Site icon Vistara News

Wayanad Landslide: ವಯನಾಡ್‌ ಅಕ್ಷರಶಃ ಸ್ಮಶಾನ; ಭೂಕುಸಿತ ಸ್ಥಳಕ್ಕೆ ರಾಹುಲ್‌, ಪ್ರಿಯಾಂಕಾ ಭೇಟಿ ಸ್ಥಗಿತ

wayanad landslide

ವಯನಾಡ್‌: ಭೀಕರ ಭೂಕುಸಿತದಿಂದ ಕೇರಳದ ವಯನಾಡ್‌(Wayanad landslide) ಅಕ್ಷರಶಃ ಸ್ಮಶಾನದಂತಾಗಿದೆ. ಸುಮಾರು 400ಕ್ಕೂ ಹೆಚ್ಚು ಕುಟುಂಬಗಳು ಭೂಕುಸಿತ ಭೀಕರತೆಗೆ ಸಿಲುಕಿ ಕ್ಷಣ ಕ್ಷಣಕ್ಕೂ ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಕಣ್ಮರೆಯಾಗಿರುವವರ ಶೋಧ ಕಾರ್ಯ ನಿರಂತರವಾಗಿ ನಡೆಯುತ್ತಲೇ ಇದೆ. ಈ ಹಿನ್ನೆಲೆ ದುರಂತ ಸ್ಥಳಕ್ಕೆ ಇಂದು ಭೇಟಿ ನೀಡಲು ನಿರ್ಧರಿಸಿದ್ದ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ(Rahul Gandhi) ಮತ್ತು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾಧ್ರಾ(Priyanka Gandhi Vadra) ಅವರು ತಮ್ಮ ಭೇಟಿಯನ್ನು ಸ್ಥಗಿತಗೊಳಿಸಿದ್ದಾರೆ.

ಪ್ರತಿಕೂಲ ವಾತಾವರಣದಿಂದಾಗಿ ಇವರಿಬ್ಬರ ಭೇಟಿಗೆ ಅಧಿಕಾರಿಗಳು ಅಡ್ಡಿಪಡಿಸಿದ್ದು, ಅವರ ಭೇಟಿಯನ್ನು ಸ್ಥಗಿತಗೊಳಿಸಲಾಗಿದೆ. ಇನ್ನು ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿರುವ ರಾಹುಲ್‌, ಭೂಕುಸಿತದಿಂದ ಹಾನಿಗೊಳಗಾದ ಕುಟುಂಬಗಳನ್ನು ಭೇಟಿ ಮಾಡಲು ಮತ್ತು ಪರಿಸ್ಥಿತಿಯನ್ನು ಅವಲೋಕಿಸಲು ಪ್ರಿಯಾಂಕಾ ಮತ್ತು ನಾನು ನಾಳೆ ವಯನಾಡ್‌ಗೆ ಭೇಟಿ ನೀಡಲು ನಿರ್ಥರಿಸಿದ್ದೆವು. ಆದಾಗ್ಯೂ, ನಿರಂತರ ಮಳೆ ಮತ್ತು ಪ್ರತಿಕೂಲ ಹವಾಮಾನದ ಕಾರಣ, ನಾವು ಭೇಟಿ ನೀಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ನಮಗೆ ತಿಳಿಸಿದ್ದಾರೆ. ಆದರೂ ಶೀಘ್ರದಲ್ಲೇ ಜಿಲ್ಲೆಗೆ ಭೇಟಿ ನೀಡಿ ಅಲ್ಲಿನ ಜನರನ್ನು ಭೇಟಿಯಾಗಲಿದ್ದೇನೆ ಎಂದಿದ್ದಾರೆ.

ಇದರ ಬೆನ್ನಲ್ಲೇ ಪ್ರಿಯಾಂಕಾ ಗಾಂಧಿ ಪೋಸ್ಟ್‌ ಕೂಡ ಮಾಡಿದ್ದು, ವಯನಾಡ್‌ನಲ್ಲಿರುವ ನನ್ನ ಸಹೋದರ ಸಹೋದರಿಯರೇ, ನಾವು ನಾಳೆ ವಯನಾಡಿಗೆ ಬರಲು ಸಾಧ್ಯವಾಗದಿದ್ದರೂ, ಈ ದುರಂತ ಸಮಯದಲ್ಲಿ ನಮ್ಮ ಹೃದಯವು ನಿಮ್ಮೊಂದಿಗಿದೆ ಮತ್ತು ನಾವು ನಿಮ್ಮೆಲ್ಲರಿಗಾಗಿ ಪ್ರಾರ್ಥಿಸುತ್ತಿದ್ದೇವೆ ಎಂದು ಪೋಸ್ಟ್‌ ಮಾಡಿದ್ದಾರೆ.

ವಯನಾಡು ದುರಂತದಲ್ಲಿ ಪ್ರಸ್ತುತ ಸಾವಿನ ಸಂಖ್ಯೆ 143ಕ್ಕೆ ಏರಿಕೆ ಆಗಿದ್ದು, ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಇನ್ನು ವಯನಾಡಿನಲ್ಲಿ 13ಕನ್ನಡಿಗರೂ ನಾಪತ್ತೆಯಾಗಿದ್ದು, ನಾಲ್ವರ ಶವ ಪತ್ತೆ ಪತ್ತೆಯಾಗಿದೆ.

ಇದನ್ನೂ ಓದಿ: Wayanad Landslide: ವೈನಾಡ್‌ ಭೂಕುಸಿತದಲ್ಲಿ 13 ಕನ್ನಡಿಗರು ನಾಪತ್ತೆ; ನಾಲ್ವರ ಶವ ಪತ್ತೆ, ಇನ್ನುಳಿದವರಿಗಾಗಿ ಶೋಧ

Exit mobile version