Site icon Vistara News

Wayanad Landslide: ವಯನಾಡು ದುರಂತದಲ್ಲಿ ಮೃತರ ಸಂಖ್ಯೆ 344ಕ್ಕೆ ಏರಿಕೆ; ರಾಡಾರ್‌ಗೆ ಸಿಕ್ಕ ನಿಗೂಢ ಉಸಿರಾಟ ಯಾರದ್ದು?

Wayanad Landslide

ತಿರುವನಂತಪುರಂ: ಕಂಡು ಕೇಳರಿಯದ ಭುಕುಸಿತಕ್ಕೆ ಕೇರಳ ಸಾಕ್ಷಿಯಾಗಿದ್ದು, ವಯನಾಡಿನ ದುರಂತದಲ್ಲಿ ಮೃತರ ಸಂಖ್ಯೆ 344ಕ್ಕೆ ಏರಿಕೆಯಾಗಿದೆ (Wayanad Landslide). ಇನ್ನೂ ಪತ್ತೆಯಾಗದ 100ಕ್ಕೂ ಹೆಚ್ಚು ಮಂದಿಯ ಹುಡುಕಾಟಕ್ಕೆ ಕಾರ್ಯಾಚರಣೆ ಮುಂದುವರಿದ್ದಿದ್ದು, 5ನೇ ದಿನಕ್ಕೆ ಕಾಲಿಟ್ಟಿದೆ. ಅತ್ಯಾಧುನಿಕ ಉಪಕರಣಗಳನ್ನು ಬಳಸಿ ಅವಶೇಷಗಳಡಿ ಸಿಲುಕಿರುವವರನ್ನು ಪತ್ತೆ ಹಚ್ಚಲಾಗುತ್ತಿದೆ. ಈ ಮಧ್ಯೆ ಸುಧಾರಿತ ರಾಡಾರ್‌ (Advanced radar system)ಗೆ ಶುಕ್ರವಾರ ಸಂಜೆ ಅವಶೇಷವೊಂದರ ಅಡಿಯಿಂದ ಉಸಿರಾಟದ ಸೂಚನೆ ಸಿಕ್ಕಿದ್ದು, ಹಲವು ಗಂಟೆಗಳ ಹುಟುಕಾಟದ ಬಳಿಕ ಯಾರೂ ಪತ್ತೆಯಾಗದ ಹಿನ್ನಲೆಯಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಯಿತು.

ಅತೀ ಹೆಚ್ಚು ಹಾನಿಗೊಳಗಾದ ವಯನಾಡಿನ ಮುಂಡಕೈಯಲ್ಲಿ ಇದೀಗ ರಾಡಾರ್‌ ಬಳಸಿ ಕಾರ್ಯಾಚರಣೆ ನಡೆಸಲಾಗುತ್ತದೆ. ಈ ವೇಳೆ ಶುಕ್ರವಾರ ಮನೆಯೊಂದರ ಅವಶೇಷಗಳಡಿಯಿಂದ ಯಾರೋ ಉಸಿರಾಡುವಂತೆ ರಾಡಾರ್‌ಗೆ ಸೂಚನೆ ಸಿಕ್ಕಿತ್ತು.

ಭರವಸೆಯ ಬೆಳಕು

ಎಲ್ಲೆಡೆ ಮೃತದೇಹ ಪತ್ತೆಯಾಗುತ್ತಿರುವ ಮಧ್ಯೆ ಉಸಿರಾಟದ ಸೂಚನೆ ಭರವಸೆಯ ಬೆಳಕಾಗಿ ಪರಿಣಮಿಸಿತ್ತು. ರಕ್ಷಣಾ ಕಾರ್ಯಕರ್ತರು ಆರಂಭದಲ್ಲಿ ಸಂಭಾವ್ಯ ಉಸಿರಾಟವನ್ನು ಸೂಚಿಸುವ ಸಂಕೇತವನ್ನು ಪತ್ತೆಹಚ್ಚಿದ್ದರು. ಅದು ಮನುಷ್ಯ ಅಥವಾ ಪ್ರಾಣಿಯಿಂದ ಬಂದಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದರು. ಈ ಮಧ್ಯೆ ತಂಡದಲ್ಲಿದ್ದ ಕೇರಳದ ಅಧಿಕಾರಿಯೊಬ್ಬರು ಇದು ಮನುಷ್ಯರ ಉಸಿರಾಟದಂತಿದೆ ಎಂದು ಹೇಳಿದ್ದರಿಂದ ಮುಖ್ಯಮಂತ್ರಿ ಕಚೇರಿಯ ಸೂಚನೆಯಂತೆ ರಾತ್ರಿ ಅವಶೇಷಗಳಡಿ ಹುಡುಕಾಟ ನಡೆಸಲಾಯಿತು. ಹಲವು ಗಂಟೆಗಳ ಕಾರ್ಯಾಚರಣೆಯ ಬಳಿಕ ಯಾರೂ ಪತ್ತೆಯಾಗಲಿಲ್ಲ. ಈ ಸಂಕೇತವು ಹಾವು ಅಥವಾ ಕಪ್ಪೆಯಿಂದ ಬಂದಿರಬಹುದು ಎಂದು ಅಧಿಕಾರಿಗಳು ದೃಢಪಡಿಸಿದ ಬಳಿಕ ಕಾರ್ಯಾಚರಣೆ ಸ್ಥಗಿತಗೊಳಿಸಲಾಯಿತು.

