ತಿರುವನಂತಪುರಂ: ಧಾರಾಕಾರವಾಗಿ ಸುರಿದ ಮಳೆಗೆ ದೇವರನಾಡು ಕೇರಳ ತತ್ತರಿಸಿದ್ದು, ವಯನಾಡಿನಲ್ಲಿ ಭೀಕರ ಭೂಕುಸಿತ ಸಂಭವಿಸಿ 340ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. 200ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದು, ಅವರ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ (Wayanad Landslide). ಈ ದುರಂತಕ್ಕೆ ಮಾನವ ಹಸ್ತಕ್ಷೇಪವೇ ಕಾರಣ ಎಂದು ತಜ್ಞರು ತಿಳಿಸಿದ್ದು, ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ (National Green Tribunal)ಯ ದಕ್ಷಿಣ ಪೀಠವು ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿದೆ. ಪರಿಸರ ಸೂಕ್ಷ್ಮ ಮತ್ತು ಭೂಕುಸಿತದ ಹಾಟ್‌ಸ್ಪಾಟ್‌ಗಳೆಂದು ಕರೆಯಲ್ಪಡುವ ಪಶ್ಚಿಮ ಘಟ್ಟಗಳ ಬೆಟ್ಟದ ಇಳಿಜಾರುಗಳಲ್ಲಿ ಕಾಮಗಾರಿಗಳಿಗೆ ಅವಕಾಶ ನೀಡಿದ್ದಕ್ಕಾಗಿ ಕೇರಳ ಮತ್ತು ತಮಿಳುನಾಡು ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದೆ.
ಎರಡೂ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು, ರಾಜ್ಯ ವಿಪತ್ತು ನಿರ್ವಹಣಾ ಅಧಿಕಾರಿಗಳು, ಕೇರಳದ ವಯನಾಡು ಮತ್ತು ಇಡುಕ್ಕಿ ಹಾಗೂ ತಮಿಳುನಾಡಿನ ನೀಲಗಿರಿ ಮತ್ತು ಕೊಯಮತ್ತೂರು ಜಿಲ್ಲಾಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ.
“ವಯನಾಡು ಭೂಕುಸಿತ ಹೇಗೆ ಸಂಭವಿಸಿತು ಎಂಬ ವಿವರ ಬೇಡ. ಆದರೆ ಇಂತಹ ದುರಂತಗಳು ಮರುಕಳಿಸದಂತೆ ತಡೆಯಲು ಕೈಗೊಂಡ ಕ್ರಮಗಳು ಯಾವುವು ಎಂದು ತಿಳಿಯಲು ನಾವು ಬಯಸುತ್ತೇವೆ” ಎಂದು ನ್ಯಾಯಾಂಗ ಮಂಡಳಿಯ ನ್ಯಾಯಾಧೀಶೆ ಪುಷ್ಪಾ ಸತ್ಯನಾರಾಯಣ ತಿಳಿಸಿದ್ದಾರೆ. ಕೇರಳ ಮತ್ತು ತಮಿಳುನಾಡಿನಲ್ಲಿ ಬೆಟ್ಟದ ಇಳಿಜಾರುಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಹೇಗೆ ಅನುಮತಿ ನೀಡಲಾಗುತ್ತಿದೆ ಎಂದು ನ್ಯಾಯಮಂಡಳಿ ಅಸಮಾಧಾನ ವ್ಯಕ್ತಪಡಿಸಿದೆ.
Major Sita Shelke of the Madras Engineering Group (MEG) of the Indian Army, who led the team to build the bridge in 18 hours for the rescue work in the landslide-hit Wayanad. 🙏🫡 #IndianArmy #WayanadDisaster #WayanadLandslide pic.twitter.com/NCIKdjjTZ3
— Ananth Rupanagudi (@Ananth_IRAS) August 3, 2024
ಭೂಕುಸಿತದಿಂದ ತೀವ್ರವಾಗಿ ಹಾನಿಗೊಳಗಾದ ವಯನಾಡಿನ ಮೆಪ್ಪಾಡಿ ಪ್ರದೇಶದ ಚುರಲ್‌ಮಲ ಮತ್ತು ಮುಂಡಕೈ ಬಂಡೆಯಂತದ ಗಟ್ಟಿಯಾದ ನೆಲದ ಮೇಲೆ ರೂಪುಗೊಂಡಿಲ್ಲ. ಬದಲಾಗಿ ಮೆದುವಾದ ಮಣ್ಣನ್ನು ಹೊಂದಿದೆ. ಇಲ್ಲಿರುವುದು ಕೆಂಪು ಮಣ್ಣು. ಆದರೂ ಇಲ್ಲಿ ಅಷ್ಟೊಂದು ಕಟ್ಟಡಗಳು ಏಕೆ ಇವೆ? ಇದಕ್ಕೆ ನಮಗೆ ಉತ್ತರ ಬೇಕು ಎಂದು ನ್ಯಾಯಪೀಠ ಹೇಳಿದೆ.
