ತಿರುವನಂತಪುರಂ: ಭಾರಿ ಮಳೆಯ ಹೊಡೆತಕ್ಕೆ ಸಿಲುಕಿ ದೇವರನಾಡು ಕೇರಳ ಅಕ್ಷರಶಃ ಕಂಗಾಲಾಗಿದೆ. ವಯನಾಡಿನಲ್ಲಿ ಮಂಗಳವಾರ ಸಂಭವಿಸಿದ ಭೀಕರ ಭೂಕುಸಿತದಿಂದ ಮೃತಪಟ್ಟವರ ಸಂಖ್ಯೆ 168ಕ್ಕೆ ಏರಿಕೆಯಾಗಿದ್ದು, ನೂರಾರು ಮಂದಿ ನಾಪತ್ತೆಯಾಗಿದ್ದಾರೆ. ಮನೆ, ಶಾಲೆ, ವಾಹನ ಎಲ್ಲವೂ ಕೊಚ್ಚಿಕೊಂಡು ಹೋಗಿದೆ. ಸೇನಾ ಸಿಬ್ಬಂದಿ ಸೇರಿದಂತೆ ಹಲವರು ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ. ಈ ಮಧ್ಯೆ ಬೆಚ್ಚಿ ಬೀಳಿಸುವ ಮಾಹಿತಿಯೊಂದು ಹೊರ ಬಿದ್ದಿದ್ದು, ಮುಂಡಕೈ ಗ್ರಾಮವೇ ನಾಮಾವಶೇಷವಾಗಿದೆ! ಇಲ್ಲಿದ್ದ 400 ಮನೆಗಳ ಪೈಕಿ ಉಳಿದಿರುವುದು 30 ಮಾತ್ರ! (Wayanad Landslide).
ಭೂಕುಸಿತದಿಂದ ಅತೀ ಹೆಚ್ಚು ತೊಂದರೆಗೊಳಗಾದ ಮುಂಡಕೈಯಲ್ಲಿನ ಪರಿಸ್ಥಿತಿ ಶೋಚನೀಯವಾಗಿ ಮುಂದುವರಿದಿದೆ. ʼʼಈ ಗ್ರಾಮದಲ್ಲಿದ್ದ ಸುಮಾರು 400 ಮನೆಗಳ ಪೈಕಿ ಬಾಕಿ ಉಳಿದಿರುವುದು 30 ಮನೆ ಮಾತ್ರʼʼ ಎಂದು ಪಂಚಾಯತ್ ಮೂಲಗಳು ತಿಳಿಸಿವೆ.
Deeply saddened by the massive landslide in Mundakkai, Wayanad district. 43 lives lost as per the latest news. My deepest condolences to those who lost loved ones and homes. Please, everyone, stay safe and move to safer places if you can.#wayanad #landslide pic.twitter.com/K6c5OGRoic
— Anandd (@Anandd7_) July 30, 2024
ಇಲ್ಲಿನ ರಕ್ಷಣಾ ಕಾರ್ಯಾಚರಣೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಬೈಲಿ ಸೇತುವೆ ನಿರ್ಮಿಸಲು ಸೇನೆ ಯೋಜನೆ ರೂಪಿಸಿದ್ದು, ಅದಕ್ಕಾಗಿ ಸಾಮಗ್ರಿಗಳನ್ನು ಹೊತ್ತ ವಿಶೇಷ ವಿಮಾನ ಕಣ್ಣೂರು ವಿಮಾನ ನಿಲ್ದಾಣಕ್ಕೆ ತಲುಪಿದೆ. 18 ಲಾರಿಗಳ ಮೂಲಕ ಇದನ್ನು ಮುಂಡಕೈಗೆ ತಲುಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ʼʼಬೈಲಿ ಸೇತುವೆ ನಿರ್ಮಾಣದಿಂದ ಸಂತ್ರಸ್ತರ ರಕ್ಷಣಾ ಕಾರ್ಯಾಚರಣೆಗೆ ಇನ್ನಷ್ಟು ವೇಗ ಸಿಗಲಿದೆʼʼ ಎಂದು ಸಚಿವ ಕೆ.ರಾಜನ್ ತಿಳಿಸಿದ್ದಾರೆ. ಜತೆಗೆ ಸೇನೆಯ 3 ಯೂನಿಟ್ ಮತ್ತು ಡಾಗ್ ಸ್ಕ್ವಾಡ್ ಕೂಡ ಸ್ಥಳಕ್ಕೆ ಆಗಮಿಸಲಿದೆ ಎಂದು ಅವರ ಹೇಳಿದ್ದಾರೆ.