ಪತ್ತೆಯಾಗಿದ್ದು ಎಲ್ಲಿ?

ಸ್ಥಳೀಯ ನಿವಾಸಿಗಳ ಪ್ರಕಾರ ಕುಸಿದ ಮನೆಯೊಂದರ ಅಡುಗೆ ಕೋಣೆ ಮತ್ತು ಸ್ಟೋರ್ ರೂಮ್ ಇರುವ ಪ್ರದೇಶದಲ್ಲಿ ಸಿಗ್ನಲ್ ಪತ್ತೆಯಾಗಿದೆ. ಸಿಗ್ನಲ್ ಆಧಾರದ ಮೇಲೆ ಸ್ಥಳದಲ್ಲಿದ್ದ ಮಣ್ಣು, ಕಲ್ಲು ಬಂಡೆ, ಇತರ ಅವಶೇಷಗಳನ್ನು ಸರಿಸಲಾಯಿತು. ಕಟ್ಟಡದ ಅವಶೇಷಗಳು ಕೆಸರು ಮಣ್ಣಿನ ಕೆಳಗೆ ಸುಮಾರು ಎರಡರಿಂದ ಮೂರು ಮೀಟರ್‌ಗಳಷ್ಟು ಹೂತು ಹೋಗಿದ್ದು, ಸಂಕೇತವು ಮನುಷ್ಯನಿಂದ ಬಂದಿದೆಯೇ ಅಥವಾ ಪ್ರಾಣಿಯಿಂದ ಬಂದಿದೆಯೇ ಎಂದು ನಿರ್ಧರಿಸುವುದು ಕಷ್ಟವಾಗಿತ್ತು. ಹೀಗಾಗಿ ರಾತ್ರಿಯಾಗಿದ್ದರೂ ಬೆಳಕಿನ ವ್ಯವಸ್ಥೆ ಸಜ್ಜುಗೊಳಿಸಿ ಕಾರ್ಯಾಚರಣೆ ನಡೆಸಲಾಯಿತು.

ಇದಕ್ಕೂ ಮುನ್ನ ಶೋಧ ಕಾರ್ಯಾಚರಣೆಯ ಸಮಯದಲ್ಲಿ ನಾಲ್ಕು ಜನರು ಜೀವಂತವಾಗಿ ಪತ್ತೆಯಾಗಿದ್ದು ಇನ್ನಷ್ಟು ಭರವಸೆ ನೀಡಿತ್ತು. ಆದರೆ ಕೊನೆಗೆ ಆ ಭರವಸೆ ಜಾಗದಲ್ಲಿ ನಿರಾಸೆ ಮನೆ ಮಾಡಿದೆ.

ಭಾರಿ ಮಳೆ ಮತ್ತು ಹವಾಮಾನ ವೈಪರೀತ್ಯಗಳ ನಡುವೆಯೂ 40 ರಕ್ಷಣಾ ತಂಡಗಳು ತಮ್ಮ ಶೋಧ ಕಾರ್ಯಾಚರಣೆಯನ್ನು ಮುಂದುವರಿಸಿವೆ. ಸುಮಾರು 2 ಸಾವಿರ ಮಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಸೇನೆ, ಎನ್‌ಆರ್‌ಎಫ್‌, ಡಿಎಸ್‌ಜಿ, ಕೋಸ್ಟ್ ಗಾರ್ಡ್, ನೌಕಾಪಡೆ ಮತ್ತು ಎಂಇಜಿ ಸಿಬ್ಬಂದಿ, ಸ್ಥಳೀಯರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ವಿವಿಧ ಭಾಗಗಳಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ರಾಡಾರ್‌ ಅಲ್ಲದೆ ಡ್ರೋನ್‌, ಜಿಪಿಎಸ್‌ ಮುಂತಾದ ಅತ್ಯಾಧುನಿಕ ಉಪಕರಣಗಳನ್ನು ಬಳಸಲಾಗುತ್ತಿದೆ.

ಇದನ್ನೂ ಓದಿ: Wayanad Tragedy: ಇಡೀ ಊರು ಭೂಕುಸಿತದಿಂದ ನಾಶ; ಮೂರು ದಿನ ಬಳಿಕ ಒಂದೇ ಕುಟುಂಬದ ನಾಲ್ವರು ಜೀವಂತವಾಗಿ ಪತ್ತೆ!

Exit mobile version