ಪರಿಸರ ತಜ್ಞ ಮಾಧವ್ ಗಾಡ್ಗೀಳ್ ನೇತೃತ್ವದ ಪಶ್ಚಿಮ ಘಟ್ಟಗಳ ಪರಿಸರ ತಜ್ಞರ ಸಮಿತಿಯು ಭೂಕುಸಿತ ಸಂಭವಿಸಿದ ವಯನಾಡು ಜಿಲ್ಲೆಯ ವೈತಿರಿ ತಾಲೂಕನ್ನು ಪರಿಸರ ಸೂಕ್ಷ್ಮ ವಲಯ -1 ಎಂದು ಸೂಚಿಸಿದೆ. ಅಂದರೆ ಇಲ್ಲಿ ಭೂಮಿಗೆ ಹಾನಿಯಾಗುವ ಯಾವುದೇ ಚಟುವಟಿಕೆ ನಡೆಯಬಾರದು ಎಂದು ಈ ಹಿಂದೆಯೇ ತಿಳಿಸಿದೆ ಎಂದು ನ್ಯಾಯಪೀಠ ತನ್ನ ನೋಟಿಸ್‌ನಲ್ಲಿ ಉಲ್ಲೇಖಿಸಿದೆ.
ತಮಿಳುನಾಡಿಗೂ ಚಾಟಿ
ಕೇರಳದ ಜತೆಗೆ ತಮಿಳುನಾಡಿಗೂ ಚಾಟಿ ಬೀಸಿದ ನ್ಯಾಯಪೀಠ, ಗಿರಿಧಾಮಗಳಲ್ಲಿ ಕಟ್ಟಡಗಳ ನಿರ್ಮಾಣವನ್ನು ನಿರ್ಬಂಧಿಸುವ ತಮಿಳುನಾಡು ಜಿಲ್ಲಾ ಪುರಸಭೆಗಳ ಕಾಯ್ದೆ, 1920ರ ಚಾಪ್ಟರ್ 10 ಎ ಅನ್ನು ತಮಿಳುನಾಡು ಕಟ್ಟುನಿಟ್ಟಾಗಿ ಅನುಸರಿಸುತ್ತಿದೆಯೇ? ಎಂದು ಪ್ರಶ್ನಿಸಿದೆ. “ತಮಿಳುನಾಡಿನಲ್ಲಿ ಚಾಪ್ಟರ್ 10 ಎ ಅನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತಿದೆಯೇ ಮತ್ತು ಕೇರಳದಲ್ಲಿ ಅಂತಹ ಯಾವುದಾದರೂ ನಿಯಮಗಳಿವೆಯೇ ಎಂದು ತಿಳಿಯಲು ಬಯಸುತ್ತೇವೆ. ಆ ವಿವರಗಳನ್ನು ಒದಗಿಸಿ” ಎಂದು ನ್ಯಾಯಪೀಠ ಕೇರಳ ಮತ್ತು ತಮಿಳುನಾಡಿಗೆ ಸೂಚಿಸಿದೆ.
ತಮಿಳುನಾಡಿನ ನೀಲಗಿರಿ ಮತ್ತು ವಾಲ್ಪಾರೈನಲ್ಲಿ ಅಣಬೆಗಳಂತೆ ಬೆಳೆಯುತ್ತಿರುವ ರೆಸಾರ್ಟ್‌ಗಳ ಬಗ್ಗೆ ನ್ಯಾಯ ಮಂಡಳೀ ತೀವ್ರ ಕಳವಳ ವ್ಯಕ್ತಪಡಿಸಿದೆ. ʼʼಖಾಸಗಿಯವರಿಗೆ ರೆಸಾರ್ಟ್ ನಿರ್ಮಿಸಲು ಅವಕಾಶ ನೀಡಿ ಮುಗ್ಧ ಜನರ ಜೀವಕ್ಕೆ ಅಪಾಯವನ್ನುಂಟು ಮಾಡುವ ಚಟುವಟಿಕೆಯನ್ನು ಪ್ರವಾಸೋದ್ಯಮ ಇಲಾಖೆಗೆ ಏಕೆ ನಿಯಂತ್ರಿಸುತ್ತಿಲ್ಲ?ʼʼ ಎಂದು ನ್ಯಾಯಮೂರ್ತಿ ಪುಷ್ಪಾ ಸತ್ಯನಾರಾಯಣ ಪ್ರಶ್ನಿಸಿದರು. ʼʼಭೂಕುಸಿತ ಪೀಡಿತ ಪ್ರದೇಶಗಳಲ್ಲಿ ಇನ್ನು ಮುಂದೆ ಯಾವುದೇ ನಿರ್ಮಾಣವನ್ನು ಮಾಡಬಾರದುʼʼ ಎಂದು ಕಟ್ಟುನಿಟ್ಟಾಗಿ ಸೂಚಿಸಿದರು.
ಇದನ್ನೂ ಓದಿ: Wayanad Landslide: ವಯನಾಡ್‌ನಲ್ಲಿ ಕರ್ತವ್ಯಪರತೆ ಮೆರೆದ ಕನ್ನಡತಿ ಜಿಲ್ಲಾಧಿಕಾರಿ, ಭೂಕುಸಿತ ಸ್ಥಳದಲ್ಲೇ ಮೊಕ್ಕಾಂ