋಧ ಕಾರ್ಯ ನಡೆಯಲಿದೆ. ಮೃತದೇಹ ಕಂಡು ಬಂದರೆ ಅದನ್ನು ಸಾಗಿಸಲು ವಿಶೇಷ ಹೆಲಿಕಾಫ್ಟರ್‌ ಅನ್ನೂ ಸಜ್ಜುಗೊಳಿದಲಾಗಿದೆ ಎಂದು ಸಚಿವ ಕೆ.ರಾಜನ್‌ ತಿಳಿಸಿದ್ದಾರೆ. ಇದೇ ವೇಳೆ ದುರಂತ ನಡೆದ ಸ್ಥಳದಲ್ಲಿ ಸೇನೆ ತಿಳಿಸುವವರೆಗೆ ಹುಡುಕಾಟ ಮುಂದುವರಿಯಲಿದೆ ಎಂದು ಮೂಲಗಳು ತಿಳಿಸಿವೆ.

Exit mobile version