ಜತೆಗೆ ದುರಂತ ನಿವಾರಣೆಗಾಗಿ ಇರುವ ಸ್ಥಳೀಯ ಸಂಸ್ಥೆಗಳ ಫಂಡ್ ಉಪಯೋಗಿಸಲೂ ಅನುಮತಿ ನೀಡಲಾಗಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಇಂದು ದುರಂತ ಪೀಡಿತ ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಇವರಲ್ಲದೆ ಸುಮಾರು 6 ಸಚಿವರು ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದು, ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ. ಅಗತ್ಯವಿರುವ ಎಲ್ಲ ನೆರವು ನೀಡಿವುದಾಗಿ ರಾಜ್ಯಪಾಲರು ಘೋಷಿಸಿದ್ದಾರೆ. ಅದೇ ರೀತಿ ದೇಶದ ಎಲ್ಲ ಭಾಗಗಳಿಂದಲೂ ಸಹಾಯಹಸ್ತ ದೊರೆಯುವ ವಿಶ್ವಾಸವಿದೆ ಎಂದಿದ್ದಾರೆ. ಮುಖ್ಯಮಂತ್ರಿ ಹೇಳಿದಂತೆ 2018 ಮತ್ತು 2019ರ ದುರಂತದಿಂದ ಪಾರಾದಂತೆ ಈ ಅವಘಡದಿಂದಲೂ ಕೇರಳ ಚೇತರಿಸಿಕೊಳ್ಳಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
123 ಮೃತದೇಹಗಳ ಪೋಸ್ಟ್‌ಮಾರ್ಟಂ ಪೂರ್ಣ
ಮೃತಪಟ್ಟವರ ಪೈಕಿ 75 ಮಂದಿಯ ಗುರುತು ಪತ್ತೆಯಾಗಿದೆ. ಸುಮಾರು 123 ಮೃತದೇಹಗಳ ಪೋಸ್ಟ್‌ಮಾರ್ಟಂ ಪೂರ್ತಿಯಾಗಿದ್ದು, ಸಾಮೂಹಿಕವಾಗಿ ಶವ ಶಂಸ್ಕಾರ ನಡೆಸಲಾಗಿದೆ. ನೀರಿನಲ್ಲಿ ಕೊಚ್ಚಿ ಹೋಗಿ ಮಲಪ್ಪುರಂನಲ್ಲಿ ಪತ್ತೆಯಾದ ಮೃತದೇಹವನ್ನು ವಯನಾಡಿಗೆ ಸಾಗಿಸಲಾಗವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಚಿವೆ ಸಂಚರಿಸುತ್ತಿದ್ದ ಕಾರು ಅಪಘಾತ
ವಯನಾಡಿಗೆ ತೆರಳುತ್ತಿದ್ದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರ ಕಾರು ಮಲಪ್ಪುರಂನಲ್ಲಿ ಇಂದು ಬೆಳಿಗ್ಗೆ ಅಪಘಾತಕ್ಕೀಡಾಗಿದೆ. ಮಂಜೇರಿ ಎಂಬಲ್ಲಿ ದ್ವಿಚಕ್ರ ವಾಹನಕ್ಕೆ ಸಚಿವೆ ಸಂಚರಿಸುತ್ತಿದ್ದ ಕಾರು ಡಿಕ್ಕಿ ಹೊಡೆದು ಅವಘಡ ನಡೆದಿದ್ದು, ಅವರು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಸದ್ಯ ಅವರನ್ನು ಮಂಜೇರಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ. ದ್ವಿಚಕ್ರ ವಾಹನ ಸವಾರನಿಗೂ ಗಾಯಗಳಾಗಿವೆ.
ಇದನ್ನೂ ಓದಿ: Wayanad Landslide: ವಯನಾಡ್ ಅಕ್ಷರಶಃ ಸ್ಮಶಾನ; ಭೂಕುಸಿತ ಸ್ಥಳಕ್ಕೆ ರಾಹುಲ್, ಪ್ರಿಯಾಂಕಾ ಭೇಟಿ ಸ್ಥಗಿತ